ಬೆಂಗಳೂರು ಮೇ, 28,2026 (www.justkannada.in): 2026ನೇ ಸಾಲಿನ ವಿ.ಪಿ.ಸಿಂಗ್ ಮತ್ತು ಕರ್ಪೂರಿ ಠಾಕೂರ್ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಅತ್ಯುನ್ನತ ಗೌರವಗಳಲ್ಲಿ ಒಂದಾದ ವಿ.ಪಿ.ಸಿಂಗ್ ಪ್ರಶಸ್ತಿ ಮತ್ತು ಕರ್ಪೂರಿ ಠಾಕೂರ್ ಪ್ರಶಸ್ತಿಗಳನ್ನು ಘೋಷಿಸಿದೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಗೌರವಾಧ್ಯಕ್ಷ ಎಂ.ಎಸ್.ಮಣಿ, ರಾಜ್ಯಾಧ್ಯಕ್ಷ ಗಂಧರ್ವ ಸೇನಾ, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಹಾಲಗಳಲೆ, ಈ ಬಾರಿ ವಿ.ಪಿ.ಸಿಂಗ್ ಪ್ರಶಸ್ತಿಗೆ 7 ಮಂದಿ , ಕರ್ಪೂರಿ ಠಾಕೂರ್ ಪುರಸ್ಕಾರಕ್ಕೆ7 ಮಂದಿ ಭಾಜನರಾಗಿದ್ದಾರೆ. ಸಾಮಾಜಿಕ, ಆರೋಗ್ಯ, ಶಿಕ್ಷಣ ಮತ್ತು ಸಮುದಾಯ ಸೇವೆಯಂತಹ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದವರಿಗೆ ವಿ.ಪಿ.ಸಿಂಗ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಿ.ಪಿ.ಸಿಂಗ್ ಪ್ರಶಸ್ತಿಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ದಿನೇಶ್, ಸ್ಪರ್ಶ ಆಸ್ಪತ್ರೆಯ ತಜ್ಞವೈದ್ಯ ಡಾ.ನಾಗೇಶ್ ಬಸವರಾಜ, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ.ಶಶಿಭೂಷಣ್, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ, ಹಿರಿಯ ಪತ್ರಕರ್ತರಾದ ರಾಜು ಕಂಬಾರ, ಕೆ.ಎಸ್.ಸೋಮಣ್ಣ, ಸಮಾಜಸೇವಕ ಲಕ್ಷ್ಮೀನಾರಾಯಣ ಅವರುಗಳು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ಪೂರಿ ಠಾಕೂರ್ ಪ್ರಶಸ್ತಿಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಸಿದ್ದರಾಜು, ಬೆಂಗಳೂರು ಉತ್ತರ ವಿ.ವಿ. ಉಪಕುಲಪತಿ ಪ್ರೊ. ಬಿ.ಕೆ. ರವಿ, ಹಿರಿಯ ಪತ್ರಕರ್ತರುಗಳಾದ ಲಕ್ಷ್ಮಣ ಕೊಡಸೆ, ಗಂಗಾಧರ ಮೊದಲಿಯಾರ್, ಐ.ಎಚ್.ಸಂಗಮದೇವ ಹಾಗೂ ರವಿ ಬಿದನೂರ ಅವರುಗಳು ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷವಾಗಿ “ದೇವಮ್ಮ” ಪ್ರಶಸ್ತಿಗೆ ಪತ್ರಕರ್ತೆ ಮಿನಿ ತೇಜಸ್ವಿ ಅವರು ಆಯ್ಕೆಯಾಗಿದ್ದಾರೆ, ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದ್ದು ಸದ್ಯದಲ್ಲೆ ದಿನಾಂಕ ಪ್ರಕಟಿಸಲಾಗುವುದು ಎಂದು ಸಂಘದ ಗೌರವಾಧ್ಯಕ್ಷ ಎಂ.ಎಸ್.ಮಣಿ ಪ್ರಕಟಣೆಯಲ್ಲಿ ತಿಳಿಸಿದರು.
Key words: VP Singh and Karpuri Thakur, awardees, List, published







