ಅಂಗಡಿ ಮಳಿಗೆಗಳ‌ ನಾಮಫಲಕಗಳಲ್ಲಿ ಕನ್ನಡ ಬಳಕೆಗೆ ಅಭಿಯಾನ: ಅಪರ ಜಿಲ್ಲಾಧಿಕಾರಿ

ಮೈಸೂರು, ಮೇ,18,2026 (www.justkannada.in): ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮೈಸೂರು ನಗರದ ಆಯ್ದ ರಸ್ತೆಗಳಲ್ಲಿ ಇರುವ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಬಳಕೆ ಮಾಡುವ ಬಗ್ಗೆ ಅಭಿಯಾನ ನಡೆಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಆರ್ ಐಶ್ವರ್ಯ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಸರ್ಕಾರದ ಭಾಷಾ ನೀತಿ ಅನುಷ್ಠಾನದಲ್ಲಿ ಜನರು ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ಮೈಸೂರು ಜಿಲ್ಲೆಯಲ್ಲಿ ಕನ್ನಡ ಜಾಗೃತಿ ಸಮಿತಿಗೆ ಆಯ್ಕೆ ಮಾಡಿರುವ ಸದಸ್ಯರೊಂದಿಗೆ ಸಭೆ ನಡೆಸಿ ಅಪರ ಜಿಲ್ಲಾಧಿಕಾರಿ ಆರ್ ಐಶ್ವರ್ಯ ಮಾತನಾಡಿದರು.  ಕನ್ನಡ ನಮ್ಮ ಮಾತೃ ಭಾಷೆ, ಕನ್ನಡ ಭಾಷೆಯನ್ನು ಗೌರವಿಸಿ ಹೆಚ್ಚು ಬಳಕೆ ಮಾಡುವುದನ್ನು ನಾಡಿನ ಜನತೆಯಾದ ನಾವು ಬೆಳಸಿಕೊಳ್ಳಬೇಕು ಎಂದರು.

ಕನ್ನಡ ಭಾಷೆಯ ಬಳಕೆಯನ್ನು‌ ಜನರಲ್ಲಿ ಹೆಚ್ಚು‌ ಮಾಡಲು ಕನ್ನಡಕ್ಕಾಗಿ ಓಟ ಸೇರಿದಂತೆ ‌ವಿವಿಧ ಕಾರ್ಯಕ್ರಮಗಳನ್ನು‌ ಕನ್ನಡ ‌ಜಾಗೃತಿ‌ ಸಮಿತಿ‌ ಸದಸ್ಯರೊಂದಿಗೆ ಸಂಘಟಿಸಿ ಆಯೋಜಿಸಿ ಎಂದರು.

ಕನ್ನಡ ಭಾಷೆಗೆ ಸಂಬಂಧಿಸಿದಂತೆ ಇಂದು ನಡೆದ ಸಭೆಯಲ್ಲಿ ಬಹಳಷ್ಟು ಇಲಾಖೆಯವರು ಗೈರು ಹಾಜರಾಗಿದ್ದು, ಮುಂದಿನ ಸಭೆಗೆ ಗೈರುಹಾಜರಾದಲ್ಲಿ ನೋಟೀಸ್ ಜಾರಿ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸಂಚಾರಿ ನಿಯಮಗಳ ಫಲಕಗಳಲ್ಲಿ ಒಂದು ಬದಿಯಲ್ಲಾದ್ದರೂ ಕನ್ನಡ ಭಾಷೆಯನ್ನು ಬಳಕೆ ಮಾಡಬೇಕು. ಕನ್ನಡಪರ ಹೋರಾಟ ನಡೆದಾಗ ಪೊಲೀಸ್ ಇಲಾಖೆಯಿಂದ ದೂರು ದಾಖಲಿಸುವ ಸಂದರ್ಭ ಎದುರಾದಲ್ಲಿ ಕನ್ನಡ ಪರ ಹೋರಾಟದ ಸಂದರ್ಭ ಎಂದು ಉದ್ದೇಶವನ್ನು ದೂರಿನಲ್ಲಿ ನಮೂದಿಸಬೇಕು. ಮೈಸೂರು ನಗರ ಪ್ರವಾಸಿ ತಾಣವಾಗಿದ್ದು, ಪೆಟ್ರೋಲ್ ಬಂಕ್ ಹಾಗೂ ಇತರೆ ಸ್ಥಳಗಳಲ್ಲಿ ಐ ಲವ್ ಮೈಸೂರು ಎಂಬ ಇಂಗ್ಲಿಷ್ ಪದದ  ಬದಲು ನನ್ನ  ಮೈಸೂರು ಎಂಬ ಕನ್ನಡ ಪದ ಉಪಯೋಗಿಸುವುದು ಉತ್ತಮ. ಕೆಲವು ಖಾಸಗಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರ‌ ನೇಮಕವೇ ಮಾಡಿಕೊಂಡಿಲ್ಲ ಹಾಗೂ ಕನ್ನಡ ಭಾಷೆಯಲ್ಲಿ ಮಾತನಾಡಿದರೆ ದಂಡ ವಿಧಿಸುವ ಕ್ರಮವಿದೆ. ಇವುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಟಿ.ಗುರುರಾಜ್ ಅವರು ತಿಳಿಸಿದರು.

ಪೊಲೀಸ್ ಇಲಾಖೆಯಲ್ಲಿ ಕನ್ನಡಪರ‌ ಹೋರಾಟಗಾರರು ಹೋರಾಟಕ್ಕೆ ಅನುಮತಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಅವರನ್ನು ಗೌರವಯುತವಾಗಿ ಕಾಣಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೂಚನಾ ಫಲಕಗಳು ಹಾಗೂ ಜಾಹೀರಾತು ಫಲಕಗಳಲ್ಲಿ ಹೆಚ್ಚಿನ ಕನ್ನಡ ಬಳಕೆಗೆ ಆದ್ಯತೆ ನೀಡಬೇಕು. ಡಿಟಿಪಿ ಆಪರೇಟರ್ ಗಳಿಗೆ ಕನ್ನಡ ಭಾಷಾ ಜ್ಞಾನದ ತರಬೇತಿ ನೀಡಬೇಕು ಎಂದು ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕಡಕೊಳ ಕುಮಾರಸ್ವಾಮಿ ಅವರು ತಿಳಿಸಿದರು.

ಅಂಗಡಿ ಮುಂಗುಟ್ಟು, ಶಿಕ್ಷಣ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡದಲ್ಲಿರಬೇಕು. ಆದರೆ ಇನ್ನೂ ಬಹಳಷ್ಟು ಕಡೆ ಈ ನಿಯಮ ಪಾಲಿಸುತ್ತಿಲ್ಲ. ಇದರ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕನ್ನಡ ಪರ ಹೋರಾಟಗಾರರು ಹೋರಾಟ ನಡೆಸುವುದಾಗಿ ಕನ್ನಡ ಜಿಲ್ಲಾ ಜಾಗೃತಿ ಸಮಿತಿ  ಸದಸ್ಯ ಜಿ. ಮೋಹನ್ ಅವರು ಎಚ್ಚರಿಸಿದರು.

ಬ್ಯಾಂಕ್ ಗಳಲ್ಲಿ ಚಲನ್ ಗಳು ಸೇರಿದಂತೆ ಇತರೆ ನಮೂನೆಗಳಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿ ಕನ್ನಡ ಭಾಷೆಯ ಬಳಕೆಯಾಗಬೇಕು.  ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡದ ಬಳಕೆಗೆ ಆದ್ಯತೆ ನೀಡಬೇಕು ಎಂದು ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕೆ.ಆರ್. ಗೋಪಾಲಕೃಷ್ಣ ಅವರು ತಿಳಿಸಿದರು.

ಕನ್ನಡ ಜಿಲ್ಲಾ ಜಾಗೃತಿ‌ ಸಮಿತಿ‌ ಸದಸ್ಯರು‌ ಚರ್ಚಿಸಿರುವ ವಿಷಯಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಆಯಾ ಇಲಾಖೆಗೆ ಪತ್ರ ಬರೆಯುವಂತೆ ಅಪರ ಜಿಲ್ಲಾಧಿಕಾರಿಗಳು ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ: ಸುದರ್ಶನ್ ಅವರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತ ದಾಸೇಗೌಡ, ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರುಗಳಾದ ಡಾ.ವಿನೋದಮ್ಮ, ರವಿಪ್ರಸಾದ್ ಹೆಚ್.ಆರ್,ಕುಮಾರ್, ಡಾ.ದಿನಮಣಿ ಬಿ.ಎಸ್,ನಾ.ದಿವಾಕರ, ಪರಮೇಶ್, ಮೋಹನ್ ಕುಮಾರ್ ಗೌಡ, ಡಾ. ಎಂ.ಪಿ. ಮಂಜಪ್ಪ ಶೆಟ್ಟಿ ಮಸಗಲಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Campaign, use, Kannada, shops, Mysore, ADC