ಮೈಸೂರು,ಮೇ,14,2026 (www.justkannada.in): ಮೈಸೂರು ನಗರ ವ್ಯಾಪ್ತಿಯಲ್ಲಿ ರಿಂಗ್ ರೋಡ್ ಒಳ ಭಾಗದಲ್ಲಿ ಹಾಲಿ ಇರುವ 11 ಕೆ.ವಿ. ಓವರ್ ಹೆಡ್ ವಿದ್ಯುತ್ ಮಾರ್ಗಗಳನ್ನು ಭೂಗತ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಶ್ರೀರಾಂಪುರದ ಬಳಿ ಇರುವ ನಾಯ್ಡು ಸ್ಟೋರ್ ಬಳಿ ಪರಿಶೀಲನೆ ನಡೆಸಿದರು.
ಇಂದು ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸದಲ್ಲಿದ್ದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಿಂದ ಮೈಸೂರು ನಗರ ವ್ಯಾಪ್ತಿಯಲ್ಲಿ (ರಿಂಗ್ ರೋಡ್ ಒಳ ಭಾಗದಲ್ಲಿ) ಹಾಲಿ ಇರುವ 11 ಕೆ.ವಿ. ಓವರ್ ಹೆಡ್ ವಿದ್ಯುತ್ ಮಾರ್ಗಗಳನ್ನು ಭೂಗತ ಕೇಬಲ್‌ನಿಂದ ಬದಲಾಯಿಸುವ ಕಾಮಗಾರಿ ಪರಿಶೀಲಿಸಿದರು.
ಮೈಸೂರಿನ ಶ್ರೀರಾಂಪುರದಲ್ಲಿ 11 ಕೆ.ವಿ. ಓವರ್ ಹೆಡ್ ವಿದ್ಯುತ್ ಮಾರ್ಗಗಳನ್ನು ಭೂಗತ ಕೇಬಲ್‌ಗೆ ಬದಲಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೆಸ್ಕ್ ಅಧಿಕಾರಿಗಳಿಂದ ಕಾಮಗಾರಿಯ ಸಂಪೂರ್ಣ ವಿವರಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಸೆಸ್ಕ್‌ನ ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್ ಅವರು, ಮೈಸೂರು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಭೂಗತ ಕೇಬಲ್ ಅಳವಡಿಸುವ ಕಾಮಗಾರಿಯ ಪ್ರಗತಿ ಕುರಿತಂತೆ ಮಾಹಿತಿ ನೀಡಿದರು.
“ಮೈಸೂರು ನಗರ ವ್ಯಾಪ್ತಿಯಲ್ಲಿ(ರಿಂಗ್ ರೋಡ್ ಒಳ ಭಾಗದಲ್ಲಿ) ಒಟ್ಟು 588.24 ಕೋಟಿ ರೂ. ವೆಚ್ಚದಲ್ಲಿ ಸದರಿ ಕಾಮಗಾರಿ ಕೈಗೊಳ್ಳಲಾಗಿದ್ದು, 871.09 ಕಿ.ಮೀ ವ್ಯಾಪ್ತಿಯಲ್ಲಿನ 11 ಕೆ.ವಿ. ಓವರ್ ಹೆಡ್ ವಿದ್ಯುತ್ ಮಾರ್ಗಗಳನ್ನು ಭೂಗತ ಕೇಬಲ್‌ಗೆ ಬದಲಾಯಿಸುವ ಕೆಲಸ ನಡೆಸಲಾಗುತ್ತಿದೆ. ಇದಕ್ಕಾಗಿ 474 ಆರ್.ಎಂ.ಯು ಮತ್ತು 11 ಸಿ.ಎಸ್.ಎಸ್. ಅಳವಡಿಸಲು ಉದ್ದೇಶಿಸಲಾಗಿದ್ದು, ಕಾಮಗಾರಿಯನ್ನು 4 ವಿವಿಧ ಗುತ್ತಿಗೆದಾರರಿಗೆ ವಹಿಸಲಾಗಿದೆ. ಪ್ರಸ್ತುತ 227.12 ಕಿ.ಮೀ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಮುಗಿದಿದ್ದು, 160 ಆರ್‌ಎಂಯು ಅಳವಡಿಸುವ ಮೂಲಕ ಶೇ. 26.07 ಪ್ರಗತಿ ಸಾಧಿಸಲಾಗಿದೆ. ಕಾಮಗಾರಿ ಮುಗಿಸಲು 2 ವರ್ಷ ಅವಧಿ ನಿಗದಿಪಡಿಸಿದ್ದು, ನಿಗದಿತ ವೇಳೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ,” ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಟಿ.ಎಸ್. ಶ್ರೀವತ್ಸ, ಕೆ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಪ್ರಾದೇಶಿಕ ಆಯುಕ್ತರು ಹಾಗೂ ಸೆಸ್ಕ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾದ ನಿತೀಶ್ ಪಾಟೀಲ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಸೆಸ್ಕ್‌ನ ಮುಖ್ಯ ಇಂಜಿನಿಯರ್ ಎಲ್. ಲೋಕೇಶ್ ಸೇರಿದಂತೆ ಇತರರಿದ್ದರು.
ಯೋಜನೆಯ ಅನುಕೂಲಗಳು:
ಮೈಸೂರು ನಗರ ವ್ಯಾಪ್ತಿಯಲ್ಲಿ ಓವರ್ ಹೆಡ್ ವಿದ್ಯುತ್ ಮಾರ್ಗಗಳನ್ನು ಭೂಗತ ಕೇಬಲ್‌ಗೆ ಬದಲಾಯಿಸುವ ಕಾಮಗಾರಿಯಿಂದ ಹೆಚ್ಚಿನ ವಿಶ್ವಾಸಾರ್ಹತೆ, ಕಡಿಮೆ ನಿರ್ವಹಣಾ ವೆಚ್ಚ, ಕಡಿಮೆ ವಿದ್ಯುತ್ ಅಡಚಣೆ, ನಗರದ ಸೌಂದರ್ಯ ಹೆಚ್ಚಿಸುವಿಕೆ, ಕಡಿಮೆ ಮರ ಕತ್ತರಿಸುವಿಕೆ, ದೀರ್ಘ ಆಯುಷ್ಯ, ಕಡಿಮೆ ವಿದ್ಯುತ್ ಅಪಘಾತಗಳು ಹಾಗೂ ಸುಧಾರಿತ ವ್ಯವಸ್ಥೆಯ ಸಾಮರ್ಥ್ಯದ ಪ್ರಯೋಜನವಾಗಲಿದೆ.

Key words: CM Siddaramaiah, inspects, underground, cable, power lines, Mysore







