ಮೈಸೂರಿನ SJCE , ಹುಬ್ಬಳ್ಳಿಯ BVBCET; 146 ಕೋಟಿ “ಅಕ್ರಮ” ಅನುದಾನ.

ಬೆಂಗಳೂರು,ಮಾರ್ಚ್,31,2026 (www.justkannada.in):  ಉನ್ನತ ಶಿಕ್ಷಣ ಇಲಾಖೆಯು 2018-19ನೇ ಸಾಲಿನಿಂದ 2022-23ನೇ ಸಾಲಿನವರೆಗೆ, ರಾಜ್ಯದ ಎರಡು ಖಾಸಗಿ ಕಾಲೇಜುಗಳಿಗೆ ನಿಯಮ ಬಾಹಿರವಾಗಿ 146.23 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ವಿಧಾನಸಭೆಯಲ್ಲಿ ಮಂಡಿಸಲಾದ ‘ಭಾರತದ ಲೆಕ್ಕನಿಯಂತ್ರಕರು ಮತ್ತು ವರದಿ-ಮಹಾಲೆಕ್ಕಪರಿಶೋಧಕರ ಮಾರ್ಚ್ 2024’ (ಸಿಎಜಿ) ವರದಿಯಲ್ಲಿ ಈ ಮಾಹಿತಿ ಇದೆ.

‘ರಾಜ್ಯದಲ್ಲಿ ತಾಂತ್ರಿಕ, ಆರೋಗ್ಯ, ನಿರ್ವಹಣೆ ಮತ್ತಿತರ ಕ್ಷೇತ್ರಗಳಲ್ಲಿ ಅನ್ವಯಿಕ ವಿಶ್ವವಿದ್ಯಾಲಯಗಳ ಶಿಕ್ಷಣ ವನ್ನು ಉತ್ತೇಜಿಸಲು ರಾಜ್ಯ ಸರ್ಕಾರವು 2013ರಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಕೂಲವಾಗುವಂತೆ ಖಾಸಗಿ ವಿಶ್ವವಿದ್ಯಾಲಯಗಳ ಕಾಯ್ದೆ ಯನ್ನು ರೂಪಿಸಿತು. ಅದರಂತೆ, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮತ್ತು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಲಾಗಿತ್ತು. ಖಾಸಗಿ ವಿಶ್ವವಿದ್ಯಾಲಯಗಳು ತಮ್ಮದೇ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಕಾಯ್ದೆಯ 5ನೇ ಸೆಕ್ಷನ್‌ ನಲ್ಲಿ ಷರತ್ತು ಹಾಕಲಾಗಿತ್ತು’ ಎಂದು ಸಿಎಜಿ ವರದಿಯಲ್ಲಿ ಹೇಳಿದೆ.

‘ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತರಿಂದ, ಅವರ ವ್ಯಾಪ್ತಿಯಲ್ಲಿದ್ದ ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು (ಎಸ್‌ಜೆಸಿಇ) ಮತ್ತು ಹುಬ್ಬಳ್ಳಿಯ ಬಿ.ವಿ. ಭೂಮರೆಡ್ಡಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿಗೆ (ಬಿವಿಬಿಸಿಇಟಿ), ಸರ್ಕಾರದಿಂದ ಅನುದಾನ ಬಿಡುಗಡೆ ಆಗುತ್ತಿತ್ತು. ಆದರೆ 2018-19ನೇ ಸಾಲಿನಿಂದ ಈ ಎರಡೂ ಕಾಲೇಜುಗಳು ಕ್ರಮವಾಗಿ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಹಾಗೂ ಕೆಎಲ್‌ ಇ ತಾಂತ್ರಿಕ ವಿಶ್ವವಿದ್ಯಾಲಯದ ಭಾಗವಾದವು. ಕಾಯ್ದೆಯ ಪ್ರಕಾರ ಈ ಕಾಲೇಜುಗಳಿಗೆ ಉನ್ನತ ಶಿಕ್ಷಣ ಇಲಾಖೆಯು ಅನುದಾನ ನಿಲ್ಲಿಬೇಕಿತ್ತು’ ಎಂದು ಸಿಎಜಿ ವಿವರಿಸಿದೆ.

ಅದಾದ ಬಳಿಕವೂ ಎರಡೂ ಕಾಲೇಜುಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಅವಧಿಯಲ್ಲಿ ಎಸ್‌ಜೆಸಿಇಗೆ ಒಟ್ಟು ₹95.93 ಕೋಟಿ, ಬಿವಿಬಿಸಿಇಟಿಗೆ ಒಟ್ಟು ₹50.30 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹146.23 ಕೋಟಿ ನಷ್ಟವಾಗಿದೆ’ ಎಂದಿದೆ.

ಈ ಬಗ್ಗೆ ಸ್ಪಷ್ಟನೆ ಕೇಳಿದಾಗ ಉನ್ನತ ಶಿಕ್ಷಣ ಇಲಾಖೆ, ‘2022-23ನೇ ಸಾಲಿನ ಬ್ಯಾಚಿನ ವಿದ್ಯಾರ್ಥಿಗಳ ಕೋರ್ಸ್ ಮುಗಿಯುವವರೆಗೂ ಅನುದಾನ ಮುಂದುವರೆಸುತ್ತೇವೆ’ ಎಂದು ತಿಳಿಸಿರುತ್ತದೆ. ಆದರೆ ಇದನ್ನು ಒಪ್ಪಿಕೊಳ್ಳಲಾಗದು. ಸರ್ಕಾರದ ಉತ್ತರ ಸ್ವೀಕಾರಾರ್ಹವಲ್ಲ. ಖಾಸಗಿ ವಿಶ್ವವಿದ್ಯಾಲಯಗಳ ಭಾಗವಾದ ಕಾಲೇಜುಗಳಿಗೆ ಸರ್ಕಾರ ಅನುದಾನ ನೀಡಬಾರದು’ ಎಂದು ಸಿಎಜಿ ಹೇಳಿದೆ.

96 crore released to SJCE in Mysuru and ₹50.30 crore to BVBCET in Hubballi—totalling ₹146 crore—allegedly disbursed illegally, reveals CAG report.

ಕೃಪೆ: ಪ್ರಜಾವಾಣಿ

Key words: SJCE, Mysuru, BVBCET,  Hubballi, CAG report.