Saturday, August 8, 2026

BDA Apartments

Home Front Page ರಾಜ್ಯಕ್ಕೆ ರಣದೀಪ್ ಸಿಂಗ್ ಸುರ್ಜೇವಾಲ: ವ್ಯಂಗ್ಯವಾಡಿದ JDS

ರಾಜ್ಯಕ್ಕೆ ರಣದೀಪ್ ಸಿಂಗ್ ಸುರ್ಜೇವಾಲ: ವ್ಯಂಗ್ಯವಾಡಿದ JDS

ಬೆಂಗಳೂರು,ಮಾರ್ಚ್,20,2026 (www.justkannada.in): ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಪ್ರವಾಸ ಕೈಗೊಂಡಿದ್ದು ಇಂದು ಮಧ್ಯಾಹ್ನ ಆಗಮಿಸಲಿದ್ದಾರೆ. ಈ ಬಗ್ಗೆ ಜೆಡಿಎಸ್ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಕಾಂಗ್ರೆಸ್’ನ ವಸೂಲಿವಾಲಾ ರಣದೀಪ್ ಸಿಂಗ್ ಸುರ್ಜೇವಾಲ  ರಾಜ್ಯಕ್ಕೆ ಆಗಮನ!

ಕೇರಳಂ, ತಮಿಳುನಾಡು, ಅಸ್ಸಾಂ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ವಿಧಾನಸಭಾ ಚುನಾವಣಾ ದಿನಾಂಕ ಘೋಷಣಾದ ಬೆನ್ನಲ್ಲೇ  ಕಾಂಗ್ರೆಸ್ ಕಲೆಕ್ಷನ್ ಏಜೆಂಟ್, ಕರ್ನಾಟಕದ ಸೂಪರ್ ಸಿಎಂ ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಟೀಕಿಸಿದೆ.

ಹೈಕಮಾಂಡ್ ಗುಲಾಮಗಿರಿಯಲ್ಲಿ ತೊಡಗಿರುವ ಇಲ್ಲಿನ  ಕಾಂಗ್ರೆಸ್ ಪಟಾಲಂ ಮತ್ತು ಡಿಸಿಎಂ ಡಿಕೆ ಶಿವಕುಮರ್  ಕರ್ನಾಟಕವನ್ನು ಎಟಿಎಂ ಮಾಡಿಕೊಂಡು, ಹೈಕಮಾಂಡ್ ಖಜಾನೆ ತುಂಬಿಸಲು ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ.

ಕಳೆದ ಬಾರಿ ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ರೂ. ದೋಚಿ ತೆಲಂಗಾಣ ರಾಜ್ಯದಲ್ಲಿ ಅಕ್ರಮವಾಗಿ ಚುನಾವಣೆ ನಡೆಸಿದ್ದ ಕಾಂಗ್ರೆಸ್, ಈಗ ರಾಜ್ಯದ ಯಾವ ನಿಗಮ- ಮಂಡಳಿಗಳಲ್ಲಿ ದರೋಡೆಗೆ ಸಂಚು ರೂಪಿಸಿದೆ ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ ಎಂದು ಜೆಡಿಎಸ್ ಕಿಡಿಕಾರಿದೆ.

ಕಮಿಷನ್’ಗಾಗಿ ಗುತ್ತಿಗೆದಾರರ ರಕ್ತ ಹೀರುತ್ತಿರುವ, ಜನರಿಗೆ ಬೆಲೆ ಏರಿಕೆ ಮತ್ತು ತೆರಿಗೆ ಬರೆ ಎಳೆಯುತ್ತ ವಸೂಲಿಗಿಳಿದಿರುವ ಕಮಿಷನ್ ಕಾಂಗ್ರೆಸ್ ಸರ್ಕಾರದ ಬಗ್ಗೆ ರಾಜ್ಯದ ಜನರೆ ಎಚ್ಚರ! ಎಂದು ಜೆಡಿಎಸ್ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದೆ.

Key words: Congress, Randeep Singh Surjewala, state, JDS,