ಮೈಸೂರು,ಮಾರ್ಚ್,12,2026 (www.justkannada.in): ನಿನ್ನೆ ಹೃದಯಾಘಾತದಿಂದ ನಿಧನರಾದ ಹಿರಿಯ ಪತ್ರಕರ್ತ ಕೆ ಜೆ. ಕುಮಾರ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನದ ನಂತರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್ ನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ ಬುಧವಾರ ಸಂಜೆ ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೆಜೆ ಕುಮಾರ್ ಪತ್ನಿ ಉಷಾ, ಪುತ್ರಿ ಸುನಯ ಶೆಟ್ಟಿ, ಸೋದರಿ ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಪ್ರಕಾಶ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಉಡುಪಿ ಜಿಲ್ಲೆ ಕೊರಂದರ ಪಾಳ್ಯದಲ್ಲಿ ರಘುರಾಮ್ ಶೆಟ್ಟಿ ಮತ್ತು ಶಾರದಾ ಅವರ ಜ್ಯೇಷ್ಠ ಪುತ್ರರಾಗಿ 1952ರ ನವೆಂಬರ್ 6 ರಂದು ಜನಿಸಿದರು. ಸುಮಾರು 56 ವರ್ಷಗಳಿಂದ ಮೈಸೂರಿನ ಪ್ರಮುಖ ಪತ್ರಿಕಾ ವಿತರಕರಾಗಿ ಹಾಗೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು.
1969ರಲ್ಲಿ ಸೋದರ ಮಾವ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಸ್ವಾತಂತ್ರ ಹೋರಾಟಗಾರ ಎ. ರಾಮಣ್ಣ ಸಂಪಾದಕತ್ವದ “ವಿಜಯ” ದಿನ ಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಬದುಕು ಆರಂಭಿಸಿದರು. ನಂತರ ವಿಜಯ ದಿನ ಪತ್ರಿಕೆ ಪ್ರಕಾಶಕ – ಮುದ್ರಕರಾಗಿದ್ದರು.
ನಂತರ ಅವರು ಸಿನಿಮಾ ಪತ್ರಕರ್ತರಾಗಿ ಸುಧಾ ವಾರ ಪತ್ರಿಕೆ, ವಿಜಯ ಚಿತ್ರ ಸಿನಿಮಾ ಮಾಸ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ನಂತರ, 1978ರಿಂದ ರೂಪಾತಾರ ಸಿನಿಮಾ ಮಾಸ ಪತ್ರಿಕೆಗೆ ಮೂರೂ ದಶಕಗಳ ಕಾಲ ಸೇವೆ ಸಲ್ಲಿಸಿದರು. 1993ರಲ್ಲಿ ಉದಯವಾಣಿ ದಿನ ಪತ್ರಿಕೆ ಬೆಂಗಳೂರು ಆವೃತ್ತಿ ಆರಂಭವಾದಾಗ ಮೈಸೂರಿನ ಪ್ರತಿನಿಧಿಯಾಗಿ ಸುಮಾರು ಒಂದೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದರು. ಕಳೆದ ಒಂದೂವರೆ ದಶಕಗಳಿಂದ ಹೊಸ ದಿಗಂತ ದಿನ ಪತ್ರಿಕೆ ಸಿನಿಮಾ ವಿಭಾಗ ನೋಡಿ ಕೊಳ್ಳುತ್ತಿದ್ದರು.
ಪತ್ರಿಕಾ ಕ್ಷೇತ್ರವಲ್ಲದೆ ಹೋಟೆಲ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದ ಅವರು ಮೈಸೂರಿನ ಸರಸ್ವತಿ ಪುರಂನಲ್ಲಿ ಕುಠೀರ ಮನೆ ಎಂಬ ಹೋಟೆಲ್ ಸ್ಥಾಪಿಸಿದ್ದರು. ಕನ್ನಡ ಚಿತ್ರೋದ್ಯಮದಲ್ಲಿ ಪತ್ರಕರ್ತರಾಗಿ ಹೆಸರಾಗಿದ್ದ ಕೆ. ಜೆ. ಕುಮಾರ್, ಕನ್ನಡ ಚಿತ್ರರಂಗದ ದಿಗ್ಗಜರಾದ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ರಜನಿಕಾಂತ್, ಶಶಿಕುಮಾರ್, ನಿರ್ಮಾಪಕರಾದ ದ್ವಾರಕೀಶ್, ವೀರಸ್ವಾಮಿ, ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು.
ಎಂಎಲ್ ಸಿ ಕೆ.ಶಿವಕುಮಾರ್ ಸಂತಾಪ
ಕೆ.ಜೆ. ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್, ನನ್ನ ಬಹುಕಾಲದ ಸ್ನೇಹಿತರು ಹಾಗೂ ಖ್ಯಾತ ಸಿನಿಮಾ ಪತ್ರಕರ್ತರಾದ ಕೆ.ಜೆ.ಕುಮಾರ್ ಅವರು ನಿಧನರಾದ ಸುದ್ದಿ ತಿಳಿದು ನನಗೆ ಅತೀವ ನೋವುಂಟಾಗುದೆ.
ಖ್ಯಾತ ಚಿತ್ರನಟರ ನಿಕಟವರ್ತಿಯಾಗಿದ್ದ ಕುಮಾರ್ ಅವರು, ಚಲನಚಿತ್ರಗಳ ಅತ್ಯುತ್ತಮ ವಿಶ್ಲೇಷಣೆ, ಇತಿಹಾಸ ಮತ್ತು ಫೀಚರ್ ಲೇಖನಗಳಿಗೆ ಹೆಸರುವಾಸಿಯಾಗಿದ್ದರು.’ವಿಜಯ’ ಪತ್ರಿಕೆಯ ಸಂಪಾದಕರಾಗಿ ಪತ್ರಿಕೋದ್ಯಮದಲ್ಲಿ ಸುದೀರ್ಘಕಾಲ ಅನುಭವ ಹೊಂದಿದ್ದ ಅವರು, ಯುವ ಪತ್ರಕರ್ತರಿಗೆ ಅವಕಾಶ ನೀಡಿ ಪ್ರೋತ್ಸಾಹಿಸುತ್ತಿದ್ದರು.
ಅವರ ಕುಟುಂಬಕ್ಕೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಹಾಗೂ ಅವರ ಆತ್ಮಕ್ಕ ಚಿರಶಾಂತಿ ದೊರಕಲೆಂದು ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
Key words: Senior Journalist, KJ. Kumar, death, Funeral, Mysore







