Sunday, September 20, 2026

BDA Apartments

ಜೋಡಿ ಕೊಲೆ: ಅರೋಪಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಮೈಸೂರು ಕೋರ್ಟ್ BDA JK_Adv BDA Adv
Home Crime ಜೋಡಿ ಕೊಲೆ:  ಅರೋಪಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಮೈಸೂರು ಕೋರ್ಟ್

ಜೋಡಿ ಕೊಲೆ:  ಅರೋಪಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಮೈಸೂರು ಕೋರ್ಟ್

ಮೈಸೂರು,ಮಾರ್ಚ್,11,2026 (www.justkannada.in): ಜಮೀನಿನಲ್ಲಿ ವ್ಯವಸಾಯ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಅಣ್ಣ ಮತ್ತು ಅತ್ತಿಗೆ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪಿತ ಸಹೋದರನಿಗೆ ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 1ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ನುಗ್ಗಹಳ್ಳಿ ಕೊಪ್ಪಲು ಗ್ರಾಮದ ಹನುಮಂತ @ ಹನುಮಂತೇಗೌಡ(55) ಜೀವಾವಧಿ ಶಿಕ್ಷೆಗೊಳಗಾದ ಆರೋಪಿ. ಅಣ್ಣ ಶಿವಲಿಂಗೇಗೌಡ ಮತ್ತು ಅತ್ತಿಗೆ ಭಾರತಿ ಕೊಲೆಯಾದವರು.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕು, ಬನ್ನೂರು ಹೋಬಳಿ, ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿ ಜೇನುಗುಡ್ಡೆ ಹತ್ತಿರದ ಗದ್ದೆಜಾಡಿನ ರಸ್ತೆಯಲ್ಲಿನ ಗೋಮಾಳಕ್ಕೆ ಸೇರಿದ ಸರ್ವೆ ನಂ.101ರ 20 ಗುಂಟೆ ಜಮೀನನ್ನು ಆರೋಪಿ  ಹನುಮಂತೇಗೌಡ ಹಿಂದಿನಿಂದ ವ್ಯವಸಾಯ ಮಾಡುತ್ತಿದ್ದನು, ಇದೇ ಜಮೀನನಲ್ಲಿ ಆರೋಪಿ ಹನುಮಂತೇಗೌಡನ ಸಹೋದರ ಮೃತ ಶಿವಲಿಂಗೇಗೌಡ ದಬ್ಬಾಳಿಕೆ ಮಾಡಿ ಹೆದರಿಸಿ ಎರಡು ಮೂರು ವರ್ಷದಿಂದ ವ್ಯವಸಾಯ ಮಾಡುತ್ತಿದ್ದರು.

ಈ ಹಿನ್ನೆಲೆಯಲ್ಲಿ ಅಣ್ಣನ ಮೇಲೆ ದ್ವೇಷ ಸಾಧಿಸುತ್ತಿದ್ದ  ಹನುಮಂತೇಗೌಡ  29-08-2023 ರಂದು ಮಧ್ಯಾಹ್ನ 3-30 ರಿಂದ 4-00 ಗಂಟೆ ನಡುವಿನ ಅವಧಿಯಲ್ಲಿ ಅಣ್ಣ ಶಿವಲಿಂಗೇಗೌಡ ಮತ್ತು ಅತ್ತಿಗೆ ಭಾರತಿ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ವೇಳೆ ಕೊಡಲಿಯಿಂದ ಹಲ್ಲೆ ಮಾಡಿ ಕೊಲೆಗೈದಿದ್ದನು.

ಹಲ್ಲೆಯಿಂದಾಗಿ ಶಿವಲಿಂಗೇಗೌಡ ಮತ್ತು ಭಾರತಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವುದು ತನಿಖೆಯಿಂದ ದೃಢಪಟ್ಟ ಹನುಮಂತೇಗೌಡನ ವಿರುದ್ಧ ಬನ್ನೂರು ಠಾಣೆಯ ಈ ಹಿಂದಿನ ಆರಕ್ಷಕ ನಿರೀಕ್ಷಕ ಮನೋಜ್ ಕುಮಾರ್ ಇವರು ತನಿಖೆ ಪೂರೈಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ನ್ಯಾಯಾಧೀಶರಾದ  ಉಷಾರಾಣಿ  ಅವರು ಅಭಿಯೋಜನೆ ಪರ ಹಾಜರುಪಡಿಸಿದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪಿತನ ಮೇಲಿನ ಆರೋಪ ರುಜುವಾತಾಗಿದೆ ಎಂದು ಅಭಿಪ್ರಾಯ ಪಟ್ಟು ಆರೋಪಿತನಿಗೆ ಕಲಂ 302 ಐಪಿಸಿ ಅಡಿಯ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು ರೂ.1,00,000/- ದಂಡ ವಿಧಿಸಿ ತೀರ್ಪು ನೀಡಿರುತ್ತದೆ. ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ.

ಸದರಿ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಎಂ.ಎನ್.ರಂಜನಾರಾವ್ ಅವರು ಸರ್ಕಾರದ ಪರ ವಾದ ಮಂಡಿಸಿದರು.

Key words: Double murder,  Mysore court, sentences, life imprisonment