ಬೆಂಗಳೂರು,ಫೆಬ್ರವರಿ,2,2026 (www.justkannada.in): ಇ-ಸ್ವತ್ತು 2.0 ತಂತ್ರಾಂಶದಡಿ ಈವರೆಗೆ ರಾಜ್ಯದಲ್ಲಿ 1,14,907 ಅರ್ಜಿಗಳನ್ನು ಅನುಮೋದಿಸಿ ವಿಲೇವಾರಿ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಸಾರ್ವಜನಿಕರಿಂದ ಇದುವರೆಗೆ ಒಟ್ಟು 1,38,470 ಅರ್ಜಿಗಳು ಸ್ವೀಕೃತವಾಗಿದ್ದು, 23,563 ಅರ್ಜಿಗಳು ಅನುಮೋದನೆಗಾಗಿ ಬಾಕಿ ಉಳಿದಿವೆ. ಇ-ಸ್ವತ್ತು 2.0 ತಂತ್ರಾಂಶದ ಸಿಟಿಜನ್ ಇಂಟರ್ಫೇಸ್ ಮೂಲಕ ಅರ್ಜಿಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಮತ್ತು ಅರ್ಜಿಗಳನ್ನು ಅನುಮೋದನೆ ಮಾಡುವ ಸಮಯದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. “ಈ ಹಿನ್ನೆಲೆಯಲ್ಲಿ ಇ-ಸ್ವತ್ತು 2.0 ತಂತ್ರಾಂಶದಲ್ಲಿ ಬದಲಾವಣೆ ಮಾಡಿ ಕೆಲವು ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದರು.
ಹೊಸದಾಗಿ ಅನುಮೋದನೆಗೊಂಡ ಆಸ್ತಿಗಳಿಗೆ ತಿದ್ದುಪಡಿ ಮಾಡುವ ಅವಕಾಶವನ್ನು ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಾರ್ಗಸೂಚಿ ದರವನ್ನು ಇ-ಸ್ವತ್ತು ತಂತ್ರಾಂಶದೊಂದಿಗೆ ಸಂಯೋಜನೆ ಮಾಡುವ ಕಾರ್ಯವನ್ನು ಮುಂದಿನ 10 ದಿನದೊಳಗೆ ಕ್ರಮವಹಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
Key words: 1,14,907 applications, disposed, Minister, Priyank Kharge







