ಬೆಂಗಳೂರು,ಫೆಬ್ರವರಿ,20,2026 (www.justkannada.in): ಮುಸ್ಸೂರಿಯ ನಾಗರಿಕ ಸೇವಾ ಅಧಿಕಾರಿಗಳ ತರಬೇತಿ ಸಂಸ್ಥೆಯಾದ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (ಎಲ್ ಬಿ ಎಸ್ ಎನ್ ಎ ಎ) ವತಿಯಿಂದ ತರಬೇತಿ ನಿರತ 10 ಐಎಎಸ್ ಅಧಿಕಾರಿಗಳ ತಂಡವು ಶುಕ್ರವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಭೇಟಿ ನೀಡಿ, ಕಾರ್ಯಾಚರಣಾ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯಿತು.
ಅಧಿಕಾರಿಗಳನ್ನು ಸ್ವಾಗತಿಸಿದ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಕೆಇಎ ಕಾರ್ಯವೈಖರಿ ಬಗ್ಗೆ ಅವರಿಗೆ ಪೂರ್ಣ ಮಾಹಿತಿ ನೀಡಿದರು.
ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆ ಹಾಗೂ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸುವ ಪರೀಕ್ಷೆಗಳಿಗೆ ಅನುಸರಿಸುವ ಕ್ರಮಗಳ ಕುರಿತು ತಂಡದ ಸದಸ್ಯರಿಗೆ ಗದ್ಯಾಳ ಅವರು ಮಾಹಿತಿ ನೀಡಿದರು.
ಇದೇ ವೇಳೆ, ಸಿಇಟಿ ಅಳವಡಿಸಿಕೊಂಡಿರುವ ಆಧುನಿಕ ಭದ್ರತಾ ಕ್ರಮಗಳಾದ ಮುಖಚಹರೆ ಪತ್ತೆ ತಂತ್ರಜ್ಞಾನ (ಫೇಷಿಯಲ್ ರೆಕಗ್ನಿಷನ್), ಪರೀಕ್ಷೆ ಮುಗಿದ ತಕ್ಷಣವೇ ಓಎಂಆರ್ ಶೀಟ್ ಗಳನ್ನು ಸ್ಕ್ಯಾನ್ ಮಾಡಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡುವ ಕ್ರಮದ ಬಗ್ಗೆಯೂ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ನವೀಕೃತ ಕೆಇಎ ಕಚೇರಿ, ಕಾರ್ಪೊರೇಟ್ ಸಂಸ್ಥೆಗಳನ್ನು ಹೋಲುವ ರೀತಿಯಲ್ಲಿ ಅಭಿವೃದ್ಧಿ ಪಡಿಸಿರುವ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಪರೀಕ್ಷೆಗಳ ಫಲಿತಾಂಶವನ್ನು ಸಕಾಲದಲ್ಲಿ ನೀಡಲು ಅನುಸರಿಸುವ ಕ್ರಮದ ಬಗ್ಗೆಯೂ ಮಾಹಿತಿ ಪಡೆದುಕೊಂಡರು.
Key words: Delegation, IAS officers, training, visits, KEA







