ಸರ್ಕಾರಕ್ಕೆ ಸಾವಿರ ದಿನ: ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಿ ವಿಶ್ವಾಸ ಗಳಿಸಿದೆ-ಹೆಚ್.ಎ ವೆಂಕಟೇಶ್

ಬೆಂಗಳೂರು,ಫೆಬ್ರವರಿ,14,2026 (www.justkannada.in): ರಾಜ್ಯದ ಕಾಂಗ್ರೆಸ್ ಸರ್ಕಾರ ಅತ್ಯಧಿಕ ಬಹುಮತದಿಂದ ಅಧಿಕಾರಕ್ಕೆ ಬಂದು 1000 ದಿನಗಳು ಕಳೆದಿವೆ. ಈ ಸಾರ್ಥಕ ಸಮಯದಲ್ಲಿ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಿ ಉತ್ತಮ ಆಡಳಿತ ನೀಡುತ್ತಿರುವ  ರಾಜ್ಯ ಸರ್ಕಾರ  ಜನರ ವಿಶ್ವಾಸ ಗಳಿಸಿದೆ  ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ತಿಳಿಸಿದರು.

ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಹೆಚ್.ಎ ವೆಂಕಟೇಶ್, ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತಿದ್ದ ಕರ್ನಾಟಕದ ಮತದಾರರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಬಿಜೆಪಿ ಆಡಳಿತದ ಸಮಯದಲ್ಲಿ ಅನುಭವಕ್ಕೆ ಬಂದ ಜಾತಿವಾದ, ಧರ್ಮಾಂಧತೆ, ಸ್ವಜನ ಪಕ್ಷಪಾತ, ಅತೀವ ಭ್ರಷ್ಟಾಚಾರ, ನಿರ್ಲಜ್ಜ ಆಡಳಿತ, ಮುಂತಾದ  ಜನವಿರೋಧಿ ನಿಲುವುಗಳಿಗೆ ಉತ್ತಮ ಆಡಳಿತದ  ಮೂಲಕ, ಸಾಂತ್ವನದ ಸಂಪನ್ನ ಮನಸ್ಥಿತಿಯ  ಭೂಮಿಕೆಯನ್ನು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸಿದ್ದ ಮಾಡಿಟ್ಟಿದೆ. ಉತ್ತಮ ಮಳೆ, ಸುಭಿಕ್ಷ ವಾತಾವರಣದ ಮೂಲಕ ರಾಜ್ಯದಲ್ಲಿ ರೈತರು ಸಾಮಾನ್ಯ ನಾಗರಿಕರು ಸಂತಸದಿಂದಿದ್ದಾರೆ ಎಂದಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ತೆರಿಗೆ ಭಯೋತ್ಪಾದನೆಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿತ್ತು. ದೇಶದಲ್ಲೇ ಮೊದಲ ಬಾರಿಗೆ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ . ಇದರ ಜೊತೆಗೆ ಗೃಹಲಕ್ಷ್ಮಿ, ಯುವನಿಧಿ, ಗೃಹ ಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳು ಉಪಯೋಗವಾಗಿವೆ ಎಂದಿದ್ದಾರೆ.

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಲಿದೆ ಎಂದು ಹುಯಿಲೆಬ್ಬಿಸುತ್ತಿದ್ದ ಬಿಜೆಪಿಯವರೇ ಈ ಯೋಜನೆಗಳನ್ನು ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ,  ರಾಜಸ್ಥಾನ ಹರಿಯಾಣ ಮುಂತಾದ ರಾಜ್ಯಗಳಲ್ಲಿ ಪ್ರಯೋಗಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಉತ್ತಮ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಈ ಆಡಳಿತದ ಅವಧಿಯೊಳಗೆ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಿದೆ, ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ತನ್ನ ಜನಪರ ನಿಲುವು ಮತ್ತು ಆಡಳಿತದ ಕಾರಣಕ್ಕಾಗಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸುಭದ್ರವಾಗಿದ್ದು ಎಲ್ಲರ ನೋವು ನಲಿವುಗಳಿಗೆ ಸ್ಪಂದಿಸುವ ಅತ್ಯುತ್ತಮ ವಾತಾವರಣವಿದೆ. ಈ ಎಲ್ಲ ಕಾರಣಗಳಿಂದ ಕರ್ನಾಟಕ ಈಗ ದೇಶದ ಮುಂಚೂಣಿ ರಾಜ್ಯವಾಗಿದೆ, ಕಾಂಗ್ರೆಸ್ ಸರ್ಕಾರ ಈ ಆದರ್ಶವನ್ನು ಸದಾ ಕಾಪಾಡಿಕೊಳ್ಳಲಿದೆ. ಕೋಮುವಾದಿಗಳು ಧರ್ಮಾಂಧರು, ಜಾತಿ ಮೇಲೆ ರಾಜಕೀಯ ಮಾಡುವ ಕನಿಷ್ಠ ಆಲೋಚನೆಯ ಜನರು, ರಾಜ್ಯದ ಅಭಿವೃದ್ಧಿಗೆ ಅಡಚಣೆ ಉಂಟು ಮಾಡಲು ಯತ್ನಿಸುತ್ತಿದ್ದಾರೆ ಆದರೆ ಇದು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಜೊತೆ ಜನ ಸಾಮಾನ್ಯರು ಅಚಲವಾಗಿ ನಿಂತಿದ್ದಾರೆ, ಈ ಪರಂಪರೆ ಮುಂದುವರೆಯಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ  ಎಂದು ಹೆಚ್ ಎ ವೆಂಕಟೇಶ್ ಹೇಳಿದ್ದಾರೆ.

Key words:  thousand days, government, KPCC, Spokesperson, HA Venkatesh