ಮೈಸೂರು,ಫೆಬ್ರವರಿ,2,2026 (www.justkannada.in): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಈ ಬಾರಿಯ ಕೇಂದ್ರ ಬಜೆಟ್ ಕರ್ನಾಟಕದ ಪಾಲಿಗೆ ನಿರಾಶದಾಯಕವಾಗಿದೆ. ವಿಕಸಿತ ಭಾರತ-2047ರ ಗುರಿಯಡಿ ಮಂಡಿಸಿರುವ ಬಜೆಟ್, ದೇಶವಾಸಿಗಳ ಆರ್ಥಿಕತೆಯನ್ನು ವಿಕಸನಗೊಳಿಸುವ ಭರವಸೆ ಮೂಡಿಸುವಲ್ಲಿ ವಿಫಲವಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ ಮಲ್ಲೇಶ್ ಟೀಕಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಕೆ.ವಿ ಮಲ್ಲೇಶ್, ಬಜೆಟ್ ನ ಬಹುಪಾಲು ಅಂಶ ಮುಂಬರುವ ಉತ್ತರ ಪ್ರದೇಶ, ಪಶ್ಚಿಮ ಬಂಗಾಳದ ಚುನಾವಣೆ ಮೇಲೆ ಗಮನ ಹರಿಸಿರುವುದನ್ನು ಸಾರಿ ಹೇಳುತ್ತಿವೆ. ರಾಜ್ಯದ ಪಾಲಿಗಂತೂ ಎರಡು ರೈಲು ನೀಡಿರುವುದನ್ನು ಬಿಟ್ಟರೆ, ಅಕ್ಷರಶಃ ಬಜೆಟ್ ರೈಲು ಬಿಟ್ಟಿದ್ದಾರೆ.
ಯುವಜನತೆಯ ಬಜೆಟ್, ವಿಕಸಿತ ಭಾರತ, 3ನೇ ಅರ್ಥವ್ಯವಸ್ಥೆಯ ಬಗ್ಗೆ ಬಜೆಟ್ ನಲ್ಲಿ ಹೇಳಿದ್ದರೂ ಸಂಪೂರ್ಣ ಬಜೆಟ್ ಉತ್ತರ ಭಾರತದ ಬಜೆಟ್ ನಂತೆ ರೂಪುಗೊಂಡಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆಯುಂಟುಮಾಡುತ್ತಿದೆ. ಉತ್ತರ ಪ್ರದೇಶಕ್ಕೆ 11ಯೋಜನೆ ಘೋಷಿಸಿ, ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ವಿಧಾನಸಭಾ ಚುನಾವಣೆಯ ಛಾಯೆಯನ್ನು ಸ್ಪಷ್ಟಪಡಿಸಿದೆ ಎಂದು ಕೆ.ವಿ ಮಲ್ಲೇಶ್ ಕುಟುಕಿದ್ದಾರೆ.
ಲೋಕಲ್ ಟು ಗ್ಲೋಬಲ್ ಬಗ್ಗೆ ಪ್ರಸ್ತಾಪಿಸುವ ನಿರ್ಮಾಲಾ ಅವರು ಐಟಿಸಿಟಿ, ಸಿಲಿಕಾನ್ ವ್ಯಾಲಿಯನ್ನು ಬಜೆಟ್‌ನಲ್ಲಿ ಮರೆತಿರುವುದು ದುರಾದೃಷ್ಟಕರವಾಗಿದೆ. ಕರ್ನಾಟಕ ರಾಜ್ಯದಲ್ಲಿ ಬಯಲು ಸೀಮೆ, ಕರಾವಳಿ, ಪಶ್ಚಿಮ ಘಟ್ಟದಂತಹ ಪ್ರಾಕೃತಿಕ ವೈವಿಧ್ಯಮಯ ಪ್ರದೇಶವಿವೆ. ಇವಿಷ್ಟೇ ಅಲ್ಲದೆ, ಐಟಿಸಿಟಿ ಬೆಂಗಳೂರು, ಪಾರಂಪರಿಕ ನಗರಿ ಮೈಸೂರು, ಕರಾವಳಿ ನಗರಿ ಮಂಗಳೂರು, ಕಾರವಾರ, ವಾಣಿಜ್ಯ ನಗರಿ ಹುಬ್ಬಳ್ಳಿಯಂತಹ ಸಾಕಷ್ಟು ಪ್ರದೇಶಗಳು ಜಾಗತಿಕವಾಗಿ ಅಭಿವೃದ್ಧಿಗೆ ಕಾದು ಕುಳಿತಿವೆ. ಆದರೆ, ಈ ಯಾವುದೇ ನಗರಗಳಿಗೂ ಬಜೆಟ್ ನಲ್ಲಿ ಆದ್ಯತೆ ಸಿಗದಿರುವುದು ಕೇಂದ್ರದ ದೂರದೃಷ್ಟಿಯ ಕೊರತೆಯನ್ನು ತೋರಿಸುತ್ತಿದೆ.
ಭಾರತ ಮಿಶ್ರ ಆರ್ಥಿಕತೆಯ ದೇಶ. ದೇಶದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಿಗೆ ಸಮಾನ ಆದ್ಯತೆ ನೀಡಬೇಕು. ಈ ಮೂರೂ ವಲಯಗಳು ದೇಶದ ಪ್ರತಿ ರಾಜ್ಯ, ಪ್ರದೇಶದಲ್ಲೂ ವಿಭಿನ್ನವಾಗಿ ಬೆಳೆದಿವೆ. ಅದನ್ನು ಕೇಂದ್ರ ಸರಕಾರ, ವಿತ್ತ ಸಚಿವೆ ಅರ್ಥ ಮಾಡಿಕೊಳ್ಳಬೇಕಿತ್ತು. ಅನುದಾನವನ್ನು ಮೂರು ವಲಯಗಳ ಮೇಲೂ, ಎಲ್ಲಾ ರಾಜ್ಯ, ಪ್ರದೇಶವಾರು ಜಾಗರೂಕತೆಯಿಂದ ಹಂಚಿಕೆ ಮಾಡಬೇಕಿತ್ತು. ಆದರೆ, ಅದು ಬಜೆಟ್ ನಲ್ಲಿ ಕಾಣುತ್ತಿಲ್ಲ ಎಂದು ಕೆ.ವಿ ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿದ್ದರೂ ಕೃಷಿ, ಕೈಗಾರಿಕಾ ವಲಯಗಳನ್ನು ತೀವ್ರ ನಿರ್ಲಕ್ಷಿಸಿದಂತೆ ಭಾಸವಾಗುತಿದೆ. ಈ ನಡುವೆ ಸೆಮಿ ಕಂಡೆಕ್ಟರ್ ಉದ್ಯಮಕ್ಕೆ 40 ಸಾವಿರ ಕೋಟಿ ರೂ. ಘೋಷಿಸಲಾಗಿದೆ. ಆದರೆ, ಕಳೆದ ಬಾರಿ ಮೈಸೂರಿಗೆ ಘೋಷಿಸಿದ್ದ ಸೆಮಿಕಂಡೆಕ್ಟರ್ ಚಿಪ್ ತಯಾರಿಕ ಘಟಕ ನಿರ್ಮಾಣ ಇಂದಿಗೂ ಆರಂಭಗೊಂಡಿಲ್ಲ. ಈ ಬಗ್ಗೆ ಬಜೆಟ್ ನಲ್ಲಿಯೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದರಿಂದ ಬಜೆಟ್ ಕೇವಲ ಘೋಷಣೆಗೆ ಮಾತ್ರ ಸೀಮಿತ ಎಂಬ ಅನುಮಾನ ಮೂಡಿಸುತ್ತಿದೆ ಎಂದಿದ್ದಾರೆ.
Key words: budget, negligence, Karnataka, Mysore, K.V. Mallesh







