Saturday, August 8, 2026

BDA Apartments

Home Front Page ಒಣ ಘೋಷಣೆಯಿಂದ ಕೂಡಿರುವ, ಜನವಿರೋಧಿ ಕೇಂದ್ರ ಬಜೆಟ್- ಹೆಚ್.ಎ ವೆಂಕಟೇಶ್.

ಒಣ ಘೋಷಣೆಯಿಂದ ಕೂಡಿರುವ, ಜನವಿರೋಧಿ ಕೇಂದ್ರ ಬಜೆಟ್- ಹೆಚ್.ಎ ವೆಂಕಟೇಶ್.

ಮೈಸೂರು,ಫೆಬ್ರವರಿ,2,2026 (www.justkannada.in): ಯಾವುದೇ ಪರಿಣಾಮಕಾರಿ ಯೋಜನೆಗಳಿಲ್ಲದೇ ಕೇವಲ ಒಣ ಘೋಷಣೆಗಳಿಂದ ಕೂಡಿರುವ ಈ  ಬಾರಿಯ ಕೇಂದ್ರ ಬಜೆಟ್ ನಿಸ್ಸಂಶಯವಾಗಿ ಜನವಿರೋಧಿಯಾಗಿದೆ. ಅಲ್ಲದೇ ಈ ಬಾರಿಯ ಬಜೆಟ್ ಪ್ರಸ್ತಾವನೆಯು  ಯಾವುದೇ ಲಜ್ಜೆಯಿಲ್ಲದೇ ರಾಜ್ಯಗಳ ತೆರಿಗೆ ಪಾಲಿನ ಆದಾಯವನ್ನು ಕಬಳಿಸುವ  ಒಳ  ಯೋಜನೆಯನ್ನೂ ಹೊಂದಿದೆ. ಜೊತೆಗೆ ಸಾಮಾನ್ಯ ಜನರ ರಕ್ತ ಹೀರುತ್ತಿರುವ ತೆರಿಗೆ ಭಯೋತ್ಪಾದನೆಗೆ ಕಡಿವಾಣ ಹಾಕಲು ಸಹ ಕೇಂದ್ರ ಸರ್ಕಾರ ಮುಂದಾಗಿಲ್ಲ ಎನ್ನುವುದು ಈ ಬಜೆಟ್‌ನಲ್ಲಿ ಸ್ಪಷ್ಟವಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ತಿಳಿಸಿದರು.

ಕೇಂದ್ರ ಬಜೆಟ್ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿದ ಹೆಚ್.ಎ ವೆಂಕಟೇಶ್,  ಈಗಾಗಲೇ ಬಿಡುಗಡೆಯಾಗಿರುವ ಆರ್ಥಿಕ ಸಮೀಕ್ಷೆಯಲ್ಲಿ ಎನ್‌ ಡಿಯ ಸರ್ಕಾರ ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿರುವುದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಹಳ ನಿಸ್ಸಹಾಯಕವಾಗಿದೆ. ಹೀಗಾಗಿಯೇ ಈ ಬಾರಿಯ ಬಜೆಟ್‌ ನಲ್ಲಿ ಈ ಕಹಿ ಸತ್ಯವನ್ನು ಒಪ್ಪಿಕೊಳ್ಳುವುದು ಕೇಂದ್ರಕ್ಕೆ ಅನಿವಾರ‍್ಯವಾಗಿದೆ. ಈ ಕಾರಣದಿಂದ ನಿರ್ಮಲಾ ಬಹಳ ನಾಜೂಕು ಹಾದಿಯಲ್ಲಿ ನಡೆದಿದ್ದಾರೆ ಎನ್ನುವುದು ಈಗ ಖಚಿತಪಟ್ಟಿದೆ. ಇಂತಹ ತೊಡಕಿನ ಕಾರಣದಿಂದಲೇ ಯಾವುದೇ ನಿರ್ಣಾಯಕ ಹೆಜ್ಜೆ ಇಡಲು ಅಥವಾ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಮೋದಿ ನೇತೃತ್ವದ ಈ ಸರ್ಕಾರಕ್ಕೆ ಹಣಕಾಸು ಬೆನ್ನೆಲುಬಿನ ಬಲವಿಲ್ಲ ಎನ್ನುವುದು ಈ  ಬಜೆಟ್‌ನಿಂದ ಅಧಿಕೃತವಾಗಿ ಖಚಿತವಾದಂತಾಗಿದೆ ಎಂದು ಹೆಚ್.ಎ ವೆಂಕಟೇಶ್ ಟೀಕಿಸಿದ್ದಾರೆ.

ರಾಜ್ಯ ಸರ್ಕಾರಗಳ ಆದಾಯ ಕಬಳಿಸುವುದರಲ್ಲಿಯೇ ಆಸಕ್ತಿ ಹೊಂದಿರುವ ಕೇಂದ್ರ ಸರ್ಕಾರವು,  ನ್ಯಾಯಯುತ ತೆರಿಗೆ ಆದಾಯ ಪಾಲು ಮರಳಿರುವ ಬಗ್ಗೆ ಈ ಬಾರಿಯೂ ಚಿಂತಿಸದಿರುವುದು ಕಂಡು ಬರುತ್ತಿದೆ. ವಿಶೇಷವಾಗಿ ಕರ್ನಾಟಕಕ್ಕೆ ಯಾವುದೇ ನಿರ್ಧಿಷ್ಟ ಯೋಜನೆಯನ್ನು ಪ್ರಕಟಿಸದೇ ಘೋರ ಅನ್ಯಾಯವೆಸಗಲಾಗಿದೆ. ಕನಿಷ್ಠ ಪಕ್ಷ ಹಿಂದುಳಿದ ಉತ್ತರ ಕರ್ನಾಟಕದ ಭಾಗಕ್ಕೆ ಒಂದಾದರೂ ಐಐಟಿ, ಐಐಎಂ ಸಂಸ್ಥೆ ಮಂಜೂರು ಮಾಡದೇ ರಾಜ್ಯದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ.

ಇನ್ನು ಬಡಜನ ವಿರೋಧಿ ನಿಲುವಿಗೆ ಹೆಸರಾಗಿರುವ ನಿರ್ಮಲಾ ಅವರು ವಿಶೇಷವಾಗಿ ಯಾವುದೇ ಹೊಸ ಜನಪರ ಯೋಜನೆಯನ್ನು ಪ್ರಕಟಿಸಿಲ್ಲ. ಒಂದೇ ಒಂದು ಹೈಸ್ಪೀಡ್ ಟ್ರೈನ್ ರೂಟ್ ಸಂಪರ್ಕ ಬಿಟ್ಟರೆ ಇನ್ನಾವುದೇ ಲಾಭ ರಾಜ್ಯಕ್ಕೆ ಈ ಬಜೆಟ್‌ ನಿಂದ ಆದಂತಿಲ್ಲ ಎನ್ನುವುದು ಸ್ಪಷ್ಟ.

ದೇಶಾದ್ಯಂತ ಸಿದ್ದ ಉಡುಪು ಮತ್ತು ಜವಳಿ ಕ್ಷೇತ್ರ ಸೊರಗಿದೆ. ಇದಕ್ಕೆ ಯಾವುದೇ ನೆರವು ಸಿಕ್ಕಿಲ್ಲ. ರಾಜ್ಯದ ರೈತರ ಕಬ್ಬಿನ ಸಮಸ್ಯೆ ಬಗೆಹರಿದಿಲ್ಲ. ಮೂಲಭೂತ ಹಕ್ಕಾಗಿರುವ ಶುದ್ಧ ಗಾಳಿ ಮತ್ತು ಶುದ್ಧ ನೀರಿನ ಕುರಿತಾಗಿಯೂ ಯಾವುದೇ ಪರಿಣಾಮಕಾರಿ ಕ್ರಮಗಳಿಲ್ಲ. ಉದ್ಯಮ ಕ್ಷೇತ್ರ ಸೊರಗಿದ್ದು ಎಂಎಸ್‌ಎಂಇಗಳು ಬಾಗಿಲು ಮುಚ್ಚುತ್ತಿವೆ, ಉದ್ಯೋಗ ಸೃಷ್ಟಿ ಸೇರಿ ಯಾವುದೇ ಕ್ಷೇತ್ರಕ್ಕೆ ಒತ್ತು ಸಿಕ್ಕಿಲ್ಲ. ಹೀಗಾಗಿ ಇದೊಂದು ಕಡು ಜನವಿರೋಧಿ ಬಜೆಟ್ ಎನ್ನುವುದರಲ್ಲಿ  ಯಾವ ಅನುಮಾನವೂ ಇಲ್ಲ ಎಂದು ಹೆಚ್.ಎ ವೆಂಕಟೇಶ್ ಕಿಡಿಕಾರಿದ್ದಾರೆ.

Key words: An anti-people, central budget, H.A. Venkatesh