ಕೇಂದ್ರ ಬಜೆಟ್: ಜಿಲ್ಲೆಯ ಜನರಿಗೆ ಮಾಡಿದ ದೊಡ್ಡ ವಂಚನೆ-ಸಂಸದ ಸುನೀಲ್ ಬೋಸ್

ಚಾಮರಾಜನಗರ,ಫೆಬ್ರವರಿ,2,2026 (www.justkannada.in): ಕೇಂದ್ರ ಸರ್ಕಾರ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ಜಿಲ್ಲೆಯ ರೈತರು, ಬಡವರು ಮತ್ತು ಸಾಮಾನ್ಯ ಜನರಿಗೆ ಮಾಡಿದ ‘ದೊಡ್ಡ ವಂಚನೆ’ಯಾಗಿದೆ ಎಂದು ಚಾಮರಾಜನಗರ ಕಾಂಗ್ರೆಸ್ ಸಂಸದ  ಸುನೀಲ್ ಬೋಸ್ ಟೀಕಿಸಿದರು.

ಈ ಕುರಿತು ಮಾತನಾಡಿರುವ ಸಂಸದ ಸುನೀಲ್ ಬೋಸ್, ಜಿಲ್ಲೆಯ ಪ್ರಮುಖ ಬೇಡಿಕೆಗಳನ್ನು ಕಡೆಗಣಿಸಿರುವ ಈ ಬಜೆಟ್, ಕೇವಲ ಅಂಕಿ-ಅಂಶಗಳ ಮಾಯಾಜಾಲವಾಗಿದ್ದು ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಿದೆ.

​ ರೈತ ವಿರೋಧಿ ಧೋರಣೆ ಮತ್ತು ಕೃಷಿ ನಿರ್ಲಕ್ಷ್ಯ

​ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅರಿಶಿಣಕ್ಕೆ ಸಂಸ್ಕರಣಾ ಘಟಕ ಮತ್ತು ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಲ್ಲಿ ಕೇಂದ್ರ ವಿಫಲವಾಗಿದೆ. ” ರಾಷ್ಟ್ರೀಯ ಅರಿಶಿನ  ಮಂಡಳಿ” ವ್ಯಾಪ್ತಿಗೆ ಜಿಲ್ಲೆಯನ್ನು ಸೇರಿಸಬೇಕೆಂಬ  ನಮ್ಮ ನ್ಯಾಯಯುತ ಬೇಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕೃಷಿ ಪ್ರಧಾನ ಜಿಲ್ಲೆಯಾದ ನಮಗೆ ಈ ಬಜೆಟ್ ಶೂನ್ಯ ಕೊಡುಗೆ ನೀಡಿದೆ ಎಂದು ಕಿಡಿಕಾರಿದ್ದಾರೆ.

​ ಮೂಲಸೌಕರ್ಯ ಯೋಜನೆಗಳಿಗೆ ಎಳ್ಳುನೀರು

​ಚಾಮರಾಜನಗರ-ಹೆಜ್ಜಾಲ ರೈಲ್ವೆ ಯೋಜನೆಗೆ 100% ಅನುದಾನ ನೀಡದೆ ಜಿಲ್ಲೆಯ ಅಭಿವೃದ್ಧಿಯನ್ನು ಕುಂಠಿತಗೊಳಿಸಲಾಗಿದೆ. ಚಾಮರಾಜನಗರ-ಗುಂಡ್ಲುಪೇಟೆ ಮತ್ತು ಮೈಸೂರು-ಹೆಚ್.ಡಿ. ಕೋಟೆ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗಳನ್ನು ತಿರಸ್ಕರಿಸಿರುವುದು ಜಿಲ್ಲೆಯ ಸಂಪರ್ಕ ಕ್ರಾಂತಿಗೆ ಹಿನ್ನಡೆಯಾಗಿದೆ ಎಂದು ಸಂಸದ ಸುನೀಲ್ ಬೋಸ್ ವಾಗ್ದಾಳಿ ನಡೆಸಿದ್ದಾರೆ.

​ ಸಾಲದ ಸುಳಿಯಲ್ಲಿ ದೇಶದ ಆರ್ಥಿಕತೆ

​ 2014ರಲ್ಲಿ ₹55 ಲಕ್ಷ ಕೋಟಿಯಷ್ಟಿದ್ದ ದೇಶದ ಒಟ್ಟು ಸಾಲ, ಪ್ರಸ್ತುತ ₹185 ಲಕ್ಷ ಕೋಟಿಗೂ ಅಧಿಕವಾಗಿದೆ.  ದೇಶದ ಒಟ್ಟು ಸಾಲವು ಜಿಡಿಪಿಯ (GDP) ಶೇ. 83ಕ್ಕೂ ಹೆಚ್ಚು ತಲುಪಿದ್ದು, ದೇಶವು ಆರ್ಥಿಕ ತುರ್ತು ಪರಿಸ್ಥಿತಿಯತ್ತ ಸಾಗುತ್ತಿದೆ.  ಸರ್ಕಾರ ತನ್ನ ಒಟ್ಟು ಆದಾಯದ ಸುಮಾರು ಶೇ. 20ರಷ್ಟು ಹಣವನ್ನು ಕೇವಲ ಸಾಲದ ಬಡ್ಡಿ ಕಟ್ಟಲು ವ್ಯಯಿಸುತ್ತಿದೆ. ಇದರಿಂದ ಜನಸಾಮಾನ್ಯರ ಶಿಕ್ಷಣ, ಆರೋಗ್ಯಕ್ಕೆ ಹಣವಿಲ್ಲದಂತಾಗಿದೆ ಎಂದು ಸುನೀಲ್ ಬೋಸ್ ಅಸಮಾಧಾನ ವ್ಯಕ್ತಪಡಿಸಿದರು.

​ ಸಾಮಾಜಿಕ ಅನ್ಯಾಯ ಮತ್ತು ಉಳ್ಳವರ ಪರ ನಿಲುವು

​ಬಜೆಟ್‌ನಲ್ಲಿ ಸಾಮಾಜಿಕ ನ್ಯಾಯ ಕ್ಷೇತ್ರಕ್ಕೆ ಕೇವಲ 0.3% ಅನುದಾನ ಮೀಸಲಿಟ್ಟಿರುವುದು ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳಿಗೆ ಎಸಗಿದ ದ್ರೋಹವಾಗಿದೆ. ಇದು ಶೋಷಿತರ ಬಗ್ಗೆ ಕೇಂದ್ರಕ್ಕಿರುವ ತಾತ್ಸಾರಕ್ಕೆ ಸಾಕ್ಷಿ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿರುವ ಈ ಬಜೆಟ್ ಸಂಪೂರ್ಣವಾಗಿ ‘ಬಂಡವಾಳಶಾಹಿಗಳ ಪರ’ವಾಗಿದೆ.

“ರಾಜ್ಯದ ಕೇಂದ್ರ ಸಚಿವರು ಕರ್ನಾಟಕಕ್ಕೆ ಅದರಲ್ಲೂ ವಿಶೇಷವಾಗಿ ಚಾಮರಾಜನಗರ ಜಿಲ್ಲೆಗೆ ನ್ಯಾಯ ಕೊಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಸಾಲ ಮಾಡಿ ದೇಶವನ್ನು ಅಡವಿಡುತ್ತಿರುವ ಈ ಸರ್ಕಾರಕ್ಕೆ ಬಡವರ ನೋವು ಅರ್ಥವಾಗುತ್ತಿಲ್ಲ ಎಂದು ಸುನೀಲ್ ಬೋಸ್ ಹೇಳಿದ್ದಾರೆ.

Key words: Central Budget, Chamarajanagar, MP, Sunil Bose