ಮೈಸೂರು,ಜನವರಿ,29,2026 (www.justkannada.in): ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರ ವಿರುದ್ಧ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಅವರು ಅಧಿಕಾರ ಮೀರಿದ (Ultra Vires) ಕ್ರಮ ಕೈಗೊಂಡಿರುವ ಆರೋಪ ಕೇಳಿ ಬಂದಿದ್ದು ಈ ಸಂಬಂಧ 1 ಕೋಟಿ ರೂ. ಮಾನನಷ್ಟದ ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ನೋಟಿಸ್ ಜಾರಿ ಮಾಡಲಾಗಿದೆ.
ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ. ಟಿ. ಆರ್. ಚಂದ್ರಶೇಖರ್ ಅವರು ತಮ್ಮ ಹೈಕೋರ್ಟ್ ವಕೀಲರ ಮೂಲಕ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಅವರ ವಿರುದ್ಧ ಮಾನನಷ್ಟದ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವ ಕುರಿತು ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.
ಈ ಕುರತು ಮಾಹಿತಿ ನೀಡಿರುವ ಡಾ. ಟಿ. ಆರ್. ಚಂದ್ರಶೇಖರ್ ಅವರು, ನಾನು ಡಾ. ಟಿ. ಆರ್. ಚಂದ್ರಶೇಖರ್, ಕರ್ನಾಟಕದ ರಾಜ್ಯಪಾಲರಿಂದ ಸರ್ಕಾರದ ಆದೇಶದ ಮೂಲಕ ನಾಮನಿರ್ದೇಶಿತನಾಗಿ, ಮೈಸೂರು ವಿಶ್ವವಿದ್ಯಾಲಯದೆ ಸಿಂಡಿಕೇಟ್ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
ದಿನಾಂಕ 19-12-2025 ರಂದು ನಡೆದ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ನ ಮುಕ್ತ ಸಭೆಯಲ್ಲಿ, ಯಾವುದೇ ಪೂರ್ವ ನೋಟಿಸ್, ಕಾನೂನು ಅಧಿಕಾರ ಅಥವಾ ಸಿಂಡಿಕೇಟ್ ಅಧಿಕೃತ ಪ್ರಸ್ತಾವನೆ ಇಲ್ಲದೆ, ಕುಲಪತಿ ಪ್ರೊ. ಎನ್.ಕೆ. ಲೋಕನಾಥ್, ನನ್ನ ವಿರುದ್ಧ VC/PER/2025-26 ಸಂಖ್ಯೆಯ ನೋಟಿಸ್ ಅನ್ನು ಸಭೆಯಲ್ಲಿಯೇ ಸಾರ್ವಜನಿಕವಾಗಿ ಓದಿ ಜಾರಿಗೊಳಿಸಿರುವುದು ಗಂಭೀರ, ಅಧಿಕಾರ ಮೀರಿದ (Ultra Vires) ಹಾಗೂ ಸಂಪೂರ್ಣ ಕಾನೂನುಬಾಹಿರ ಕ್ರಮವಾಗಿದೆ.
ಈ ಕಾನೂನುಬಾಹಿರ ಕ್ರಮವನ್ನು ಪ್ರಶ್ನಿಸಿ, ನಾನು ದಿನಾಂಕ 24-12-2025 ರಂದು ವಿಸ್ತ್ರತ, ದಾಖಲೆ ಆಧಾರಿತ ಹಾಗೂ ಕಾನೂನುಬದ್ಧ ಪ್ರತ್ಯುತ್ತರವನ್ನು ಕುಲಪತಿಗಳಿಗೆ ಸಲ್ಲಿಸಿದ್ದೇನೆ. ಆ ಪ್ರತ್ಯುತ್ತರದಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ, 2000ರ ನೇರ ಉಲ್ಲಂಘನೆ, ಸ್ವಾಭಾವಿಕ ನ್ಯಾಯದ ತತ್ತ್ವಗಳ ಗಂಭೀರ ಉಲ್ಲಂಘನೆ, ರಾಜ್ಯಪಾಲರಿಂದ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರ ಮೇಲೆ ಕುಲಪತಿಗಳಿಗೆ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳುವ ಅಧಿಕಾರವೇ ಇಲ್ಲ ,ಸಂವಿಧಾನಾತ್ಮಕ ಸಂಸ್ಥೆಯ ಸ್ವಾಯತ್ತತೆಗೆ ಧಕ್ಕೆ ಎಂಬುದನ್ನು ಉಲ್ಲೇಖಿಸಲಾಗಿದೆ.
ಇದೇ ವೇಳೆ, ತೆರೆದ ಸಿಂಡಿಕೇಟ್ ಸಭೆಯಲ್ಲಿ ನಡೆದ ಸಾರ್ವಜನಿಕ ಅವಮಾನ, ಅಪಕೀರ್ತಿಕರ ಭಾಷೆ ಹಾಗೂ ಅಧಿಕಾರದ ದುರ್ಬಳಕೆಯ ಹಿನ್ನೆಲೆಯಲ್ಲಿ, ”ನನ್ನ ಪರ ಹೈಕೋರ್ಟ್ ವಕೀಲರ ಮೂಲಕ ಮಾನ್ಯ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಅವರ ವಿರುದ್ಧ ಒಂದು ಕೋಟಿ ರೂಪಾಯಿ ಮಾನನಷ್ಟದ -ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವ ಕುರಿತು ಕಾನೂನು ನೋಟಿಸ್ ದಿನಾಂಕ 24-01-2026 ರಂದು ಜಾರಿಗೊಳಿಸಲಾಗಿದೆ.
ಕಾನೂನು ನೋಟಿಸ್ ನಲ್ಲಿ ನನ್ನ ವ್ಯಕ್ತಿತ್ವ ಹಾಗೂ ಸಾರ್ವಜನಿಕ ಪ್ರತಿಷ್ಠೆಗೆ ಉಂಟಾದ ಹಾನಿ, ಅಧಿಕಾರ ಮೀರಿದ (Ultra Vires) ವರ್ತನೆ, ದುರುದ್ದೇಶಪೂರಿತ ಹಾಗೂ ಪ್ರತೀಕಾರಾತ್ಮಕ ಕ್ರಮ ಎಂಬ ಗಂಭೀರ ಆರೋಪಗಳನ್ನು ಸ್ಪಷ್ಟವಾಗಿ ದಾಖಲಿಸಲಾಗಿದೆ.
ನಾನು ಇಲ್ಲಿ ಸ್ಪಷ್ಟಪಡಿಸುವುದೇನೆಂದರೆ, ಈ ವಿಚಾರವು ಯಾವುದೇ ವ್ಯಕ್ತಿಗತ ಸಂಘರ್ಷವಲ್ಲ. ಇದು ಮೈಸೂರು ವಿಶ್ವವಿದ್ಯಾಲಯದ ಸ್ವಾಯತ್ತತೆ, ರಾಜ್ಯಪಾಲರ ಸಂವಿಧಾನಾತ್ಮಕ ಅಧಿಕಾರ, ವಿಶ್ವವಿದ್ಯಾಲಯ ಆಡಳಿತದ ಪಾರದರ್ಶಕತೆ, ಉನ್ನತ ಶಿಕ್ಷಣ ಸಂಸ್ಥೆಗಳ ಗೌರವ ಮತ್ತು ವಿಶ್ವಾಸಾರ್ಹತೆ, ಇವುಗಳಿಗೆ ಸಂಬಂಧಿಸಿದ ಗಂಭೀರ ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿದೆ.
ಈ ಎಲ್ಲಾ ಅಂಶಗಳನ್ನು ರಾಜ್ಯಪಾಲರು, ಕರ್ನಾಟಕ ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಎಲ್ಲಾ ಪ್ರಾಧಿಕಾರಗಳ ಗಮನಕ್ಕೆ ಔಪಚಾರಿಕವಾಗಿ ತರಲಾಗಿದೆ. ಮುಂದಿನ ಹಂತದಲ್ಲಿ, ನಾನು, ನನ್ನ ಹಕ್ಕುಗಳು, ಗೌರವ ಮತ್ತು ಸಂವಿಧಾನಾತ್ಮಕ ಸ್ಥಾನವನ್ನು ರಕ್ಷಿಸಿಕೊಳ್ಳಲು ಕರ್ನಾಟಕ ಹೈಕೋರ್ಟ್‌ನಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬುದನ್ನ ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಡಾ. ಟಿ. ಆರ್. ಚಂದ್ರಶೇಖರ್ ತಿಳಿಸಿದ್ದಾರೆ.
Key words: Mysore university, VC. Rs 1 crore, defamation suit, Notice







