ಸ್ಥಳೀಯ ಸಂಸ್ಥೆ ಚುನಾವಣೆಗೆ ಶಾಯಿ ಬಳಕೆ ಅನುಮಾನಸ್ಪದ: ನ್ಯಾಯಮೂರ್ತಿಗಳಿಂದ ವಿಚಾರಣೆಗೆ ಹೆಚ್.ಎ ವೆಂಕಟೇಶ್ ಆಗ್ರಹ

ಮೈಸೂರು,ಜನವರಿ,17,2026 (www.justkannada.in): ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಸರಿ ಇದೆ. ಚುನಾವಣೆಯಲ್ಲಿ ಖಾಸಗಿ ಸಂಸ್ಥೆಯ ಶಾಯಿ ಬಳಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಹೀಗಾಗಿ ಈ ಕುರಿತು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಿಂದ ವಿಚಾರಣೆ ನಡೆಸಲಿ ಎಂದು ಕೆಪಿಸಿಸಿ ವಕ್ತಾರ ಹಾಗೂ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಮಾಜಿ ಅಧ್ಯಕ್ಷ ಹೆಚ್.ಎ ವೆಂಕಟೇಶ್ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ಮಹಾರಾಷ್ಟ್ರದಲ್ಲಿ ಜರುಗಿದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ರಾಜ್ಯ ಚುನಾವಣಾ ಆಯೋಗ(State Election Commission) ಮಹಾರಾಷ್ಟ್ರ ಖಾಸಗಿ ಸಂಸ್ಥೆಯಾದ ” ಕೊರಸ್ ಇಂಡಿಯಾ ಲಿಮಿಟೆಡ್, ಮುಂಬೈ,” ಇವರಿಂದ ಅಳಿಸಲಾಗದ ಶಾಯಿ ಮಾರ್ಕರ್ ಪೆನ್ನುಗಳನ್ನು ಖರೀದಿಸಿ ಬಳಕೆ ಮಾಡಿದ್ದಾರೆ. ಹಲವು ಮತಗಟ್ಟೆಗಳಲ್ಲಿ ಮತದಾರರ ಬೆರಳಿಗೆ ಹಚ್ಚಿರುವ ಶಾಯಿಯ ಗುರುತು ನೇಲ್ ಪಾಲಿಶ್ ರಿಮೂವರ್ ಬಳಸಿ  ಅಳಿಸಿ ಹಾಕಿರುವುದು ಮತ್ತು ವರದಿಯಾಗಿರುವುದು ಬಹಳಷ್ಟು ವಿವಾದಕ್ಕೆ ಮಾಡಿಕೊಟ್ಟಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಗಳಿಗೆ ಅಳಿಸಲಾಗದ ಶಾಯಿಯನ್ನು ಆಯಾಯ ರಾಜ್ಯಗಳ ಚುನಾವಣಾ ಆಯೋಗಗಳು ಖಾಸಗಿ ಸಂಸ್ಥೆಗಳಿಂದಲೂ ಖರೀದಿಸಲು ಅವಕಾಶವಿದೆ. ಪ್ರಪಂಚದ 28 ದೇಶಗಳಿಗೆ ಅಳಿಸಲಾರದ ಶಾಯಿಯನ್ನು ಪೂರೈಸುವ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಸಂಸ್ಥೆಯು ಇದುವರೆಗೂ ತನ್ನ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಮೂಲಕ ಇಂತಹ ಆರೋಪಗಳು ಎಂದು ಸೃಷ್ಟಿಯಾಗಿಲ್ಲ. ಆದುದರಿಂದಲೇ ಕೆಲವು ರಾಜ್ಯಗಳ ಚುನಾವಣಾ ಆಯೋಗಗಳು ಇಂದಿಗೂ ತಮಗೆ ಬೇಕಾದ ಅಳಿಸಲಾಗದ ಶಾಹಿಯನ್ನು ಮೈಸೂರ್ ಪೇಂಟ್ಸ್ ಸಂಸ್ಥೆಯಿಂದಲೇ ಖರೀದಿಸುತ್ತಿವೆ ಎಂದು ತಿಳಿಸಿದ್ದಾರೆ.

ಮೈಸೂರು ಪೇಂಟ್ಸ್ ಸಂಸ್ಥೆ 1937ರಲ್ಲಿ ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟಿತು. 1962ರ  ಸಾರ್ವತ್ರಿಕ ಚುನಾವಣೆಯಿಂದ ಅಳಿಸಲಾಗದ ಶಾಯಿಯನ್ನು ಚುನಾವಣೆಗೆ ಸರಬರಾಜು ಮಾಡುವ ಪ್ರಕ್ರಿಯೆ ಆರಂಭಗೊಂಡಿತು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪ ಸರಿಯಾಗಿದೆ. ಪ್ರಪಂಚದಲ್ಲಿ ಹೆಸರು ಮಾಡಿರುವ ನಮ್ಮ ದೇಶದ ಹೆಮ್ಮೆಯ ಸಂಸ್ಥೆಯಾದ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಸಂಸ್ಥೆಯಿಂದ ಅಳಿಸಲಾರದ ಶಾಯಿಯನ್ನು ಬಳಸದೆ ಖಾಸಗಿ ಅವರಿಂದ ತಯಾರು ಮಾಡಿದ ಶಾಹಿಯನ್ನು ಬಳಸಿರುವುದು  ಖಂಡಿತ ಅನುಮಾನಸ್ಪದವಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡಲು ಮಹಾರಾಷ್ಟ್ರ  ರಾಜ್ಯ ಚುನಾವಣಾ ಆಯೋಗವು ಅವಕಾಶ ಕಲ್ಪಿಸಿದಂತಿದೆ . ರಾಹುಲ್ ಗಾಂಧಿಯವರ ಆರೋಪವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕಿದೆ . ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಿಂದ ವಿಚಾರಣೆ ನಡೆಯಬೇಕಿದೆ ಎಂದು ಹೆಚ್.ಎ ವೆಂಕಟೇಶ್ ಹೇಳಿದ್ದಾರೆ.

ದೇಶದ ಪ್ರಜಾಪ್ರಭುತ್ವಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದೆ. ಇಂತಹ ಘಟನೆಗಳನ್ನು ತಡೆಯುವುದು ಆಯೋಗದ  ,ಸರ್ಕಾರದ, ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಚುನಾವಣೆ ನಡೆದ ಮೇಲೆ ಮತದಾನದ ಬಗ್ಗೆ ಯಾವುದೇ ಸಂಶಯವಿಲ್ಲದಂತೆ ಕಾರ್ಯನಿರ್ವಹಿಸುವುದು ಚುನಾವಣಾ ಆಯೋಗದ  ಕರ್ತವ್ಯವಾಗಿದೆ.  ಚುನಾವಣೆ ಆಯೋಗ ಖಾಸಗಿ ಕಂಪನಿಯಿಂದ ಅಳಿಸಲಾರದ ಶಾಯಿಯನ್ನು ಬಳಸಲು ನಿರ್ಬಂಧಿಸಿ, ಸರ್ಕಾರಿ ಸಂಸ್ಥೆಯಾದ ಇದುವರೆಗೂ ತನ್ನ ಗುಣಮಟ್ಟವನ್ನು ಕಾಯ್ದುಕೊಂಡು ಯಾವುದೇ ಸಂಶಯಗಳಿಗೆ ಅನುಮಾನವಿಲ್ಲದಂತೆ ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಂಡಿರುವ ಕರ್ನಾಟಕದ ಸರ್ಕಾರಿ ಸ್ವಾಮ್ಯದ ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್ ಸಂಸ್ಥೆಯಿಂದಲೇ ಅಳಿಸಲಾರದ ಶಾಯಿಯನ್ನು ಉಪಯೋಗಿಸುವಂತೆ ಎಲ್ಲಾ ಚುನಾವಣೆಗಳಿಗೂ ಕಡ್ಡಾಯ ಮಾಡಬೇಕಿದೆ. ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಸಂಸ್ಥೆಯ ಮಾಜಿ ಅಧ್ಯಕ್ಷನಾಗಿ ಅಳಿಸಲಾಗದ ಶಾಯಿಯ ಗುಣಮಟ್ಟ ಹಾಗೂ ನಿಗದಿತ ಸಮಯದಲ್ಲಿ ಪೂರೈಸಲಾಗಿದೆ. ಭಾರತದ ಯಾವುದೇ ರಾಜ್ಯದಿಂದಲೂ ಮತ್ತು 28 ವಿವಿಧ ದೇಶಗಳಿಂದಲೂ ಆಕ್ಷೇಪಣೆಗಳು ಬಂದಿಲ್ಲ. ಈ ಸಂಸ್ಥೆ ಉತ್ಪಾದಿಸಿದ ಶಾಹಿಯನ್ನು ಅಳಿಸಲು ಯಾವುದರಿಂದಲೂ ಸಾಧ್ಯವಿಲ್ಲ .ಇಂತಹ ಸಂಸ್ಥೆಯನ್ನು ಬಿಟ್ಟು ಮಹಾರಾಷ್ಟ್ರದಲ್ಲಿ ಖಾಸಗಿ ಕಂಪನಿಗೆ ಅಳಿಸಲಾರದ ಶಾಹಿಯನ್ನು ಪೂರೈಸಲು ಅವಕಾಶ ಮಾಡಿಕೊಟ್ಟಿರುವುದು ಚುನಾವಣೆ ಆಯೋಗದ ಲೋಪವಾಗಿದೆ ಎಂದು ಕಿಡಿಕಾರಿದ್ದಾರೆ.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಮೈಸೂರು ಪೇಂಟ್ಸ್ ಅಂಡ್ ವಾರ್ನಿ‍ಷ್ ಸಂಸ್ಥೆಯಿಂದ ತಯಾರಾದ ಅಳಿಸಲಾರದ ಶಾಯಿಯನ್ನು ಭಾರತದ ಚುನಾವಣಾ ಆಯೋಗವು ಉಪಯೋಗಿಸುತ್ತಿದೆ. ಇಂತಹ ಆರೋಪಗಳು ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳು  ಇದುವರೆಗೆ ಒಂದು ಸಣ್ಣ ಆರೋಪವನ್ನು ಕೂಡ ಮಾಡಿರುವುದಿಲ್ಲ.  ರಾಹುಲ್ ಗಾಂಧಿ ಅವರ ಆರೋಪಕ್ಕೆ ಸಹಮತ ವ್ಯಕ್ತಪಡಿಸುತ್ತೇನೆ ಎಂದು ಎಚ್.ಎ ವೆಂಕಟೇಶ್ ತಿಳಿಸಿದ್ದಾರೆ.

Key words: Maharashtra, local body elections, Ink, HA Venkatesh