ಪಾದಚಾರಿ ಮಾರ್ಗ; ನಗರ ಪಾಲಿಕೆಗೆ ಒಪನ್ ಚಾಲೆಂಜ್..?

ಮೈಸೂರು,ಜನವರಿ,14,2026 (www.justkannada.in):  ಮೈಸೂರು ನಗರದಲ್ಲಿ ಕನಿಷ್ಠ ಒಂದು ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗವನ್ನು ಯಾವುದೇ ಒತ್ತುವರಿ ಇಲ್ಲದೆ ತೋರಿಸಿದರೆ, ಪಾಲಿಕೆಗೆ ನಾನು ಒಂದು ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ ಎಂದು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ವಕೀಲ ವೆಂಕಟೇಶ್ ಸವಾಲು ಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ನಗರದಲ್ಲಿನ ಪಾದಚಾರಿ ಮಾರ್ಗಗಳು ಸಂಪೂರ್ಣವಾಗಿ ಒತ್ತುವರಿಗೊಳಗಾಗಿದ್ದು, ಕಾಲ್ನಡಿಗೆಯವರಿಗೆ ನಡೆಯಲು ಕೂಡ ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅಂಗಡಿ ಮುಂಭಾಗದ ವಿಸ್ತರಣೆ, ತಾತ್ಕಾಲಿಕ ಶೆಡ್‌ ಗಳು, ಗೂಡಂಗಡಿ, ವಾಹನ ನಿಲುಗಡೆ ಸೇರಿ ಪಾದಚಾರಿ ಮಾರ್ಗಗಳು ನಾಶವಾಗಿವೆ ಎಂದು ವಕೀಲ ವೆಂಕಟೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಲಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾದಚಾರಿ ಮಾರ್ಗಗಳು ಸಂಪೂರ್ಣವಾಗಿ ಮಾಯವಾಗಿವೆ. ಜನರ ಜೀವದ ಭದ್ರತೆಯನ್ನೇ ಪಣಕ್ಕಿಟ್ಟಂತಾಗಿದೆ”ಎಂದು ಆರೋಪಿಸಿದರು.

ಇದಕ್ಕೆ ಸಾಕ್ಷಿಯಾಗಿ ಅವರು ಮೈಸೂರು ಮಹಾನಗರ ಪಾಲಿಕೆಗೆ ಸವಾಲು ಎಸೆದಿರುವ ವಕೀಲ ವೆಂಕಟೇಶ್, “ನಗರದಲ್ಲಿ ಕನಿಷ್ಠ ಒಂದು ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗವನ್ನು ಯಾವುದೇ ಒತ್ತುವರಿ ಇಲ್ಲದೆ ತೋರಿಸಿದರೆ, ಪಾಲಿಕೆಗೆ ನಾನು ಒಂದು ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ” ಎಂದು ಘೋಷಿಸಿದ್ದಾರೆ.

ಪಾಲಿಕೆ ವ್ಯಾಪ್ತಿ 17 ಸಾವಿರ ಚದರಡಿ ಬರುತ್ತದೆ.  12 ಸಾವಿರ ಕಿ.ಮೀ ವ್ಯಾಪ್ತಿ ಬಂದರೂ ಪುಟ್ ಪಾತ್ ಗಳ ತೆರವು ಕಾರ್ಯಾಚರಣೆ ಮಾಡಿಲ್ಲ . ಈ ವ್ಯಾಪ್ತಿಯಲ್ಲಿ ಅನಧಿಕೃತ ಮಳಿಗೆಗಳು ಹುಟ್ಟುಕೊಂಡಿವೆ. ಅವುಗಳನ್ನ ಪಾಲಿಕೆ ತೆರವುಗೊಳಿಸಿಲ್ಲ ಎಂದು ವೆಂಕಟೇಶ್ ಕಿಡಿಕಾರಿದ್ದಾರೆ.

ಈ ಸವಾಲು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪಾದಚಾರಿ ಮಾರ್ಗಗಳ ರಕ್ಷಣೆ ಹಾಗೂ ಒತ್ತುವರಿ ತೆರವು ಕುರಿತಾಗಿ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನಾಗರಿಕರು ಕಾದು ನೋಡುತ್ತಿದ್ದಾರೆ.

Key words: Footpath, Open challenge, Mysore city corporation, Lawyer