ಮೈಸೂರು,ಜನವರಿ,13,2026 (www.justkannada.in): ಪತ್ರಕರ್ತೆ ಹಾಗೂ ತಮ್ಮದೇ ಡಿಜಿಟಲ್ ಮಾಧ್ಯಮ ಸಂಸ್ಥೆ ಮುನ್ನೆಡೆಸುತ್ತಿರುವ ಕೆ.ಎಲ್ ನಂದಿನಿ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.
‘ಸಿನಿಮಾ ಮತ್ತು ರಾಜಕೀಯ ರಂಗಕ್ಕೆ ಖ್ಯಾತ ನಟ ಡಾ.ಅಂಬರೀಶ್ ಅವರ ಕೊಡುಗೆ ಒಂದು ಅಧ್ಯಯನ’ ವಿಷಯದ ಬಗ್ಗೆ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಎನ್ ಮಮತಾ ಅವರ ಮಾರ್ಗದರ್ಶನದಲ್ಲಿ ನಂದಿನಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಈ ಡಾಕ್ಟರೇಟ್ ಸಿಕ್ಕಿದೆ.
ಮೈಸೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 106ನೇ ಘಟಿಕೋತ್ಸವದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ ಸುಧಾಕರ್ ಪಿ.ಹೆಚ್ ಡಿ ಪದವಿ ಪ್ರದಾನ ಮಾಡಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಮತ್ತು ಉಪಕುಲಪತಿಗಳು ರಿಜಿಸ್ಟರ್ ಹಾಗು ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಘಟಿಕೋತ್ಸವದಲ್ಲಿ ಹಾಜರಿದ್ದರು.
ವಿಜಯ ಕರ್ನಾಟಕದ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟ ನಂದಿನಿ ಕೆ.ಎಲ್, ವೃತ್ತಿಯ ಜೊತೆ ಜೊತೆಗೆ ಸಂಶೋಧನೆಯನ್ನೂ ಕೈಗೊಂಡಿದ್ದರು. ನಂತರ ತಮ್ಮದೇ ಆದ ಡಿಜಿಟಲ್ ಮಾಧ್ಯಮ ಸಂಸ್ಥೆಯನ್ನು ಶುರು ಮಾಡಿ, ಅಪರೂಪದ ಸಂಚಿಕೆಗಳನ್ನು ನಾಡಿಗೆ ಪರಿಚಯಿಸಿದ್ದಾರೆ. ಅನೇಕ ಸಾಧಕರ ಸಂದರ್ಶನಗಳನ್ನೂ ಮಾಡಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ, ನಾಡಿನ ಅಚ್ಚರಿಗಳನ್ನು ಜನರಿಗೆ ಪರಿಚಯಿಸಿದ ಕೀರ್ತಿ ನಂದಿನಿ ಅವರದ್ದು.
ಹಾಸನದ ಆಲೂರಿನ ಕಿತಬೂರಿನ ಪುಟ್ಟ ಗ್ರಾಮದ ಅಪ್ಪಟ ಮಲೆನಾಡಿನ ಹಳ್ಳಿ ಪ್ರತಿಭೆ ನಂದಿನಿ. ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದಿ ಸೈನಿಸಿಕೊಂಡ ಹೆಣ್ಣು ಮಗಳು. ಕಾಲೇಜಿನ ದಿನಗಳಿಂದಲೇ ಓದಿನ ಜೊತೆ ಜೊತೆಗೆ ಹಲವಾರು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತ ಪತ್ರಿಕೋದ್ಯಮದ ಗೀಳು ಹೆಚ್ಚಿಸಿಕೊಂಡವರು.
ಹೆಸರಾಂತ ಪತ್ರಿಕೆಯಲ್ಲಿ ಸಿನಿಮಾ ಪತ್ರಕರ್ತೆಯಾಗಿ ಹಲವು ವರ್ಷಗಳ ಕಾರ್ಯ ನಿರ್ವಹಿಸುತ್ತಾ ಜೊತೆ ಜೊತೆಗೆ ಸಂಶೋಧನೆಯನ್ನು ಕೈಗೊಂಡರು.
ವಿದ್ಯಾಭ್ಯಾಸ ಜೊತೆಗೆ ಹೊಸ ತನ್ನದೇ ಆದಂತ ಡಿಜಿಟಲ್ ಮಾಧ್ಯಮ ಸಂಸ್ಥೆಯನ್ನು ಸ್ಥಾಪಿಸಿ, ಕರ್ನಾಟಕದ ಅತ್ಯಂತ ಪ್ರವಾಸ ಕೈಗೊಂಡು ಇತಿಹಾಸ ವ್ಯಕ್ತಿ ವಸ್ತು ಸ್ಥಳ ಸ್ಮಾರಕ ಜನಜೀವನಶೈಲಿಗಳ ಪರಿಚಯವನ್ನು ಕರುನಾಡಿಗೆ ಪರಿಚಯಿಸುತ್ತಾ ಸಾಕಷ್ಟು ಜನ ಮನ್ನಣೆಯನ್ನು ಗಳಿಸಿಕೊಂಡಿದ್ದಾರೆ.
ಶಿಕ್ಷಣ, ಕುಟುಂಬ, ವೈವಾಹಿಕ ಜೀವನ, ವೃತ್ತಿಜೀವನ ಎಲ್ಲವನ್ನು ಸಮಯ ಪಾಲನೆಯಿಂದ ನಿರ್ವಹಿಸುವ ನಂದಿನಿ, ತಮ್ಮ ಪತಿ ಆಕರ್ಷ ಹರಳಕಟ್ಟ ಅವರ ಜೊತೆಗೂಡಿ ಡಿಜಿಟಲ್ ಮಾಧ್ಯಮ ಸಂಸ್ಥೆ ನಡೆಸುತ್ತಿದ್ದಾರೆ.
ಅಭಿನಂದನೆ ಸಲ್ಲಿಸಿದ ಶಿವಾನಂದ ತಗಡೂರು
ಹಾಸನ ಜಿಲ್ಲೆ ಆಲೂರು ತಾಲೂಕಿನ ಕುಗ್ರಾಮದಿಂದ ಬೆಳೆದು ಬಂದ ನಂದಿನಿ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿ ಸದ್ಯ ಅವರದೇ ಸಂಸ್ಥೆ ಕಟ್ಟಿಕೊಂಡಿದ್ದಾರೆ. ಅವರು ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿವಿ ಡಾಕ್ಟರೇಟ್ ದೊರೆತಿರುವುದಕ್ಕಾಗಿ ನಂದಿನಿ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಅಭಿನಂದಿಸಿದ್ದಾರೆ.
Key words: Journalist, Nandini K.L, awarded, Mysore University, doctorate







