ಮೈಸೂರು,ಡಿಸೆಂಬರ್, 30,2025 (www.justkannada.in): ಎಲ್ಲರೂ ಹೊಸ ವರ್ಷಾಚರಣೆಗೆ ತುದಿಗಾಲಲ್ಲಿ ನಿಂತಿದ್ದು 2025ಕ್ಕೆ ಗುಡ್ ಬೈ ಹೇಳಿ 2026ರನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಂತೂ ಹೊಸವರ್ಷದ ಸಂಭ್ರಮಾಚರಣೆ ಅದ್ದೂರಿಯಾಗಿ ನಡೆಯುತ್ತದೆ. ಅಂತೆಯೇ ಸಾಂಸ್ಕೃತಿಕ ನಗರಿ ಮೈಸೂರು ಸಹ ಹೊಸ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗಿದೆ.
ಈ ಮಧ್ಯೆ ಮೈಸೂರು ಅರಮನೆ ಆವರಣದಲ್ಲಿ 2026ರ ಹೊಸ ವರ್ಷಾಚರಣೆ ಸಂಭ್ರಮ ನಡೆಯಲಿದೆ. ಹೌದು, ಹೊಸ ವರ್ಷದ ಪ್ರಯುಕ್ತ ಮೈಸೂರು ಅರಮನೆ ಆವರಣದಲ್ಲಿ ದಿನಾಂಕ: 31-12-2025 ರಂದು ರಾತ್ರಿ 11 ರಿಂದ 12 ಗಂಟೆವರೆಗೆ ಕರ್ನಾಟಕ ಮತ್ತು ಆಂಗ್ಲ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ, 12.00 ಗಂಟೆವರೆಗೆ ಅರಮನೆ ವಿದ್ಯುತ್ ದೀಪಾಲಂಕಾರವಿರಲಿದೆ ಮತ್ತು 12ಗಂಟೆಯಿಂದ 12.15 ರವರೆಗೆ ಬಣ್ಣಗಳ ಚಿತ್ತಾರದಿಂದ ಕೂಡಿದ ಶಬ್ಧರಹಿತ ಹಸಿರು ಪಟಾಕಿ ಸಿಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕೆಲವು ದಿನಗಳ ಹಿಂದೆ ಅರಮನೆ ಮುಂಭಾಗ ಹಿಲೀಯಂ ಸಿಲಿಂಡರ್ ಬ್ಲಾಸ್ಟ್ ಆಗಿ ಬಲೂನ್ ಮಾರುವ ವ್ಯಕ್ತಿ ಸೇರಿ ಮೂರು ಜನ ಸಾವನ್ನಪ್ಪಿದ ದುರಂತ ಘಟನೆ ನಡೆದಿತ್ತು. ಹೀಗಾಗಿ ಈ ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯುತ್ತೋ? ಇಲ್ಲವೋ? ಎಂಬ ಅನುಮಾನ ಜನರಲ್ಲಿ ಮೂಡಿತ್ತು. ಇದೀಗ ಮೈಸೂರು ಅರಮನೆ ಮಂಡಳಿ ಹೊಸ ವರ್ಷದ ಕಾರ್ಯಕ್ರಮವನ್ನ ನಡೆಸುವ ತೀರ್ಮಾನಕ್ಕೆ ಬಂದಿದೆ. ಹೀಗಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಅರಮನೆ ಆವರಣದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯಲಿದೆ.
Key words: New Year, celebrations, Mysore Palace







