ಕರ್ನಾಟಕ ಸರ್ಕಾರ ಬುಲ್ಡೋಜರ್ ನೀತಿ ಅನುಸರಿಸುತ್ತಿದೆ- ಕೇರಳ ಸಿಎಂ ಪಿಣರಾಯಿ ವಿಜಯನ್ ಕಿಡಿ

ಬೆಂಗಳೂರು, ಡಿಸೆಂಬರ್, 27,2025 (www.justkannada.in): ಬೆಂಗಳೂರಿನ  ಯಲಹಂಕದ ಕೋಗಿಲು ಗ್ರಾಮದ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿರುವ ಮುಸ್ಲಿಂ ವಸತಿಗಳನ್ನು ನೆಲಸಮ ಮಾಡಿರುವುದು ತುಂಬಾ ದುಃಖಕರ ವಿಚಾರ. ಕರ್ನಾಟಕ ಸರ್ಕಾರವೂ ಬುಲ್ಡೋಜರ್ ನೀತಿ ಅನುಸರಿಸುತ್ತಿದೆ ಎಂದು ಟ್ವೀಟ್ ಮಾಡಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಕರ್ನಾಟಕದ ರಾಜ್ಯ ಸರ್ಕಾರಕ್ಕೂ ಉತ್ತರ ಪ್ರದೇಶದ ಗಾಳಿ ಬಿಸಿದೆ. ಅಲ್ಲಿನ ಬುಲ್ಡೋಜರ್ ನೀತಿಯನ್ನು ಇಲ್ಲೂ ತರುವ ಕೆಲಸ ನಡೆಯುತ್ತಿದೆ. ಬೆಂಗಳೂರಿನ  ಯಲಹಂಕದ ಕೋಗಿಲು ಗ್ರಾಮದ ಫಕೀರ್ ಕಾಲೋನಿ ಮತ್ತು ವಸೀಮ್ ಲೇ ಔಟ್‌ನಲ್ಲಿ ಮುಸ್ಲಿಂ ಕುಟುಂಬಗಳು ಹಲವು ವರ್ಷಗಳಿಂದ ವಾಸಿಸುತ್ತಿದ್ದವು. ಇದೀಗ ಏಕಾಏಕಿ ಬಂದು ಮನೆಗಳನ್ನು ನೆಲಸಮ ಮಾಡಿದರೆ ಅವರು ಎಲ್ಲಿಗೆ ಹೋಗಬೇಕು. ಈ ಚಳಿಯಲ್ಲಿ ಮಕ್ಕಳ, ಮಹಿಳೆಯರನ್ನು ಬೀದಿಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಘ ಪರಿವಾರದ ಅಲ್ಪಸಂಖ್ಯಾತ ವಿರೋಧಿ ರಾಜಕೀಯವನ್ನು ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೂಡ ಮಾಡುತ್ತಿದೆ. ಭಯ ಮತ್ತು ಕ್ರೂರತೆಯ ಬಲದ ಮೂಲಕ ಆಡಳಿತ ನಡೆಸುವಾಗ, ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವ ಘನತೆಯು ಮೊದಲ ಬಲಿಪಶುಗಳಾಗುತ್ತವೆ. ಈ ಮೋಸದ ಪ್ರವೃತ್ತಿಯನ್ನು ವಿರೋಧಿಸಲು ಮತ್ತು ಸೋಲಿಸಲು ಎಲ್ಲಾ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಶಕ್ತಿಗಳು ಒಟ್ಟಾಗಿ ಒಟ್ಟುಗೂಡಬೇಕು’ ಎಂದು ಪಿಣರಾಯಿ ವಿಜಯನ್ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೋಗಿಲು ಬಂಡೆ ಬಳಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಗೆ ಮೀಸಲಿಟ್ಟ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ 150ಕ್ಕೂ ಅಧಿಕ ಶೆಡ್‌ ಹಾಗೂ ಶೀಟ್‌ ಮನೆಗಳನ್ನು ತೆರವುಗೊಳಿಸಲಾಗಿದೆ.

Key words: Karnataka government, bulldozer policy, Kerala ,CM, Pinarayi Vijayan