ಮಂಡ್ಯ,ಡಿಸೆಂಬರ್,10,2025 (www.justkannada.in): ಕಾವೇರಿ ನದಿಯ ನೀರು ಕಲುಷಿತಗೊಳ್ಳುತ್ತಿರುವುದನ್ನು ತಡೆಗಟ್ಟುವ ಸಂಬಂಧ ಶ್ರಿರಂಗಪಟ್ಟಣದಲ್ಲಿನ ವೆಲ್ಲೆಸ್ಲಿ ಸೇತುವೆ ಬಳಿಯ ಕಾವೇರಿ ನದಿಯ ತಟಕ್ಕೆ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. 
ಕಾವೇರಿ ನದಿಯ ನೀರು ಹಾಗೂ ದಡವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಸ್ಥಳದಲ್ಲಿ ಹಾಜರಿದ್ದ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಕ್ರಮಗಳ ಬಗ್ಗೆ ಸೂಚಿಸಿದರು.
ಕಾವೇರಿ ನದಿಗೆ ತ್ಯಾಜ್ಯ ನೀರು ಮತ್ತು ಕೈಗಾರಿಕಾ ತ್ಯಾಜ್ಯಗಳು ಎಲ್ಲಿಂದ ಮತ್ತು ಯಾವ ಪ್ರಮಾಣದಲ್ಲಿ ಹರಿಯುತ್ತಿವೆ ಎಂಬುದನ್ನು ಪತ್ತೆಹಚ್ಚಬೇಕು. ಕೊಳಚೆ ನೀರು ಹರಿಯುವ ಪ್ರದೇಶಗಳಲ್ಲಿ ತಡೆಗೋಡೆಗಳು ಅಥವಾ ಮಾರ್ಗಾಂತರ ವ್ಯವಸ್ಥೆಗಳನ್ನು (Diversion Channels) ನಿರ್ಮಿಸಲು ಸೂಕ್ತ ಸ್ಥಳಗಳನ್ನು ಗುರುತಿಸಬೇಕು. ಲಭ್ಯವಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (STP) ಸಾಮರ್ಥ್ಯ ಮತ್ತು ಅವುಗಳ ಪರಿಣಾಮಕಾರಿತ್ವವನ್ನು ಪರಿಶೀಲಿಸಬೇಕು. ನದಿಯ ಉದ್ದಕ್ಕೂ ಇರುವ ನಗರ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳು (ULBs) ಕಸ ಮತ್ತು ತ್ಯಾಜ್ಯ ವಿಲೇವಾರಿ ಕುರಿತು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.
ಹಾಗೆಯೇ ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ STP ನಿರ್ಮಿಸಲು ಸಾಧ್ಯವಾಗದ ಕಾರಣ, ಅವುಗಳ ತ್ಯಾಜ್ಯವನ್ನು ಸಂಸ್ಕರಿಸಲು ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳ (CETPs) ಕಡ್ಡಾಯ ಬಳಕೆ ಮತ್ತು ಮೇಲ್ವಿಚಾರಣೆಯನ್ನು ಬಲಪಡಿಸಬೇಕು. ಶೂನ್ಯ ದ್ರವ ವಿಸರ್ಜನೆ (Zero Liquid Discharge – ZLD) ನಿಯಮ: ಹೆಚ್ಚು ಮಾಲಿನ್ಯಕಾರಕ ಕೈಗಾರಿಕೆಗಳಿಗೆ (High Polluting Industries) ZLD ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಂದರೆ, ಯಾವುದೇ ಸಂಸ್ಕರಿಸದ ಅಥವಾ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪರಿಸರಕ್ಕೆ ಬಿಡುವಂತಿಲ್ಲ ಎಂದು ಡಿಸಿ ಕುಮಾರ್ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಪ್ರತಾಪ್, ಹಾಗೂ ಶ್ರೀರಂಗಪಟ್ಟಣ ಪುರಸಭೆಯ ಮುಖ್ಯಾಧಿಕಾರಿ ರಾಜಣ್ಣರವರು ಹಾಗೂ ಇನ್ನಿತರೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Mandya, DC, prevent, pollution, Cauvery river, water







