ಮೈಸೂರು, ನವೆಂಬರ್,26,2025 (www.justkannada.n): ವಿದ್ಯಾರ್ಥಿನಿಗೆ ಅಸಭ್ಯ ಮೆಸೇಜ್‌ಗಳನ್ನು ಕಳಿಸಿ, ದೈಹಿಕವಾಗಿ ಸಹಕರಿಸುವಂತೆ ಕಿರುಕುಳ ನೀಡಿದ ಆರೋಪದ ಮೇಲೆ ಮೈಸೂರು ವಿಶ್ವವಿದ್ಯಾನಿಲಯದ ರೇಷ್ಮೆ ವಿಭಾಗದ ಪ್ರಾಧ್ಯಾಪಕನನ್ನು ಅಮಾನತು ಮಾಡಲು ಮೈಸೂರು ವಿವಿ ಸಿಂಡಿಕೇಟ್ ಸಭೆ ನಿರ್ಣಯ ಕೈಗೊಳ್ಳಲಾಗಿದೆ.
ಪ್ರಾಧ್ಯಾಪಕ ಡಾ.ಉಮಾಕಾಂತ್ ವಿರುದ್ದವೇ ಈ ಆರೋಪ ಕೇಳಿಬಂದಿರುವುದು. ಮೈಸೂರು ವಿವಿ ಕುಲಪತಿ ಪ್ರೊ. ಎನ್.ಕೆ.ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು. ಪ್ರಾಧ್ಯಾಪಕ ಡಾ.ಉಮಾಕಾಂತ್ ವಿದ್ಯಾರ್ಥಿನಿಗೆ ಅಸಭ್ಯ ಮೆಸೇಜ್ ಗಳನ್ನು ರವಾನಿಸಿ, ತನಗೆ ದೈಹಿಕವಾಗಿ ಸಹಕರಿಸಬೇಕು ಎಂದು ಕಿರುಕುಳ ನೀಡುತ್ತಿರುವುದಾಗಿ ವಿದ್ಯಾರ್ಥಿನಿ ವಿವಿಗೆ ದೂರು ನೀಡಿದ್ದರು.
ವಿದ್ಯಾರ್ಥಿನಿಯೂ ಸುಮಾರು ನಾಲ್ಕೈದು ತಿಂಗಳ ಕಾಲ ಪ್ರಾಧ್ಯಾಪಕನ ಕಿರುಕುಳವನ್ನು ಸಹಿಸಿಕೊಂಡಿದ್ದರು ಎನ್ನಲಾಗಿದೆ. ಕೊನೆಗೆ ಅನ್ಯ ಮಾರ್ಗವಿಲ್ಲದೇ ಲಿಖಿತ ದೂರು ನೀಡಿದ್ದರು. ಈ ಸಂಬಂಧ ಆಂತರಿಕ ತನಿಖೆಗೆ ರಚಿಸಲಾಗಿದ್ದ ಸಮಿತಿಯು ಕೂಲಂಕುಷವಾಗಿ ವಿಚಾರಣೆ ನಡೆಸಿ, ವಿದ್ಯಾರ್ಥಿನಿಗೆ ಪ್ರಾಧ್ಯಾಪಕ ರವಾನಿಸಿರುವ ಮೆಸೇಜ್ ಗಳನ್ನು ಪರಿಶೀಲಿಸಿ, ಒಂದೇ ದಿನದಲ್ಲಿ ವರದಿ ಸಲ್ಲಿಸಿದ್ದು, ಪ್ರಾಧ್ಯಾಪಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಶಿಫಾರಸ್ಸು ಮಾಡಿದೆ ಎಂಬುದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಈ ಸಂಬಂಧ ಚರ್ಚೆ ನಡೆದು, ಪ್ರಾಧ್ಯಾಪಕ ಡಾ.ಉಮಾಕಾಂತ್ ಅವರನ್ನು ಅಮಾನತುಪಡಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಇನ್ನು ಮೈಸೂರು ವಿವಿ ವ್ಯಾಪ್ತಿಗೆ ಒಳಪಟ್ಟಿರುವ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಗುಣಮಟ್ಟದ ಆಹಾರ ಪೂರೈ ಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗಕ್ಕೆ ಹೊರಗಿನವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂಬ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರಲ್ಲಿ ಒಳಜಗಳ ಹೆಚ್ಚಾಗಿದೆ. ಒಬ್ಬರ ವಿರುದ್ಧ ಒಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಾ, ಮೈಸೂರು ವಿವಿಯ ವರ್ಚಸ್ಸಿಗೆ ಮಸಿ ಬಳಿಯುತ್ತಿದ್ದಾರೆ ಎಂಬ ಆರೋಪಗಳು ಸಭೆಯಲ್ಲಿ ಕೇಳಿಬಂದವು. ಈ ವಿಭಾಗದಲ್ಲೇ ನಿಯಮ ಮೀರಿ ಒಳಜಗಳದಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು.
Key words: Mysore University, professor, suspended, harassing , student







