ಮೈಸೂರು,ನವೆಂಬರ್,13,2025 (www.justkannada.in): ಪ್ರತಿನಿತ್ಯ ಮುಂಜಾನೆ ಹಾಗೂ ಸಂಜೆ ಶ್ರದ್ಧೆ ಹಾಗೂ ನಿಷ್ಠೆಯಿಂದ ಮನೆ ಮನೆಗಳಿಗೆ ಪತ್ರಿಕೆ ವಿತರಣೆ ಮಾಡುವ ಪತ್ರಿಕಾ ವಿತರಕರ ಸುರಕ್ಷತೆ ದೃಷ್ಟಿಯಿಂದ ನಗರದಲ್ಲಿ ತಂಗುದಾಣ ನಿರ್ಮಿಸಲು ಕ್ರಮವಹಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರು ಭರವಸೆ ನೀಡಿದರು.
ನಗರದ ಚಿಕ್ಕಗಡಿಯಾರದ ಬಳಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗುರುವಾರ ಮುಂಜಾನೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಎಂಎಲ್ ಸಿ ಕೆ.ಶಿವಕುಮಾರ್ ಅವರು, ಪತ್ರಿಕಾ ವಿತರಕರು ಪತ್ರಿಕೆಗಳ ಜೀವಾಳ. ಹಿರಿಯರು, ಕಿರಿಯರು ಎನ್ನದೆ ಬದ್ಧತೆಯಿಂದ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ಸುದ್ದಿಮನೆಯಲ್ಲಿ ಮುದ್ರಣಗೊಂಡ ಪತ್ರಿಕೆಯನ್ನು ಒಂದು ದಿನವೂ ತಪ್ಪಿಸದೆ ಮುಂಜಾನೆಯೇ ಓದುಗರ ಕೈಗಿಡುವ ಕೆಲಸವನ್ನು ವಿತರಕರು ಮಾಡುತ್ತಾರೆ. ಪತ್ರಿಕೆಗಳನ್ನು ಜೋಡಿಸಲು ನಿಗದಿತ ಸ್ಥಳವನ್ನು ನಗರ ಪಾಲಿಕೆ ಗುರುತಿಸಿ ಕೊಟ್ಟರೆ, ವಿತರಕರಿಗೆ ಅನುಕೂಲವಾಗುವಂತೆ ತಂಗುದಾಣ ನಿರ್ಮಿಸಲಾಗುವುದು ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲೂ ಅತ್ಯಂತ ಸವಾಲಿನಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಇತ್ತೀಚಿಗೆ ಪತ್ರಿಕೆಗಳ ಡಿಜಿಟಲ್ ರೂಪ ಪಡೆದಿರುವುದರಿಂದ ಪ್ರಸರಣವು ಕಡಿಮೆಯಾಗಿದೆ. ಇದರಿಂದ ವಿಚಲಿತರಾಗುವ ಅವಶ್ಯಕತೆ ಇಲ್ಲ ಎಂದರು.
ಪತ್ರಿಕೆ ವಿತರಿಸುವ ವಿದ್ಯಾರ್ಥಿಗಳು ಇದನ್ನು ಅರಕಾಲಿಕ ವೃತ್ತಿಯಂತೆ ಮಾಡಿ ಓದಿನ ಖರ್ಚಿಗೆ ಒಂದಷ್ಟು ಹಣ ಸಂಪಾದಿಸಬೇಕು. ಯಾವುದೇ ಕಾರಣಕ್ಕೂ ಓದನ್ನು ನಿಲ್ಲಿಸಬಾರದು. ಸರ್ಕಾರದಿಂದ ಈಗಾಗಲೇ ಆರೋಗ್ಯ ವಿಮೆ ಕಲ್ಪಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಒಳಗಾಗಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವ ವಿತರಕರಿಗೆ ಸರ್ಕಾರದಿಂದ ನೆರವು ಕೊಡಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ , ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ. ರಾಘವೇಂದ್ರ , ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತರಾದ ನಂದಿ ದ್ವಜ ಉಡಿಗಾಲ ಮಹದೇವಪ್ಪ , ಜವರಪ್ಪ , ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಎಸ್.ಹೋಮದೇವ, ರಾಜೇಶ್ ಕುಮಾರ್, ಉಪಾಧ್ಯಕ್ಷ ಎಂ ನಾಗರಾಜು, ಪ್ರಧಾನ ಕಾರ್ಯದರ್ಶಿ ಸಿ.ಶಿವಣ್ಣ, ಪತ್ರಿಕಾ ಕಾರ್ಯದರ್ಶಿ ಶ್ರೀಕಾಂತ್, ಸಲಹೆಗಾರರಾದ ಸಿ.ಆರ್.ದತ್ತಾತ್ರೇಯ, ಹರಿರಾವ್, ಎಸ್.ನಾಗೇಶ್ ಕಾವ್ಯ ಪ್ರಿಯ, ಸಿ.ರಾಜಶೇಖರ್, ಗೋವಿಂದ್ ಶೆಟ್ಟಿ, ಕನಕ ರತ್ನ, ಈಶ್ವರ ಪ್ರಸಾದ್, ಪ್ರಕಾಶ್, ನಂಜುಂಡಯ್ಯ, ಈಶ್ವರ, ಆರಾಧ್ಯ, ಚಂದ್ರು, ಜೈದೇವ್, ಹೊನ್ನಪ್ಪ, ಮಹೇಶ್, ಗುಂಡಪ್ಪ, ಶಿವಣ್ಣ, ಕಿರಣ್, ಸಂತೋಷ್, ಜಿ.ಕುಮಾರ್, ಪ್ರಭಾಕರ್ ರಾವ್ ಇನ್ನಿತರರು ಇದ್ದರು.
Key words: Mysore, construct, press, distributors, MLC, K. Shivakumar







