ಬೆಂಗಳೂರು ನವೆಂಬರ್,1,2025 (www.justkannada.in): ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಕನ್ನಡ ನೆಲದಲ್ಲಿ ಉದ್ಯೋಗ ನಷ್ಟವಾಗದಂತೆ ನಮ್ಮ ಭಾಷೆಯನ್ನು ಹೊಸ ಸವಾಲಿಗೆ ಬೇಕಾದ ಹಾಗೆ ಸಿದ್ಧಪಡಿಸಲು ಸರ್ಕಾರ ಬದ್ದವಾಗಿದೆ. ಕನ್ನಡವನ್ನು ಹೊಸ ತಂತ್ರಜ್ಞಾನದ ಭಾಷೆಯನ್ನಾಗಿಸಲು ವಿದ್ವಾಂಸರು, ತಾಂತ್ರಿಕ ತಜ್ಞರು ಮುಂದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ನಾಡನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮುಯ್ಯ, ಮಾಹಿತಿ ತಂತ್ರಜ್ಞಾನ ಯುಗ ಈಗ ಆರ್ಟಿಫಿಷಿಯಲ್ ತಂತ್ರಜ್ಞಾನದ ಯುಗವಾಗಿ ಮಾರ್ಪಾಡಾಗುತ್ತಿದೆ. ಇದರಿಂದ ಉದ್ಯೋಗ ನಷ್ಟವಾಗಬಹುದು ಎಂಬ ಆತಂಕವೂ ಎದುರಾಗಿದೆ. ಕನ್ನಡ ಭಾಷೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಎತ್ತರಿಸುವ ಕಾರ್ಯವನ್ನೂ ನಮ್ಮ ಸರ್ಕಾರ ಮಾಡುತ್ತಿದೆ. ಇದರ ಭಾಗವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಉದ್ಯೋಗ ನಷ್ಟವಾಗದಂತೆ ನಮ್ಮ ಭಾಷೆಯನ್ನು ಹೊಸ ಸವಾಲಿಗೆ ಬೇಕಾದ ಹಾಗೆ ಸಿದ್ಧಪಡಿಸಲು ಸರ್ಕಾರ ಬದ್ದವಾಗಿದೆ. ಕನ್ನಡವನ್ನು ಹೊಸ ತಂತ್ರಜ್ಞಾನದ ಭಾಷೆಯನ್ನಾಗಿಸಲು ವಿದ್ವಾಂಸರು, ತಾಂತ್ರಿಕ ತಜ್ಞರು ಮುಂದಾಗಿ ಎಂದು ಕರೆ ನೀಡಿದರು.
ಇದರ ಜೊತೆಗೆ 800 ಕನ್ನಡ ಶಾಲೆಗಳು ಮತ್ತು 100 ಉರ್ದು ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಅಭಿವೃದ್ಧಿ ಮಾಡಲಾಗುತ್ತಿದೆ.
ಮದರಸಾಗಳಲ್ಲಿ ಕನ್ನಡ ಕಲಿಸಲು ಆದ್ಯತೆ ನೀಡುತ್ತಿದ್ದೇವೆ. ಕನ್ನಡ ಭಾಷೆ, ಪರಂಪರೆಗಳನ್ನು ಜಾಗತಿಕ ಮಟ್ಟಕ್ಕೆ ಎತ್ತರಿಸಬೇಕಾದ ಅನಿವಾರ್ಯತೆಯಿರುವುದರಿಂದ ಇದಕ್ಕಾಗಿ ಹೊಸ ನೀತಿಯನ್ನು ತರುವ ಸಿದ್ಧತೆಯಲ್ಲಿದ್ದೇವೆ ಎಂದರು.
ರಾಜ್ಯದಲ್ಲಿ ಶತಮಾನ ಪೂರೈಸಿರುವ ಸುಮಾರು 3000 ಸರ್ಕಾರಿ ಶಾಲೆಗಳಿವೆ. ರಾಜ್ಯದಲ್ಲಿ ಶಾಲಾ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಸಲುವಾಗಿ ರಾಜ್ಯಾದ್ಯಂತ 2,500 ಕೋಟಿ. ರೂ. ವೆಚ್ಚದಲ್ಲಿ 800 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ (KPS) ಪರಿವರ್ತಿಸಿ ಪ್ರತಿ ಶಾಲೆಯನ್ನು 4 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದರು.
ಅಲ್ಪಸಂಖ್ಯಾತ ಸಮುದಾಯಗಳು ಮುಖ್ಯವಾಹಿನಿಗೆ ಬರುವ ಜೊತೆಗೆ ಸುಲಭವಾಗಿ ಸಮಾಜದಲ್ಲಿ ಬೆರೆಯುವಂತೆ ಪ್ರಾಥಮಿಕ ಕನ್ನಡವನ್ನು ಮದರಸಾ ಶಿಕ್ಷಣದ ಭಾಗವಾಗಿ ಕಲಿಸಲು ಪ್ರಸ್ತುತ ವರ್ಷದಲ್ಲಿ 180 ಮದರಸಾಗಳಲ್ಲಿ ಕನ್ನಡ ಕಲಿಸಲಾಗುತ್ತಿದೆ. ಇದನ್ನು ರಾಜ್ಯದಲ್ಲಿರುವ 1500 ಮದರಸಾಗಳಿಗೆ ವಿಸ್ತರಿಸಲಾಗುವುದು. ಇದಕ್ಕಾಗಿ ರೂ.483 ಕೋಟಿ ವೆಚ್ಚದಲ್ಲಿ 100 ಉರ್ದು ಶಾಲೆಗಳನ್ನು ಕೆ.ಪಿ.ಎಸ್. ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸಿಎಂ ಸಿದ್ದರಾಮಯ್ಯ ಭಾಷಣದ ಇತರೆ ಮುಖ್ಯಾಂಶಗಳು ಹೀಗಿದೆ….
1956 ರಂದು ಏಕೀಕರಣಗೊಂಡ ನಮ್ಮ ಕರ್ನಾಟಕ ರಾಜ್ಯ ಉದಯವಾಗಿ ನವೆಂಬರ್ 1, 2025 ಕ್ಕೆ 69 ವರ್ಷ ಪೂರೈಸಿ 70 ನೇ ವರ್ಷಕ್ಕೆ ಮುನ್ನಡೆಯುತ್ತಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಎಲ್ಲ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಮೈಸೂರಿನ ವಿದ್ಯಾರ್ಥಿ ರಾಮಸ್ವಾಮಿ, ಬಳ್ಳಾರಿಯ ರಂಜಾನ್ ಸಾಬ್ ಮುಂತಾದವರಿಗೆ ತಲೆಬಾಗಿ ನಮಿಸುತ್ತೇನೆ.
ಏಕೀಕರಣ ಚಳುವಳಿಯ ಬೀಜಗಳನ್ನು ಬಿತ್ತಿ, ಅದನ್ನು ಮುನ್ನಡೆಸಿದ ಆಲೂರು ವೆಂಕಟರಾಯರು, ಅಂದಾನಪ್ಪ ದೊಡ್ಡಮೇಟಿ, ಗುದ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಂಬಳಿ, ಆರ್.ಎಚ್. ದೇಶಪಾಂಡೆ, ಕೌಜಲಗಿ ಶ್ರೀನಿವಾಸ ರಾವ್, ಕೆಂಗಲ್ ಹನುಮಂತಯ್ಯ ಮುಂತಾದ ಮಹನೀಯರನ್ನು ಹೃದಯ ತುಂಬಿ ಸ್ಮರಿಸುತ್ತೇನೆ. ಇವರೆಲ್ಲರ ಹೋರಾಟದ ಫಲವೆ ಇಂದಿನ ಕರ್ನಾಟಕ.
‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದ ಆದಿಕವಿ ಪಂಪನಿಂದ ಹಿಡಿದು ಇಲ್ಲಿಯವರೆಗೂ ಕನ್ನಡದ ಸಾಹಿತ್ಯ ಸಂಪತ್ತು ಸಾಕಷ್ಟು ಸಮೃದ್ಧಗೊಂಡಿದೆ. ನಮ್ಮ ಕನ್ನಡ ಭಾಷೆಗೆ ಶಾಸ್ತಿçÃಯ ಭಾಷೆಯ ಸ್ಥಾನಮಾನ ದೊರಕಿದೆ.
ಬಹು ಭಾಷೆ, ಬಹು ಧರ್ಮ, ಬಹು ಸಂಸ್ಕೃತಿ ಹಾಗೂ ಬಹು ಜನಾಂಗಗಳು ಒಟ್ಟುಗೂಡಿ ಬದುಕುವ ತತ್ವಗಳನ್ನು ನಮ್ಮ ಹಿರಿಯರು ಕಂಡುಕೊಂಡಿದ್ದು, ಹಿಂದಿನಿಂದಲೂ ಎಲ್ಲರೂ ಒಟ್ಟಾಗಿ ಬಾಳಿ ಬದುಕಿ ನಾಡನ್ನು ಕಟ್ಟಿ ನಿಲ್ಲಿಸಿ ಸಮೃದ್ಧಗೊಳಿಸಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಲು ಪ್ರಯತ್ನಿಸಿದ್ದಾರೆ.
ಸಾವಿರಾರು ವರ್ಷಗಳಷ್ಟು ಹಳೆಯ ಇತಿಹಾಸವುಳ್ಳ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ. ಶಿಕ್ಷಣದಲ್ಲಿ ಕನ್ನಡ ಭಾಷೆಯ ನಿರ್ಲಕ್ಷ್ಯವು ಹಲವು ಸಮಸ್ಯೆಗಳನ್ನು ಹುಟ್ಟಿ ಹಾಕಿದೆ. ಜಗತ್ತಿನ ಮುಂದುವರೆದ ಭಾಷೆಗಳಿಗೆ ಇಲ್ಲದ ಬಿಕ್ಕಟ್ಟು ಇಂದು ಕನ್ನಡದಂಥ ಭಾಷೆಗೆ ಬಂದಿದೆ. ಮುಂದುವರೆದ ದೇಶಗಳ ಮಕ್ಕಳು ತಮ್ಮ ತಾಯಿ ನುಡಿಗಳಲ್ಲಿಯೆ ಯೋಚಿಸುತ್ತಾರೆ, ಕಲಿಯುತ್ತಾರೆ ಮತ್ತು ಕನಸು ಕಾಣುತ್ತಾರೆ. ಆದರೆ ನಮ್ಮಲ್ಲಿ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿಯಿದೆ. ಇಂಗ್ಲೀಷು, ಹಿಂದಿಯಂಥ ಭಾಷೆಗಳು ನಮ್ಮ ಮಕ್ಕಳ ಪ್ರತಿಭೆಯನ್ನು ಭಾಷೆಯ ಕಾರಣಕ್ಕೆ ದುರ್ಬಲಗೊಳಿಸುತ್ತಿವೆ. ಹಾಗಾಗಿ ಮಾತೃಭಾಷೆಯಲ್ಲಿಯೆ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಸೂಕ್ತ ಕಾನೂನುಗಳನ್ನು ತರಬೇಕಾದ ಅಗತ್ಯವಿದೆ. ಈ ಕುರಿತು ಕೇಂದ್ರ ಸರ್ಕಾರವೂ ಗಮನ ಹರಿಸಬೇಕೆಂದು ಒತ್ತಾಯಿಸುತ್ತೇನೆ.
ಒಂದು ನಾಡನ್ನು ಕಟ್ಟುವುದು ಸರಳವಾದ ಸಂಗತಿಯಲ್ಲ. ನಾಡೊಂದರ ಸಮಗ್ರ ಅಭಿವೃದ್ಧಿಯೆಂದರೆ ರಸ್ತೆ, ಸೇತುವೆ, ವಿದ್ಯುತ್, ರೈಲು, ವಿಮಾನ, ಸುಸಜ್ಜಿತ ಕಟ್ಟಡಗಳಷ್ಟೆ ಅಲ್ಲ. ಆ ನಾಡಿನ ಮಕ್ಕಳ ಮಾನಸಿಕ, ದೈಹಿಕ ಆರೋಗ್ಯ, ತಮ್ಮ ಜೊತೆಯಲ್ಲಿನ ಮಕ್ಕಳ ಭಾಷೆ, ಬದುಕು, ಧರ್ಮ, ಜಾತಿ ಹಾಗೂ ಇನ್ನಿತ್ಯಾದಿ ಭಿನ್ನತೆಗಳನ್ನು ಸಹನೆಯಿಂದ ನೋಡುವುದನ್ನು ಕಲಿಸುವುದೂ ಮುಖ್ಯ. ಇದರ ಜೊತೆಗೆ ಜಗತ್ತಿನ ಮುಖ್ಯ ದೇಶಗಳಲ್ಲಿ ನಡೆಯುತ್ತಿರುವ ವಿವಿಧ ರೀತಿಯ ಅನ್ವೇಷಣೆಗಳಿಗೆ ಸರಿಸಾಟಿಯಾಗಿ ನಿಲ್ಲುವಂಥ ರೀತಿಯಲ್ಲಿ ಆಲೋಚನೆಗಳನ್ನು ಕಲಿಸುವ ವಾತಾವರಣವೂ ಬಹಳ ಮುಖ್ಯ.
ಈ ವರ್ಷ ಕನ್ನಡಕ್ಕೆ ಬೂಕರ್ ಪ್ರಶಸ್ತಿಯನ್ನು ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿಯವರು ತಂದುಕೊಡುವ ಮೂಲಕ ನಮ್ಮ ಭಾಷೆಯ ಶಕ್ತಿಯನ್ನು ವಿಶ್ವ ವೇದಿಕೆಗೆ ಕೊಂಡೊಯ್ದಿದ್ದಾರೆ. ಅವರನ್ನೂ ಈ ಸಂದರ್ಭದಲ್ಲಿ ಹೃದಯ ಪೂರ್ವಕವಾಗಿ ಅಭಿನಂದಿಸುತ್ತೇನೆ.
ಒಕ್ಕೂಟ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಮಲತಾಯಿ ಧೋರಣೆಯನ್ನು ತೋರುತ್ತಿದೆ. 4.5 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ತೆರಿಗೆ ಸಂಪತ್ತನ್ನು ಕರ್ನಾಟಕವು ನೀಡುತ್ತಿದೆ. ಆದರೆ ನಮಗೆ ಬಿಡಿಗಾಸು ಕೊಟ್ಟು ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸುತ್ತಿದೆ. ಹಿಂದಿ ಭಾಷೆಯನ್ನು ಹೇರಿಕೆ ಮಾಡಲು ನಿರಂತರ ಹುನ್ನಾರ ನಡೆಯುತ್ತಿದೆ. ಹಿಂದಿ, ಸಂಸ್ಕೃತ ಭಾಷೆಗಳ ಅಭಿವೃದ್ಧಿಗೆ ಮಾತ್ರ ಅನುದಾನಗಳನ್ನು ನೀಡಲಾಗುತ್ತಿದೆ. ಕನ್ನಡವೂ ಸೇರಿದಂತೆ ಉಳಿದ ದೇಶಭಾಷೆಗಳನ್ನು ನಿರ್ಲಕ್ಷಿಸಲಾಗುತ್ತಿದೆ.
ರಾಜ್ಯದ ಅಭಿವೃದ್ಧಿಗೆ ಪೂರಕವಾಗಬೇಕಾಗಿದ್ದ ಯೋಜನೆಗಳನ್ನು ಕರ್ನಾಟಕಕ್ಕೆ ಕೊಡದೆ ವಂಚಿಸಲಾಗುತ್ತಿದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿದ್ದರೂ, ನೀಡಬೇಕಾದ ಅನುದಾನಗಳನ್ನೂ ಕೊಡದೆ ಅನ್ಯಾಯ ಮಾಡಲಾಗುತ್ತಿದೆ. ಕರ್ನಾಟಕ ವಿರೋಧಿಯಾದ ಎಲ್ಲವನ್ನೂ ವಿರೋಧಿಸಲೇಬೇಕಾಗಿದೆ. ನಾಡಿನ ಇತಿಹಾಸ, ಪರಂಪರೆಗಳ ನೆನಪುಗಳನ್ನು ಹೊಸ ತಲೆಮಾರುಗಳಲ್ಲಿ ಮೂಡಿಸಿ ಅವರಲ್ಲಿ ಅಭಿಮಾನ ಮೂಡಿಸೋಣ. ನಮಗಿರುವ ಸವಾಲುಗಳನ್ನೆ ಅವಕಾಶವಾಗಿ ಮಾರ್ಪಡಿಸುವ ಶಕ್ತಿ ನಮ್ಮ ಯುವ ತಲೆಮಾರಿಗಿದೆ. ಯುವ ತಲೆಮಾರು ಎದ್ದು ನಿಂತು ಕನ್ನಡ ಮತ್ತು ಕರ್ನಾಟಕವನ್ನು ಜಗತ್ತಿನ ಮುಂದುವರೆದ ಸಮಾಜಗಳ ಮಟ್ಟಕ್ಕೆ ನಿಲ್ಲಿಸಬೇಕಾಗಿದೆ.
ಶಿಕ್ಷಣ ಕ್ಷೇತ್ರದ ಬಲವರ್ಧನೆಗಾಗಿ ಈ ವರ್ಷ 65,000 ಕೋಟಿ ರೂ.ಗಳಿಗೂ ಹೆಚ್ಚಿನ ಸಂಪನ್ಮೂಲಗಳನ್ನು ವಿನಿಯೋಗಿಸುತ್ತಿದ್ದೇವೆ. ನಮ್ಮ ವಸತಿ ಶಾಲೆಗಳು, ವಸತಿ ನಿಲಯಗಳಲ್ಲಿ 8.36 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಹೊಸದಾಗಿ ವಸತಿ ಶಾಲೆಗಳು, ವಸತಿ ನಿಲಯಗಳನ್ನು ಸ್ಥಾಪಿಸುತ್ತಿದ್ದೇವೆ.
ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಪ್ರತ್ಯೇಕ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಕ್ಯಾನ್ಸರ್‌ನಿಂದ ಬಾಧಿತರಾದ ಮಕ್ಕಳಿಗೆ ವೈದ್ಯಕೀಯ ಬೆಂಬಲದೊಂದಿಗೆ ಶಿಕ್ಷಣವನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ.
ಕಾಲಕಾಲಕ್ಕೆ ಶಿಕ್ಷಕರ ನೇಮಕಾತಿ ಮತ್ತು ತರಬೇತಿಗಳನ್ನು ನಡೆಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 5,267 ಮತ್ತು ಇತರೆ ಪ್ರದೇಶಗಳಲ್ಲಿ 5,000 ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. 800 ಹೊಸ ಪಿಯು ಉಪನ್ಯಾಸಕರ ನೇಮಕಾತಿ ಮಾಡಲಾಗಿದೆ. ಹೊಸದಾಗಿ 18000 ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ. ಅನುದಾನಿತ ಶಾಲೆಗಳಿಗೆ 5,000 ಶಿಕ್ಷಕರ ಹುದ್ದೆಗಳನ್ನು ನೇಮಕ ಮಾಡಲು ಅನುಮತಿ ನೀಡಲಾಗಿದೆ.
ಇತ್ತೀಚೆಗೆ ತಾನೆ ಪ್ರೊ.ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗವು ತನ್ನ ವರದಿಯನ್ನು ನೀಡಿದೆ. ರಾಜ್ಯದ್ದೆ ಆದ ಶಿಕ್ಷಣ ನೀತಿಯು ರಚನೆಯಾಗಿರುವುದು ಇದೇ ಮೊದಲು. ಸದರಿ ವರದಿಯನ್ನು ಗಂಭೀರವಾಗಿ ಪರಿಶೀಲಿಸಿ ಅದರ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳ ಜೊತೆಗೆ ಮಕ್ಕಳ ಬದುಕು ರೂಪುಗೊಳ್ಳಲು ಪೋಷಕರ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ. ಹೊಸ ತಲೆಮಾರು ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದೆ. ಮೊಬೈಲ್ ಫೋನು, ಇಂಟರ್ನೆಟ್, ಆರ್ಟಿಫೀಷಿಯಲ್ ಇಂಟೆಲಿಜೆನ್ಸುಗಳು ಇಬ್ಬಾಯ ಖಡ್ಗದಂತೆ ಕೆಲಸ ಮಾಡುತ್ತಿವೆ. ಶೇ.25 ರಷ್ಟು ಅನುಕೂಲವಾಗಿದೆಯೆಂದು ಭಾವಿಸುವಾಗಲೆ ಶೇ.75 ರಷ್ಟು ಪ್ರಮಾಣದಲ್ಲಿ ಆತಂಕಗಳನ್ನು ಉಂಟು ಮಾಡುತ್ತಿದೆ. ಮಕ್ಕಳ ಕುತೂಹಲಗಳನ್ನು, ಮುಗ್ಧತೆಯನ್ನು ಇವು ಕಿತ್ತುಕೊಳ್ಳುತ್ತಿವೆ. ಇದರಿಂದಾಗಿ ಬೆಳೆಯಬೇಕಾದ ಮಕ್ಕಳ ಮನಸ್ಸು ಬಂಜರಾಗುವಂತಹ ಪರಿಸ್ಥಿತಿ ಬಂದೊದಗಿದೆ.
ಬಹಳ ವರ್ಷಗಳ ನಂತರ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ನಲ್ಲಿ 2024-25 ರಲ್ಲಿ ಕರ್ನಾಟಕವು ಮಹಾರಾಷ್ಟ್ರವನ್ನು ಹಿಂದೆ ಹಾಕಿ, ಮೊದಲ ಸ್ಥಾನಕ್ಕೆ ಏರಿದೆಯೆಂದು ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿರುವ ಅಂಕಿ ಅಂಶಗಳು ಹೇಳುತ್ತಿವೆ. 50,107 ಕೋಟಿ ರೂ.ಗಳಿಗೂ ಹೆಚ್ಚಿನ ವಿದೇಶಿ ನೇರ ಹೂಡಿಕೆಯು ರಾಜ್ಯದಲ್ಲಿ ಆಗಿದೆ. ಇಡೀ ದೇಶದ ಹೂಡಿಕೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟçದ ಪಾಲು ಶೇ.51 ರಷ್ಟಿದೆ. ಅದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.
ನಮ್ಮ ರಾಜ್ಯವು ತಲಾದಾಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶೇ.101 ರಷ್ಟು ಪ್ರಗತಿಯನ್ನು ಸಾಧಿಸಿದೆ. ಈ ಮೂಲಕ ಅತಿ ಹೆಚ್ಚು ತಲಾದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ಜನರಲ್ಲಿ ಕೊಳ್ಳುವ ಸಾಮರ್ಥ್ಯ ವನ್ನು ಹೆಚ್ಚಿಸಿ, ಅವರಿಗೆ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬುವ ಮೂಲಕ ಅಭಿವೃದ್ಧಿ ಸಾಧ್ಯ ಎಂಬುದನ್ನು ನಾವು ಸಾಧಿಸಿ ತೋರಿಸಿದ್ದೇವೆ.
ರಾಜ್ಯದ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆ.ಎಂ.ಎಫ್. ನಿಂದ “ಗೋವಿನಿಂದ ಗ್ರಾಹಕರವರೆಗೆ” ಎಂಬ ಶೀರ್ಷಿಕೆಯೊಂದಿಗೆ “ನಂದಿನಿ” ಬ್ರಾö್ಯಂಡ್‌ನಲ್ಲಿ 175 ಕ್ಕೂ ಅಧಿಕ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆ.ಎಂ.ಎಫ್. ನಿಂದ ದಿನಕ್ಕೆ 1 ಕೋಟಿ ಲೀಟರ್‌ಗೂ ಹೆಚ್ಚಿನ ಹಾಲನ್ನು ಸಂಗ್ರಹಿಸಲಾಗುತ್ತಿದೆ.
ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆಂದು ಈ ವರ್ಷ ವಿಶೇಷವಾಗಿ 8000 ಕೋಟಿಗೂ ಹೆಚ್ಚಿನ ಅನುದಾನವನ್ನು ನೀಡುತ್ತಿದ್ದೇವೆ [ಇಲಾಖೆಗಳಿಗೆ ರೆಗ್ಯುಲರ್ ಆಗಿ ಕೊಡುವ ಅನುದಾನಗಳ ಜೊತೆಗೆ ಹೆಚ್ಚುವರಿಯಾಗಿ ನೀಡುವ ಅನುದಾನ]. ಈ ವರ್ಷ ಒಟ್ಟಾರೆಯಾಗಿ ಬಂಡವಾಳ ವೆಚ್ಚಗಳಿಗೆಂದು 83,200 ಕೋಟಿ ಅನುದಾನ ಒದಗಿಸಿದ್ದೇವೆ.
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ದೇಶದ ಸರಾಸರಿ ನಿರುದ್ಯೋಗದ ಪ್ರಮಾಣ ಶೇ.7 ಕ್ಕಿಂತ ಹೆಚ್ಚಿಗೆ ಇದೆ. ಕರ್ನಾಟಕದಲ್ಲಿ ಶೇ.2.5 ರಷ್ಟಿದೆಯೆಂದು ಸಿಎಂಐಇ ಸಂಸ್ಥೆಯ ಅಂಕಿ ಅಂಶಗಳು ತಿಳಿಸುತ್ತಿವೆ.
ನಮ್ಮ ಸರ್ಕಾರವು ಗಿಗ್ ಎಕಾನಮಿ, ಗ್ರೀನ್ ಎಕಾನಮಿ, ಗ್ಯಾರಂಟಿ ಎಕಾನಮಿ, ಗ್ಲೋಬ್ ಟ್ರೋಟಿಂಗ್ ಎಕಾನಮಿ[ ಪ್ರವಾಸೋದ್ಯಮ ಆರ್ಥಿಕತೆ], ಗುಡ್ ಗವರ್ನೆನ್ಸ್, ಜಿಯೊಗ್ರಾಫಿಕಲ್ ಈಕ್ವಾಲಿಟಿ[ ಪ್ರಾದೇಶಿಕ ಸಮಾನತೆ], ಗುಡ್ ಹೆಲ್ತ್ ಟು ಆಲ್ ಪೀಪಲ್, ಜೆಂಡರ್ ಈಕ್ವಾಲಿಟಿ, ಗುಡ್ ಪಬ್ಲಿಕ್ ಎಜುಕೇಶನ್, ಗುಡ್ ಕನೆಕ್ಟಿವಿಟಿ ಮುಂತಾದ 10-ಜಿ ಗಳನ್ನು ಮುಖ್ಯ ಗುರಿಯಾಗಿಸಿಕೊಂಡು, ಧ್ಯೇಯವಾಗಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿಯೆ ಕರ್ನಾಟಕವು ಉದಯಿಸುತ್ತಿದೆ. ದ ರೈಸಿಂಗ್ ಕರ್ನಾಟಕದ ಕುರಿತು ವಿಶ್ವ ಸಂಸ್ಥೆಯ ಮುಖ್ಯಸ್ಥರಾದ ಫಿಲೆಮಾನ್ ಯಾಂಗ್ ರವರೆ ಶ್ಲಾಘಿಸಿದ್ದಾರೆ. ಇವೆಲ್ಲವೂ ನಮಗೆ ಹೆಮ್ಮೆಯನ್ನೂ ತಂದಿವೆ. ಜವಾಬ್ಧಾರಿಯನ್ನೂ ಹೆಚ್ಚಿಸಿವೆ.
ಕರ್ನಾಟಕದ ಬಗ್ಗೆ ಮಾತನಾಡುವಾಗ ನಮಗೆ ಬೆಂಗಳೂರು, ಐಟಿಬಿಟಿ ನೆನಪಾಗುತ್ತದೆ. ದೇಶದಲ್ಲಿ ತಂತ್ರಜ್ಞಾನಾಧಾರಿತ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್(ಈಆI) ಸೆಳೆಯುವುದರಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ದೇಶದ ಶೇ.60 ರಷ್ಟು ಬಯೋಟೆಕ್ನಾಲಜಿ ಕಂಪನಿಗಳಿದ್ದು, ದೇಶದ ಬಯೋಟೆಕ್ನಾಲಿಜಿ ಕ್ಷೇತ್ರದ ರಫ್ತಿಗೆ ರಾಜ್ಯವು ಶೇ.50 ರಷ್ಟು ಕೊಡುಗೆ ನೀಡುತ್ತಿದೆ. ನೀತಿ ಆಯೋಗ 2025ರ ವರದಿ ಪ್ರಕಾರ ಐಟಿ, ಹಣಕಾಸು, ಆತಿಥ್ಯ ಮತ್ತು ರಿಯಲ್ ಎಸ್ಟೇಟ್ ಮುಂತಾದ ಸೇವಾ ಕ್ಷೇತ್ರಗಳಲ್ಲಿ ರಾಜ್ಯವು ದೇಶದಲ್ಲೆ ಮೊದಲ ಸ್ಥಾನದಲ್ಲಿದೆ. ಸ್ಟಾರ್ಟ್ ಅಪ್ ನೊಂದಣಿಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಇದಲ್ಲದೆ, ಕೃಷಿ ಕ್ಷೇತ್ರದಲ್ಲೂ ರಾಜ್ಯವು ಅಗ್ರಗಣ್ಯ ಸ್ಥಾನದಲ್ಲಿದೆ. ಕಾಫಿ, ರೇಷ್ಮೆ, ತೊಗರಿ, ಅಡಿಕೆ, ರಾಗಿ ಮತ್ತು ಸೂರ್ಯಕಾಂತಿ ಉತ್ಪಾದನೆಯಲ್ಲಿ ನಮ್ಮ ರಾಜ್ಯ ನಂಬರ್ ಒನ್ ಆಗಿದೆ. ಜೊತೆಗೆ ಕಬ್ಬು, ಭತ್ತ, ಈರುಳ್ಳಿ ಯಂತಹ ಮುಂತಾದ ಪ್ರಮುಖ ಬೆಳೆಗಳನ್ನು ಬೆಳೆದು ನಮ್ಮ ರಾಜ್ಯದ ಅನ್ನದಾತರು ದೇಶದ ಆಹಾರ ಭದ್ರತೆಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ.
ಕಡೆಯದಾಗಿ, ನಮ್ಮ ಹೊಸ ತಲೆಮಾರಿನ ಮೇಲೆ ಈ ನಾಡನ್ನು ಮುನ್ನಡೆಸುವ ಮತ್ತು ಸಮೃದ್ಧಗೊಳಿಸುವ ಮಹತ್ತರವಾದ ಜವಾಬ್ದಾರಿಯಿದೆ. ನಮ್ಮ ಹಿರಿಯರು ಬಹಳ ತ್ಯಾಗ ಮಾಡಿ ಈ ನಾಡನ್ನು ಕಟ್ಟಿದ್ದಾರೆ. ನಮ್ಮ ಗುರಿ ಅತ್ಯಂತ ಉದಾತ್ತವಾದ, ವೈಜ್ಞಾನಿಕವಾದ, ವೈಚಾರಿಕ ಮನೋಭಾವದ, ಮಾನವೀಯತೆಯ ನಾಡನ್ನು ಕಟ್ಟುವುದು. ಯುರೋಪಿನ ಸ್ಕ್ಯಾಂಡಿನೇವಿಯನ್ ದೇಶಗಳು ಈ ವಿಚಾರದಲ್ಲಿ ಬಹಳಷ್ಟನ್ನು ಸಾಧಿಸಿವೆ. ಆ ರೀತಿಯ ಮಾದರಿಗಳ ಕಡೆಗೆ ನಾವು ಮುನ್ನಡೆಯಬೇಕು ಮತ್ತು ನಮ್ಮವೇ ಆದ ಮಾದರಿಗಳನ್ನೂ ನಿರ್ಮಿಸಬೇಕು. ಆ ಉದ್ದೇಶದಿಂದಲೇ ನಾವು ಯೂನಿವರ್ಸಲ್ ಬೇಸಿಕ್ ಇನ್‌ಕಂ ಎಂಬ ಪರಿಕಲ್ಪನೆಯಡಿ ಜನರ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸುತ್ತಿದ್ದೇವೆ. ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತಂದಿದ್ದೇವೆ. ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟವನ್ನು ಕ್ರಾಂತಿಕಾರಕ ರೀತಿಯಲ್ಲಿ ಬದಲಾಯಿಸುತ್ತಿದ್ದೇವೆ. ರಸ್ತೆಗಳ ನಿರ್ಮಾಣಕ್ಕೆ, ವಿದ್ಯುತ್ ಉತ್ಪಾದನೆಗೆ, ಸಾರ್ವಜನಿಕ ಸಾರಿಗೆಯ ಸುಧಾರಣೆಗೆ, ರೈತರ ಮಾರುಕಟ್ಟೆ ವ್ಯವಸ್ಥೆಗೆ, ಕೈಗಾರಿಕೆಗಳ ಸ್ಥಾಪನೆಗೆ, ಶಿಕ್ಷಣಕ್ಕೆ ನಮ್ಮ ಸರ್ಕಾರ ಅತಿ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ.
ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಕಳೆದ 5 ವರ್ಷಗಳಲ್ಲಿ 15 ನೇ ಹಣಕಾಸು ಆಯೋಗದ ಮೂಲಕ ಕೇಂದ್ರವು ಮಾಡಿದ ದ್ರೋಹದಿಂದ ಸುಮಾರು 70 ಸಾವಿರ ಕೋಟಿ ರೂಗಳಷ್ಟು ನಷ್ಟವಾಗಿದೆ. 15 ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ್ದ ಅನುದಾನ, ಕೇಂದ್ರವು ಬಜೆಟ್‌ನಲ್ಲಿ ಘೋಷಿಸಿ ಕೊಡದೆ ಹೋದ ಅನುದಾನ, ಯೋಜನೆಗಳಲ್ಲಾದ ಅನ್ಯಾಯ ಸೇರಿ ಸುಮಾರು 1 ಲಕ್ಷ ಕೋಟಿ ರೂಗಳಿಗೂ ಹೆಚ್ಚು ಅನ್ಯಾಯವಾಗಿದೆ. ಇದರ ವಿರುದ್ಧ ಸರ್ಕಾರ ಹೋರಾಟ ನಡೆಸುತ್ತಿದೆ. ಜನ ಸಮುದಾಯವು ಕೂಡ ಗಂಭಿರವಾಗಿ ಪ್ರಶ್ನಿಸಬೇಕಾದ ಅನಿವಾರ್ಯತೆ ಉದ್ಭವಿಸಿದೆ. ಬಲಿಷ್ಠ ಒಕ್ಕೂಟ ವ್ಯವಸ್ಥೆಯ ಕನಸು ನಮ್ಮ ಸಂವಿಧಾನ ಪಿತೃಗಳದ್ದಾಗಿತ್ತು. ಇದನ್ನು ಕಳೆದ ಕೆಲವು ವರ್ಷಗಳಿಂದ ಛಿದ್ರಗೊಳಿಸಿ ರಾಜ್ಯಗಳ ಅಧಿಕಾರವನ್ನು ಕಬ್ಜಾ ಮಾಡುವ ವಸಾಹತುವಾದಿ ಮನೋಭಾವ ಕಾಣುತ್ತಿದೆ. ಕೇಂದ್ರದ ಈ ತಾರತಮ್ಯಗಳ ವಿರುದ್ಧ ಇಡೀ ನಾಡು ಸಂವಿಧಾನಾತ್ಮಕವಾಗಿ ನಿಂತು ಪ್ರತಿಭಟಿಸದೆ ಹೋದರೆ ನಮ್ಮನ್ನು ಆಪೋಶನ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆಯ ಮಾತುಗಳನ್ನು ಆಡಿದರು.
Key words: Government, language, new challenges, AI, CM Siddaramaiah







