ಎಲ್ಲರಿಗೂ ಶಿಕ್ಷಣ, ಸಮಾನ ಅವಕಾಶಗಳು ದೊರೆತರೆ ಮಾತ್ರ ಸಮ ಸಮಾಜದ ನಿರ್ಮಾಣ ಸಾಧ್ಯ- ಸಿಎಂ ಸಿದ್ದರಾಮಯ್ಯ

ಮೈಸೂರು ಅಕ್ಟೋಬರ್, 18,2025 (www.justkannada.in): ವಿದ್ಯೆ ಯಾರೊಬ್ಬರ ಸ್ವತ್ತು ಅಲ್ಲ. ಎಲ್ಲರಿಗೂ ಸಮಾನ ಅವಕಾಶಗಳು ದೊರೆತಾಗ ಮಾತ್ರ ಸಮ ಸಮಾಜದ ನಿರ್ಮಾಣ ಮಾಡಲು ಸಾಧ್ಯ. ಎಲ್ಲರೂ ಶಿಕ್ಷಣ ಪಡೆಯಬೇಕು ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ತಿಳಿಸಿದರು.

ಇಂದು ಮಾನಸ ಗಂಗೋತ್ರಿಯ ಡಾ. ಬಿ ಆರ್ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವಿಶ್ವ ಜ್ಞಾನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಹಾಗೂ ನೂತನ ಜ್ಞಾನ ದರ್ಶನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ವಿಶ್ವ ಜ್ಞಾನಿಗಳಾಗಿದ್ದರು. ಆದ್ದರಿಂದ ವಿಶ್ವಜ್ಞಾನಿ ಅಂಬೇಡ್ಕರ್ ಸಭಾಂಗಣ ಎಂದು ನಿರ್ದಿಷ್ಟವಾಗಿ ಬರೆಯಲು ಸಲಹೆ ನೀಡಿದ್ದೇನೆ. ಸಮಾಜವನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡಿದ್ದ ವಿಶ್ವ ಜ್ಞಾನಿ ಅಂಬೇಡ್ಕರ್. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಇರಲಿಲ್ಲ. ಆದ್ದರಿಂದ ಸಮಾಜದಲ್ಲಿ ಅಸಮಾನತೆ ನಿರ್ಮಾಣ ಆಯಿತು. ಅಂಬೇಡ್ಕರ್ ಅವರು ತಾವು ಕಲಿತ ವಿದ್ಯೆಯನ್ನು ಸಮಾಜದ ಒಳಿತಿಗಾಗಿ ಬಳಕೆ ಮಾಡಿದ್ದಾರೆ.  ಜನವರಿ 26, 1950 ರಂದು ಸಂವಿಧಾನ ಜಾರಿಗೆ ಬರುತ್ತದೆ. ಅಂದು ನಾವು ವೈರುಧ್ಯತೆ ಇರುವ ಸಮಾಜಕ್ಕೆ ಕಾಲು ಇಡುತ್ತೇವೆ ಎಂದು ಸಂವಿಧಾನ ಅಂಗೀಕಾರ ಸಭೆಯಲ್ಲಿ ತಿಳಿಸಿದ್ದರು. ಇಂದು ಸಹ ಸಮಾಜದಲ್ಲಿ ವೈರುಧ್ಯತೆ ಇದೆ. ಆದರೆ ಇಂದು ಸ್ವಲ್ಪ ಕಡಿಮೆ ಆಗಿದೆ. 10 ಸಂಪುಟಗಳಲ್ಲಿ ಇರುವ ಭಾರತ ಸಂವಿಧಾನವನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿದ್ದೇನೆ. ಎಲ್ಲರೂ ಅದನ್ನು ಓದಬೇಕು. ಅಂಬೇಡ್ಕರ್ ಅವರು ಪ್ರಪಂಚದ ಎಲ್ಲಾ ದೇಶಗಳ ಸಂವಿಧಾನವನ್ನು ಓದಿ ನಮ್ಮ ದೇಶಕ್ಕೆ ಅಗತ್ಯವಾದ ಸಂವಿಧಾನವನ್ನು ರಚನೆ ಮಾಡಿ ನೀಡಿದ್ದಾರೆ. ನಮ್ಮದು ಶ್ರೇಷ್ಠ ಸಂವಿಧಾನ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ಬಾಬಾ ಸಾಹೇಬ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಸ್ಥಾಪನೆ ಮಾಡಿದ್ದೇನೆ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೆ ಮೀಸಲಾತಿ ಇರಬೇಕು. ಜಾತಿ ವ್ಯವಸ್ಥೆ ಇರುವವರೆಗೆ ಸಮಾನತೆ ಬರಲು ಸಾಧ್ಯವಿಲ್ಲ. ಆದ್ದರಿಂದ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬೇಕು. ಜಾತಿ ವ್ಯವಸ್ಥೆ ಜಡತ್ವದಿಂದ ಕೂಡಿದೆ. ಅದಕ್ಕೆ ಚಲನೆ ಇಲ್ಲ. ಇದು ಆಳವಾಗಿ ಬೇರು ಬಿಟ್ಟಿದೆ. ಬಸವಣ್ಣ ಅವರು ಜಾತಿ ವ್ಯವಸ್ಥೆ ತೊಡೆದು ಹಾಕುವಂತೆ 850 ವರ್ಷಗಳ ಹಿಂದೆಯೇ ಹೇಳಿದ್ದರು. ಆದರೂ ಅದು ಇನ್ನೂ ಸಾಧ್ಯವಾಗಿಲ್ಲ. ಇನ್ನು ಮೇಲು ಕೀಳು ಬಡವ ಬಲ್ಲಿದ ಎಂಬ ಅಸಮಾನತೆ ಇನ್ನೂ ಹಾಗೇ ಇದೆ. ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯುವ ಜಾತಿ ವ್ಯವಸ್ಥೆ ಇನ್ನೂ ಇದೆ ಇದು ತಲೆ ತಗ್ಗಿಸುವಂತಹ ಸಂಗತಿ. ನಾನು ಅಂಬೇಡ್ಕರ್ ವಾದದಲ್ಲಿ, ಬಸವಣ್ಣನವರ ತತ್ವದಲ್ಲಿ, ಗೌತಮ ಬುದ್ಧ ಅವರ ವಿಚಾರಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ನಾವು ಸ್ವಾಭಿಮಾನಿಗಳು ಆಗಬೇಕು. ಗುಲಾಮಗಿರಿಯನ್ನು ತೊಡೆದು ಹಾಕಬೇಕು ಎಂದರು.

ಕರ್ನಾಟಕದಲ್ಲಿ ಅಂಬೇಡ್ಕರ್ ಹೆಜ್ಜೆ ಗುರುತುಗಳು ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಅವರು, ಮೈಸೂರು ವಿಶ್ವ ವಿದ್ಯಾಲಯ ವಿಶ್ವದ ಶ್ರೇಷ್ಠ ವಿಶ್ವ ವಿದ್ಯಾಲಯಗಳಲ್ಲಿ ಒಂದಾಗಿದೆ. ಇದರಲ್ಲಿ ದೇಶದ ಮೊದಲ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್, ರಾಷ್ಟ್ರ ಕವಿ ಕುವೆಂಪು ಅವರು ಸಹ ಅಧ್ಯಯನ ಮಾಡಿದ್ದಾರೆ ಎಂದು ತಿಳಿಸಿದರು.

ವಿಶ್ವ  ವಿದ್ಯಾನಿಲಯ ಚಿಂತನೆಗಳ ಚಿಲುಮೆ. ಕುವೆಂಪು ಅವರು ಮೈಸೂರು ವಿಶ್ವ ವಿದ್ಯಾಲಯದ ಕುಲಪತಿಗಳು ಆಗಿದ್ದ ಕಾಲದಲ್ಲಿ ಸಂದರ್ಭದಲ್ಲಿ ವಿಶ್ವ ವಿದ್ಯಾಲಯಕ್ಕೆ ಅನೇಕ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪನೆ ಮಾಡಿ ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಿದರು. ವಿಶ್ವ ವಿದ್ಯಾನಿಲಯಗಳು ಸಮ ಸಮಾಜದ ನಿರ್ಮಾಣ ಮಾಡುವ ಜ್ಞಾನ ಕಣಜಗಳಾಗಿ ಬೆಳೆಯಬೇಕು. ಲಾರ್ಡ್ ಮೌಂಟ್ ಬ್ಯಾಟನ್ ಅವರು ಗಾಂಧೀಜಿಯವರನ್ನು ಕುರಿತು ನಾನು ಭಾರತದಲ್ಲಿ ಒಬ್ಬ ದೇವರನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡಿ ಕೊಟ್ಟಿದ್ದಾರೆ. ಸಂವಿಧಾನ ಪ್ರತಿಯೊಬ್ಬರಿಗೂ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದ್ದಾರೆ. ವಿಶ್ವ ವಿದ್ಯಾಲಯವು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಬೆಂಗಳೂರಿನಲ್ಲಿ ಆಂಧ್ರ ಪ್ರದೇಶದ ಮಾದರಿಯಲ್ಲಿ  ಅಂಬೇಡ್ಕರ್ ಉದ್ಯಾನವನವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲು 25 ಎಕರೆ ಜಾಗವನ್ನು ಗುರುತಿಸಲಾಗಿದೆ. ಇದರಲ್ಲಿ ಅಂಬೇಡ್ಕರ್ ಬಾಲ್ಯದಿಂದ ಅವರ ಕೊನೆಯವರೆಗೆ ನಡೆದು ಬಂದ ಹಾದಿಯನ್ನು ಚಿತ್ರಿಸಲಾಗುವುದು. ವ್ಯಕ್ತಿ ಪೂಜೆಯನ್ನು ಮಾಡಬಾರದು. ವ್ಯಕ್ತಿ ಪೂಜೆ ಸರ್ವಾಧಿಕಾರಿಯನ್ನು ಸೃಷ್ಟಿಸುತ್ತದೆ ಎಂದು ಅಂಬೇಡ್ಕರ್ ಅವರು ತಿಳಿಸಿದ್ದಾರೆ. ಕೋಟ್ಯಂತರ ಜನರು ನಿರ್ದಿಷ್ಟ ಆದಾಯ ಇಲ್ಲದೆ ಬದುಕುತ್ತಿದ್ದಾರೆ. ಸಮ ಸಮಾಜದ ನಿರ್ಮಾಣ ಮಾಡುವುದು ನಮ್ಮ ಗುರಿ ಎಂದು ತಿಳಿಸಿದರು.

ಮೈಸೂರು ವಿಶ್ವ ವಿದ್ಯಾಲಯದ ಕುಲಪತಿಗಗಳಾದ ಎನ್ ಕೆ ಲೋಕನಾಥ್ ಅವರು ಮಾತನಾಡಿ,  ಡಾ. ಬಿ ಆರ್ ಅಂಬೇಡ್ಕರ್ ಸಂಶೋಧನಾ ಕೇಂದ್ರವು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ನಂತರ ಈ ಹಂತಕ್ಕೆ ಬೆಳೆದು ನಿಂತಿದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವರು ಇದರ ಬೆಳವಣಿಗೆಗೆ ಅಪಾರ ಅನುದಾನವನ್ನು ನೀಡಿ ಪ್ರೋತ್ಸಾಹಿಸಿದ್ದಾರೆ ಇವರಿಗೆ ನನ್ನ ಅಭಿನಂದನೆಗಳು. ಅಂಬೇಡ್ಕರ್ ಅವರ ಚಿಂತನೆಗಳನ್ನು ವಿಶ್ವ ಮಟ್ಟದಲ್ಲಿ  ತಿಳಿಸಲು ನಾವು ಕಟಿಬದ್ಧವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ತಿಳಿಸಿದರು.

ಡಾ. ಬಿ ಆರ್ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಹಿರಿಯ ಪ್ರಾಧ್ಯಾಪಕರಾದ ಡಾ. ಜೆ ಸೋಮಶೇಖರ್ ಅವರು ಮಾತನಾಡಿ 1994 ರಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಅಂಬೇಡ್ಕರ್ ಪೀಠ ಸ್ಥಾಪನೆ ಆಯಿತು. ನಂತರ 2000 ನೇ ಇಸವಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ವಾಗಿ ನಡೆದುಕೊಂಡು ಬರುತ್ತಿದೆ. ಈ ಕೇಂದ್ರದಲ್ಲಿ ಅಂಬೇಡ್ಕರ್ ಅವರು ಗಳಿಸಿದ ಜ್ಞಾನವನ್ನು ವಿಶ್ವ ಮಟ್ಟದಲ್ಲಿ ಸಾರುವ ಕಾರ್ಯವನ್ನು ಮಾಡುತ್ತಿದೆ. ದಿವಂಗತ ಮಾಜಿ ಸಂಸದರಾದ ಶ್ರೀನಿವಾಸ್ ಪ್ರಸಾದ್ ಅವರು ಈ ಕೇಂದ್ರವನ್ನು ಸ್ಥಾಪನೆ ಮಾಡಿದರು.

ಮಾನ್ಯ ಮುಖ್ಯಮಂತ್ರಿಗಳು ಮೊದಲು ಮುಖ್ಯಮಂತ್ರಿಗಳಾದ ವೇಳೇ 50 ಲಕ್ಷ ರೂ. ನೀಡಿದ್ದರು. ಅನಂತರ ಸಚಿವರಾದ ಮಹದೇವಪ್ಪ ಅವರು 3 ಕೋಟಿ ನೀಡಿದ್ದರು. ಈಗ ಸಂವಿಧಾನ ಅಧ್ಯಯನ ಪೀಠಕ್ಕೆ 10 ಕೋಟಿ ಅನುಧಾನ ನೀಡಿದ್ದಾರೆ.  ಜ್ಞಾನ ದರ್ಶನ ಕೇಂದ್ರದಲ್ಲಿ ಅಂಬೇಡ್ಕರ್ ಮ್ಯೂಸಿಯಂ, ಕಂಪ್ಯೂಟರ್ ತರಬೇತಿ ಕೇಂದ್ರ, ದಲಿತ ಡಾಕ್ಯುಮೆಂಟ್ ಸೆಂಟರ್ ನ್ನು ಸ್ಥಾಪಿಸಲಾಗಿದೆ. ಕೇಂದ್ರವನ್ನು ಇನ್ನೂ ಅಭಿವೃದ್ಧಿ ಪಡಿಸಲು 15 ಕೋಟಿ ಅನುಧಾನ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಚಾಮರಾಜ  ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ತಿಮ್ಮಯ್ಯ, ಕೆ ಶಿವಕುಮಾರ್, ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್ ಯುಕೇಶ್ ಕುಮಾರ್, ಮೈಸೂರು ವಿಶ್ವ ವಿದ್ಯಾನಿಲಯದ ಕುಲ ಸಚಿವರಾದ ಎಂ.ಕೆ ಸವಿತಾ ಅವರು ಸೇರಿದಂತೆ ಸಿಂಡಿಕೇಟ್ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Key words:  equal society, education, Mysore University, CM, Siddaramaiah