CJI ಬಿಆರ್ ಗವಾಯಿ ಮೇಲೆ ಶೂ ಎಸೆಯಲು ಯತ್ನ ದೇಶವೇ ತಲೆ ತಗ್ಗಿಸುವಂತಹ ವಿಚಾರ- ಹೆಚ್.ಎ ವೆಂಕಟೇಶ್

ಮೈಸೂರು, ಅಕ್ಟೋಬರ್,6,2025 (www.justkannada.in): ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ನಡೆದಿರುವ ಯತ್ನ ದೇಶವೇ ತಲೆ ತಗ್ಗಿಸುವಂತಹ ವಿಚಾರ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು,  ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದಿರುವ ಈ ದಾಳಿ,  ವಿದ್ವಂಸಕ ಮನಸ್ಥಿತಿಯ ಸಂಕೇತ. ಸನಾತನ ಧರ್ಮದ ನೆಪದಲ್ಲಿ ನಡೆಯುತ್ತಿರುವ ದುರ್ವರ್ತನೆಗಳಿಗೆ ಈ ಘಟನೆ ಮತ್ತೊಂದು ಸಾಕ್ಷಿ.  ದೇವರು ಮತ್ತು ಧರ್ಮದ ನೆಪದಲ್ಲಿ ಅಶಾಂತಿ ಸೃಷ್ಟಿಸುವುದೇ ತಮ್ಮ ಕೆಲಸ ಎಂದು ಭಾವಿಸಿರುವ ಈ ಸಮಾಜಘಾತುಕ ಕ್ರಿಮಿಗಳಿಗೆ  ರಾಜಕೀಯ ಮತ್ತು ಆಡಳಿತಾತ್ಮಕ ಬೆಂಬಲ ಸಿಗುತ್ತಿದೆ. ಇದು ಪ್ರಜಾತಂತ್ರ ವ್ಯವಸ್ಥೆಯ ದುರಂತ ಎಂದಿದ್ದಾರೆ.

ಸಿಜೆಐ ಮೇಲೆ ನಡೆದಿರುವ ಈ ದಾಳಿಯನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಬೇಕು. ದುರ್ವರ್ತನೆ ತೋರಿರುವ ವಕೀಲ ಕಿಶೋರ್ ನನ್ನು ಜೀವನ ಪರ್ಯಂತ  ವಕೀಲಿಕೆ ನಡೆಸದಂತೆ ನಿರ್ಬಂಧಿಸಿ ಈತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು.

ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ, ಧಾರ್ಮಿಕ ತಾರತಮ್ಯ,  ದೌರ್ಜನ್ಯ ಇತ್ಯಾದಿ ಅಂಶಗಳ ಬಗ್ಗೆ ಸಿಜೆಐ ಇನ್ನಾದರೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸಬೇಕು ಎಂದು ಕಳಕಳಿಯಿಂದ ಕೋರುತ್ತೇನೆ ಎಂದು ತಿಳಿಸಿದ್ದಾರೆ.

Key words: CJI, BR Gawai, shoe, country, HA Venkatesh