Mysore Dasara: ಗಜಪಡೆಗೆ ಈಗ” ಕಮಾಂಡೋ ” ಸೆಕ್ಯೂರಿಟಿ..!

ಮೈಸೂರು,ಸೆಪ್ಟಂಬರ್,29,2025 (www.justkannada.in): ಮೈಸೂರು ದಸರಾ ಗಜಪಡೆಯ ಆನೆ ಬಳಿಗೆ ಹೋಗಿ ಕೆಲವರು ಫೋಟೋ, ರೀಲ್ಸ್ ಮಾಡಿದ್ದು ಇಂತಹವರಿಗೆ ನಿರ್ದಾಕ್ಷಿಣ್ಯವಾಗಿ ದಂಡ  ಸೂಚಿಸಲಾಗಿದೆ. ಹಾಗೆಯೇ ದಸರಾ ಆನೆಗಳ ಬಳಿ ಹೋಗದಂತೆ ತಡೆಯಲು ಕಮಾಂಡೋ ಬಳಕೆಗೂ ತಿಳಿಸಲಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಮೈಸೂರು ಅರಮನೆಯಲ್ಲಿಂದು ಜಂಬೂಸವಾರಿಯ ಪ್ರಧಾನ ಆಕರ್ಷಣೆಯಾದ ದಸರಾ ಆನೆಗಳ ನಿರ್ವಹಣೆಯ ಜವಾಬ್ದಾರಿ ಹೊತ್ತ ಮಾವುತರು ಮತ್ತು ಕಾವಾಡಿಗಳು ಹಾಗೂ ಅವರ ಕುಟುಂಬ ವರ್ಗದವರಿಗೆ ಭೋಜನ ಬಡಿಸುದ ಬಳಿಕ ಮಾತನಾಡಿದ ಅವರು,  ಆನೆ ಪಳಗಿಸುವ ಕಲೆಯನ್ನು ವಂಶಪಾರಂಪರ್ಯವಾಗಿ ಕರಗತ ಮಾಡಿಕೊಂಡಿರುವ ಮಾವುತರು ಹಾಗೂ ಕಾವಾಡಿಗಳು ಪುಂಡಾನೆ, ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ವನ್ಯಜೀವಿ -ಮಾನವ ಸಂಘರ್ಷ ನಿಯಂತ್ರಣದಲ್ಲಿ ಮಾವುತರು ಮತ್ತು ಕಾವಾಡಿಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಇಡೀ ದೇಶದಲ್ಲಿಯೇ ಆನೆಗಳನ್ನು ಪಳಗಿಸುವಲ್ಲಿ ಕರ್ನಾಟಕದ ಮಾವುತ ಮತ್ತು ಕಾವಾಡಿಗಳಿಗೆ ವಿಶೇಷ ಕೌಶಲ್ಯವಿದೆ ಹೀಗಾಗಿಯೇ ನೆರೆಯ ಆಂಧ್ರಪ್ರದೇಶ, ಗೋವಾ ಮೊದಲಾದ ರಾಜ್ಯಗಳು ಸಹ ಕುಮ್ಕಿ ಆನೆಯ ಸಹಾಯಕ್ಕೆ ರಾಜ್ಯಕ್ಕೆ ಮನವಿ ಮಾಡುತ್ತವೆ. ಮಾವುತರು ಮತ್ತು ಕಾವಾಡಿಗಳಿಗೆ ಆನೆಗಳನ್ನು ಸೆರೆ ಹಿಡಿಯುವ ಮತ್ತು ಪಳಗಿಸುವ, ನಿಯಂತ್ರಿಸುವ, ಪಾಲನೆ ಹಾಗೂ ಪೋಷಣೆ ಮಾಡುವ ಕಲೆ ರಕ್ತಗತವಾಗಿ ಬಂದಿದೆ. ಈ ಕಲೆಯನ್ನು ಪಠ್ಯ ಪುಸ್ತಕದಿಂದ ಅಥವಾ ಶಾಲಾ-ಕಾಲೇಜಿನಲ್ಲಿ ಕಲಿ ಸಲುಸಾಧ್ಯವಿಲ್ಲ ಎಂದ ಸಚಿವ ಈಶ್ವರ ಖಂಡ್ರೆ, ನಮ್ಮ ರಾಜ್ಯದ ಮಾವುತರು ಹಾಗೂ ಕಾವಾಡಿಗಳಿಗೆ ವಂಶಪಾರಂಪರ್ಯವಾಗಿ ಕೌಶಲ್ಯವಿದ್ದರೂ, ಅವರಿಗೆ ತಜ್ಞರಿಂದ ವೃತ್ತಿ ತರಬೇತಿಯನ್ನೂ ಕೊಡಿಸಲಾಗುತ್ತಿದ್ದು, ಇದು ಅವರ ನೈಪುಣ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಮಾವುತರು, ಕಾವಾಡಿಗಳ ನ್ಯಾಯಯುತ ಬೇಡಿಕೆಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವ ಭರವಸೆ ನೀಡಿದರು.

ಸೆಲ್ಫಿ, ರೀಲ್ಸ್ ಗೆ ಅವಕಾಶವಿಲ್ಲ:

ದಸರಾ ಆನೆಗಳ ಸೊಂಡಿಲು, ದಂತ ಹಿಡಿದುಕೊಂಡು ಫೋಟೋ ರೀಲ್ಸ್ ಮಾಡಿ ಸಾಮಾಜಿಕ ತಾಣಗಳಲ್ಲಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆನೆಗಳನ್ನು ಪಳಗಿಸಿದ್ದರೂ, ಕೆಲವೊಂದು ಸಂದರ್ಭದಲ್ಲಿ ಪ್ರಾಣಿಗಳ ವರ್ತನೆಯನ್ನು ಊಹಿಸುವುದೂ ಅಸಾಧ್ಯ. ಹೀಗಾಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಆನೆಗಳ ಬಳಿ ಯಾರಿಗೂ ಬಿಡದಂತೆ ಸೂಚನೆ ನೀಡಲಾಗಿದೆ. ಆದರೂ ಕೆಲವರು ಫೋಟೋ, ರೀಲ್ಸ್ ಮಾಡಿದ್ದು ಇಂತಹವರಿಗೆ ನಿರ್ದಾಕ್ಷಿಣ್ಯವಾಗಿ ದಂಡ  ಸೂಚಿಸಲಾಗಿದೆ. ದಸರಾ ಆನೆಗಳ ಬಳಿ ಹೋಗದಂತೆ ತಡೆಯಲು ಕಮಾಂಡೋ ಬಳಕೆಗೂ ತಿಳಿಸಲಾಗಿದೆ ಎಂದರು.

ಕಳೆದ 18ರಂದು ಮಹಿಳೆಯೊಬ್ಬರು ಸಿಬ್ಬಂದಿಯ ಕಣ್ತಪ್ಪಿಸಿ ರೀಲ್ಸ್ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿದೆ. ಇದು ಮೇಲ್ನೋಟಕ್ಕೆ ಕರ್ತವ್ಯಲೋಪವಾಗಿದೆ ಎಂಬುದನ್ನು ಪುಷ್ಟೀಕರಿಸಿದ್ದು, ಅಧಿಕಾರಿ, ಸಿಬ್ಬಂದಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ತಿಂಗಳೇ ಯಸಳೂರಿನಲ್ಲಿ ಅರ್ಜುನ ಆನೆ ಸ್ಮಾರಕ ಅನಾವರಣ:

ಮೈಸೂರು ದಸರಾ ಜಂಬೂಸವಾರಿಯಲ್ಲಿ 8 ಬಾರಿ ಅಂಬಾರಿ ಹೊತ್ತು ಗಜಗಾಂಭೀರ್ಯದಿಂದ ಹೆಜ್ಜೆಹಾಕುತ್ತಾ ಜನಮನ ಗೆದ್ದಿದ್ದ ಅರ್ಜುನ ಆನೆ ಹಾಸನ ಜಿಲ್ಲೆ ಯಸಳೂರು ಬಳಿ ಆನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾಗಿದ್ದು, ಸರ್ಕಾರ ಅರ್ಜುನ ಇದ್ದ ನಾಗರಹೊಳೆಯ ಬಳ್ಳೆ ಮತ್ತು ಯಸಳೂರಿನಲ್ಲಿ ಸ್ಮಾರಕ ನಿರ್ಮಿಸಿದೆ ಎಂದರು.

ಈಗಾಗಲೇ ಬಳ್ಳೆಯ ಸ್ಮಾರಕವನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಾಗಿದ್ದು, ಈ ತಿಂಗಳಲ್ಲಿ ಯಸಳೂರಿನಲ್ಲೂ ಅರ್ಜುನ ಆನೆ ಸ್ಮಾರಕ ಉದ್ಘಾಟಿಸುವುದಾಗಿ ತಿಳಿಸಿದರು.

Key words: Mysore Dasara, Gajapade, Now, commando security,