ಮೈಸೂರು, ಸೆಪ್ಟಂಬರ್,22,2025 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಕೇವಲ ಹಬ್ಬವಾಗಿರದೇ ನಾಡಿನ ಜನರ ನಾಡಿ ಮಿಡಿತ ಹಾಗೂ ಸಂಸ್ಕೃತಿಯ ಉತ್ಸವವಾಗಿದ್ದು ಸಮಗ್ರ ಸಂಸ್ಕೃತಿಯ ಪ್ರತೀಕವಾಗಿದೆ. ಎಲ್ಲರನ್ನು ಒಳಗೊಳ್ಳುವ ಘಳಿಗೆ ಮತ್ತು ಸಮನ್ವಯದ ಮೇಳವಾಗಿದೆ ಎಂದು ಹನ್ನೊಂದು ದಿನದ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರು ಹಾಗೂ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರು ತಿಳಿಸಿದರು.
ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತ ವತಿಯಿಂದ ಚಾಮುಂಡಿಬೆಟ್ಟದಲ್ಲಿ ಆಯೋಜಿಸಲಾಗಿದ್ದ ನಾಡ ಹಬ್ಬ ದಸರಾ ಉದ್ಘಾಟನೆ ಇಂದು ಶುಭ ವೃಶ್ಚಿಕ ಲಗ್ನದಲ್ಲಿ ಸಾಹಿತಿಗಳು ಹಾಗೂ 2025 ರ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ನಾಡದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಈ ನೆಲದಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಮಣ್ಣಿನ ವಾರಸುದಾರಿಕೆ, ಜವಾಬ್ದಾರಿ, ಸ್ಪಂದನೆ ನೆನಪುಗಳು ಇವೆ. ಅಂತೆಯೇ ಮೈಸೂರು ಅರಸರ ಸಂಸ್ಕೃತಿಯ ಪರಂಪರೆಯಿಂದ ಹಿಡಿದು ಕನ್ನಡ ಭಾಷೆಯ ಹೃದಯದ ಆಳದ ಸ್ಪಂದನೆಯವರೆಗೆ ಈ ಹಬ್ಬವೂ ನಮ್ಮ ಸ್ಮರಣೆಯಲ್ಲಿರುತ್ತದೆ ಎಂದರು.
ಸಂಸ್ಕೃತಿ ಎಂದರೆ ಬೇರೆ ಬೇರೆ ಧ್ವನಿಗಳ ಸಂಗಮ ಮಾತ್ರವಲ್ಲದೇ ವಿಭಿನ್ನತೆಯಲ್ಲೇ ಏಕತೆಯ ಸುಗಂಧವಾಗಿದೆ. ದಸರಾ ಹಬ್ಬವು ಸಮಗ್ರ ಸಂಸ್ಕೃತಿಯ ಪ್ರತೀಕವಾಗಿದ್ದು, ಹೃದಯಗಳನ್ನು ಒಂದುಗೂಡಿಸುವ ಸೇತುವೆಯಾಗಿದೆ. ಹಾಗಾಗಿ ಇಲ್ಲಿ ದ್ವೇಷವನ್ನು ಬೆಳೆಸುವುದರ ಬದಲು ಪ್ರೀತಿಯನ್ನು ಹುಟ್ಟಿಸುವುದರೊಂದಿಗೆ ನಮ್ಮ ಜೀವನದ ಪಾಠಗಳು ಎಂದಿಗೂ ಹೊಸ್ತಿಲ ಗಡಿ ದಾಟದೇ, ಯಾರನ್ನು ನೋಯಿಸದ ಜೀವ ಪರ ಮಾನವೀಯ ದರ್ಶನಗಳನ್ನು ಬೆಳೆಸಿಕೊಳ್ಳುವ ಮೂಲಕ ಎಲ್ಲರನ್ನು ಒಳಗೊಳ್ಳುವಂತಹ ಮನಸ್ಸು ಹಾಗೂ ಬದುಕನ್ನು ಗೌರವಿಸುವುದಾಗಿದೆ ಎಂದು ತಿಳಿಸುವ ಮೂಲಕ ದಸರಾ ಉದ್ಘಾಟಕರಾಗಿ ಆಯ್ಕೆಯಾದ ಬಗ್ಗೆ ತಮಗೆ ಇರುವ ಹೆಮ್ಮೆ ಹಾಗೂ ಪ್ರೀತಿ ಕುರಿತು ತಿಳಿಸಿದರು.
ನಾವೆಲ್ಲರೂ ಪ್ರಜಾಪ್ರಭುತ್ವದ ಮೌಲ್ಯ, ನಂಬಿಕೆ ಮತ್ತು ಸಂಸ್ಕೃತಿಗಳನ್ನು ಗೌರವಿಸುವ ಮೂಲಕ ನಮ್ಮ ಬದುಕನ್ನು ಶ್ರೀಮಂತಗೊಳಿಸಿಕೊಳ್ಳಬೇಕಿದ್ದು, ದಸರಾ ಹಬ್ಬವು ಮೈಸೂರು ನಗರ, ನಾಡು, ದೇಶಕ್ಕೆ ಸೀಮಿತವಾಗದೇ ಜಗತ್ತಿನಾದ್ಯಂತ ಮಾನವ ಕುಲಕ್ಕೆ ಶಾಂತಿ, ಪ್ರೀತಿ ಮತ್ತು ನ್ಯಾಯದ ದೀಪ ಬೆಳಗಿಸುವಂತಿರಬೇಕೆಂದು ಆಶಿಸಿದರು.
ಇಡೀ ಜಗತ್ತು ಯುದ್ಧದ ಹಾದಿಯಲ್ಲಿ ನಡೆಯುತ್ತಿರುವಾಗ ಮನುಕುಲವೂ ದ್ವೇಷ ಮತ್ತು ರಕ್ತಪಾತದಲ್ಲಿ ಮುಳುಗುತ್ತಿರುವಾಗ ಮೈಸೂರು ದಸರಾ ಘೋಷಣೆ ನಮ್ಮೆಲ್ಲರ ಕಿವಿಗಳಲ್ಲಿ ಪ್ರತಿಧ್ವನಿಸಲಿ ಹಾಗೂ ಮೇಳೈಸಲಿ ಎಂದು ತಿಳಿಸುವ ಮೂಲಕ ಸರ್ವ ಜನಾಂಗದ ಶಾಂತಿಯ ತೋಟ ಎಂದರಲ್ಲದೇ, ನಾವೆಲ್ಲರೂ ಅಸ್ತ್ರಗಳಿಂದ ಅಲ್ಲ ಅಕ್ಷರಗಳಿಂದ ನಮ್ಮ ಬದುಕನ್ನು ಗೆಲ್ಲಬೇಕೆಂದರು.
ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕು: ಜಾತಿ ಧರ್ಮದ ಆಧಾರದಲ್ಲಿ ದ್ವೇಷಿಸಬಾರದು-ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಬಾನು ಮುಷ್ತಾಕ್ ಅವರು ಹುಟ್ಟಿನಿಂದಲೇ ಮುಸ್ಲಿಂ ಮಹಿಳೆಯಾಗಿದ್ದರೂ, ಅವರು ಸಹ ಮನುಷ್ಯರೇ ಆಗಿರುತ್ತಾರೆ. ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕಾಗಿದ್ದು, ನಾವು ಯಾರನ್ನು ಸಹ ಜಾತಿ, ಧರ್ಮದ ಆಧಾರದ ಮೇಲೆ ದ್ವೇಷಿಸಬಾರದು. ಹಾಗಾಗಿ ಎಲ್ಲರಲ್ಲೂ ಪರಸ್ಪರ ಪ್ರೀತಿಯಿಂದಿರಬೇಕು ಎಂದು ನಾಡಹಬ್ಬ ದಸರಾ ಹಬ್ಬದ ಉದ್ಘಾಟಕರ ಆಯ್ಕೆ ಕುರಿತು ಸ್ಪಷ್ಪನೆ ನೀಡಿದರು.
ವಿಜಯನಗರ ಅರಸರಿಂದಲೂ ಸಹ ದಸರಾ ಮಹೋತ್ಸವ ಆಚರಣೆಯಲ್ಲಿದ್ದು, ವಿಜಯನಗರ ಸಾಮ್ರಾಜ್ಯ ಪತನದ ನಂತರ 1610 ರಲ್ಲಿ ಶ್ರೀರಂಗಪಟ್ಟಣದಲ್ಲಿ ಮೊದಲು ದಸರಾ ಮಹೋತ್ಸವ ಆಚರಣೆ ನೆರವೇರಿತು. ಹಾಗಾಗಿ ನಾವು ಇತಿಹಾಸದ ಕುರಿತು ಅರಿತು ಕೊಳ್ಳುವುದು ಮುಖ್ಯವಾಗಿರುತ್ತದೆ. ಯಾರಿಗೆ ಇತಿಹಾಸ ತಿಳಿದಿರುವುದಿಲ್ಲವೋ ಅವರು ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿರುವುದಿಲ್ಲ. ಹಾಗಾಗಿಯೇ ಶಾಲಾ, ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯ ಮಾಡಲಾಗಿರುತ್ತದೆ ಎಂದರು.
ಹಕ್ಕುಗಳು ಮತ್ತು ಜವಾಬ್ದಾರಿಗಳು ಎರಡು ಒಂದೇ ಆಗಿದ್ದು, ಜೊತೆಯಲ್ಲಿರುತ್ತವೆ. ಆದ್ದರಿಂದ ಮುಂದಿನ ಪೀಳಿಗೆ ವ್ಯವಸ್ಥೆಯನ್ನು ಅರ್ಥ ಮಾಡಿಕೊಲ್ಳಬೇಕಾದರೆ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಇತಿಹಾಸವನ್ನು ತಿರುಚಿ ತಮ್ಮ ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಅದಕ್ಕಾಗಿ ಬೇರೆ ವೇದಿಕೆಗಳಿದ್ದು ಇಂತಹ ಸುಸಂದರ್ಭದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವ ಹೊಂದಿರಬೇಕೆಂದರು.
ನಮ್ಮ ಸಂವಿಧಾನ ಜಾತ್ಯಾತೀತ ಮತ್ತು ಧರ್ಮಾತೀತವಾಗಿದ್ದು, ಸಂವಿಧಾನವನ್ನು ಅರ್ಥೈಸಿಕೊಳ್ಳಬೇಕಿದೆ. ವೈವಿಧ್ಯತೆಯಲ್ಲಿ ಏಕತೆ ಸಾರಬೇಕಾಗಿದ್ದು, ಯಾವುದೇ ಧರ್ಮ, ಜಾತಿ ಸೇರಿದರೂ ನಾವೆಲ್ಲರೂ ಭಾರತೀಯರು. ಹಾಗಾಗಿ ಸಂವಿಧಾನದ ಮೂಲತತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಸಂವಿಧಾನಕ್ಕೆ ಮಾಡುವ ಅಪಚಾರವಾಗುತ್ತದೆ ಎಂದರು.
ದಸರಾ ಹಬ್ಬ ಈ ಬಾರಿ ಹತ್ತು ದಿನವಲ್ಲದೇ ಹನ್ನೊಂದು ದಿನದ ಆಚರಣೆಯಾಗಿದ್ದು, ಎಂದಿನಂತೆ ಈ ಬಾರಿಯೂ ಸಹ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಅಲ್ಲದೇ ಈ ಬಾರಿಯ ಜಂಬೂ ಸವಾರಿಯಲ್ಲಿ ಗ್ಯಾರೆಂಟಿ ಯೋಜನೆ ಕುರಿತು ತಿಳಿಸಲಾಗುತ್ತಿದ್ದು, ಸ್ವಾತಂತ್ರ್ಯ ಬಂದು 78 ವರ್ಷವಾದರೂ ಅಸಮಾನತೆ, ತಾರತಮ್ಯ ಹೋಗಲಾಡಿಸಲು ಸಾಧ್ಯವಾಗಿರುವುದಿಲ್ಲ. ಹಾಗಾಗಿ ಈ ಐದು ಗ್ಯಾರೆಂಟಿ ಯೋಜನೆ ತರಲಾಗಿದೆ ವಿನಃ ರಾಜಕೀಯ ಲಾಭಕ್ಕಾಗಿ ಮಾಡಿರುವುದಲ್ಲ. ಕಡುಬಡವರಿಗೆ ಶಕ್ತಿ ತುಂಬಲು ಹಾಗೂ ಅವರನ್ನು ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಜಾರಿಗೆ ತರಲಾಗಿದೆ. ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮುಖ್ಯವಾಗಿ ಜಾತಿ ವ್ಯವಸ್ಥೆ ತೆಗೆದು ಹಾಕಬೇಕಾಗಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ ಅವರು ಮಾತನಾಡಿ, ನಾಡಹಬ್ಬ ದಸರಾ ಮಹೋತ್ಸವವು ಸೌಹರ್ದತೆ ಸಡಗರದ ಹಬ್ಬವಾಗಿದ್ದು, ಸುಮಾರು 15 ನೇ ಶತಮಾನದಲ್ಲಿಯೇ ಶ್ರೀ ಕೃಷ್ಣ ದೇವರಾಯ ಒಡೆಯರ್ ಅವರು ಪ್ರಾರಂಭಿಸಿರುತ್ತಾರೆ ಎಂದರು.
ಕೃಷ್ಣ ದೇವರಾಯ ಒಡೆಯರ್ ಅವರು ತಮ್ಮ ಸಾಮಂತರನ್ನೆಲ್ಲಾ ಒಂದುಗೂಡಿಸಿ ತಮ್ಮ ಸಾಧನೆ ಹಾಗೂ ಗೆಲುವನ್ನು ಸಂಭ್ರಮದಿಂದ ಶಕ್ತಿ, ಸಾಹಿತ್ಯ, ಸೌಹರ್ದತಾ ವೈಭವಗಳ ಸಾರುವಿಕೆಗಾಗಿ ಈ ಆಚರಣೆ ಮಾಡಲಾಗುತ್ತಿದ್ದು, ಬಳಿಕ ಧಾರ್ಮಿಕ ಸಹಿಷ್ಣತೆಯಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಚರಿಸುತ್ತಿದ್ದರು. ಅಂತೆಯೇ ಈ ಹಬ್ಬವು ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿದ್ದು, ಯಾವುದೇ ರೀತಿಯ ಜಾತಿ, ಧರ್ಮ ಐತಿಹ್ಯವನ್ನು ಮೀರಿ ಆಚರಣೆ ಮಾಡಲಾಗುತ್ತದೆ. ಆದ್ದರಿಂದಲೇ ಈ ಹಬ್ಬವೂ ಅಂತರಾಷ್ಟ್ರೀಯ ಮಟ್ಟದಲ್ಲೂ ಸಹ ಛಾಪನ್ನು ಮೂಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಪಶು ಸಂಗೋಪನೆ ಇಲಾಖೆ ಸಚಿವ ಕೆ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ಎಸ್ ತಂಗಡಗಿ, ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್, ಆಹಾರ, ನಾಗರೀಕ ಮತ್ತು ಸರಬರಾಜು ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ, ಶಾಸಕ ಜಿ.ಟಿ.ದೇವೇಗೌಡ, ಅರಣ್ಯ ವಿಹಾರ ಧಾಮಗಳ ಅಧ್ಯಕ್ಷ ಅನಿಲ್ ಚಿಕ್ಕಮಾದು, ಚೆಸ್ಕಾಂ ಅಧ್ಯಕ್ಷ ರಮೇಶ್ ಬಂಡಿ ಸಿದ್ದೇಗೌಡ, ಗ್ಯಾರೆಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದದ ಉಪಾಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕತನ್ವೀರ್ ಸೇಠ್, ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರವಿಶಂಕರ್ ಡಿ, ನಂಜನಗೂಡು ವಿಧಾನ ಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವ ನಾರಾಯಣ್, ಕೃಷ್ಣ ರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀವತ್ಸ, ಚಾಮರಾಜ ವಿಧಾನ ಸಭಾ ಕ್ಷೇತ್ರದ, ವಿಧಾನ ಪರಿಷತ್ ಸದಸ್ಯರಾದ ಡಿ.ತಿಮ್ಮಯ್ಯ, ಮಂಜೇಗೌಡ, ಶಿವಕುಮಾರ್ ಕೆ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಕೆ.ಎಂ. ಗಾಯಿತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು, ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ, ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗಮ್ಮ, ಉಪಾಧ್ಯಕ್ಷರು ಹಾಗೂ ದಸರಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
Key words: Mysore dasara, symbol of holistic, culture, Banu Mushtaq