ಡಾ.ಬಿ.ಆರ್.ಅಂಬೇಡ್ಕರ್ ಭವನ: ಮುಂದುವರೆದ ಕಾಮಗಾರಿಗಳಿಗೆ ಸಚಿವ ಹೆಚ್.ಸಿ ಮಹದೇವಪ್ಪ ಶಂಕುಸ್ಥಾಪನೆ

ಮೈಸೂರು, ಸೆಪ್ಟೆಂಬರ್,20,2025 (www.justkannada.in): ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಯನ್ನು  23.83 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂದವರೆದ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ ಅವರು, ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಶೇ.18ರ ಅನುದಾನದಲ್ಲಿ ಮುಂದುವರೆದ ಕಾಮಗಾರಿಗೆ ಅನುದಾನವನ್ನು ಬಳಕೆ ಮಾಡಲಾಗುತ್ತಿದೆ ಎಂದರು.

ಅಂಬೇಡ್ಕರ್ ಅವರು ಮೂರ್ತಿ ಪೂಜೆಯನ್ನು ವಿರೋಧಿಸಿದವರು, ಅಂಬೇಡ್ಕರ್ ಅವರನ್ನು ಅರಿಯಬೇಕಾದರೆ ಸಂವಿಧಾನ ಅಧ್ಯಯನ ಮಾಡಿ, ಅದರ ಆಶಯಗಳನ್ನು ತಿಳದರೆ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಮೇಲೆ ಕೋಮುವಾದಿಗಳಿಂದ ಸವಾರಿ ನಡೆಯುತ್ತಿದೆ. ಆದರೆ ದೇಶದ ಸಂವಿಧಾನ ಗಟ್ಟಿಯಾಗಿದ್ದು, ಸಮ ಸಮಾಜ ನಿರ್ಮಾಣ, ದೇಶದ ಅಭಿವೃದ್ಧಿ, ಐಕ್ಯತೆ ಹಾಗೂ ಬಹುತ್ವದ ರಕ್ಷಣೆ ನಡೆಯುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಶಿವಕುಮಾರ್  ಅವರು ಮಾತನಾಡಿ, ಅಂಬೇಡ್ಕರ್ ಅವರು ಹೆಣ್ಣು ಮಕ್ಕಳ ಹಕ್ಕಿಗಾಗಿ ಹೋರಾಡಿ ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶ ಕಲ್ಪಿಸುವಂತೆ ಸಂವಿಧಾನದ ಮೂಲಕ ಹಕ್ಕು ನೀಡಿದ್ದಾರೆ. ಅಂಬೇಡ್ಕರ್ ಎಂಬ ಶಕ್ತಿ ಇಂದು ಇಡೀ ಜಗತ್ತಿನಲ್ಲಿ ಚರ್ಚೆಯಲಿದ್ದು, ಅವರನ್ನು ಓದುವುದು ಮತ್ತು ಪರಾಮರ್ಶೆ ಮಾಡಲಾಗುತ್ತಿದೆ. ಆದ್ದರಿಂದ ಯಾವ ಶಕ್ತಿಗಳ ಕೈಲೂ ಸಂವಿಧಾನ ನಾಶ ಮಾಡಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಅವರು, ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷರಾದ ಪುಷ್ಪ ಅಮರನಾಥ ಅವರು, ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷರಾದ ಅರುಣ್ ಕುಮಾರ್ ಅವರು, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರು, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಕ್ಷಿತ್ ಅವರು,  ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ರಂಗೇಗೌಡ ಅವರು, ಮಾಜಿ ಮೇಯರ್ ಪುರುಷೋತ್ತಮ ಅವರು ಸೇರಿದಂತೆ ಇತರರು ಇದ್ದರು.

 ಯುದ್ಧದಲ್ಲಿ ಹುತಾತ್ಮ, ಅಂಗವೈಕಲ್ಯರಾದ ಯೋಧರು ಮತ್ತು ಕುಟುಂಬಕ್ಕೆ ನಿವೇಶನ ಪತ್ರ ವಿತರಣೆ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ವೇಳೆ ಯುದ್ಧದಲ್ಲಿ ಹುತಾತ್ಮರಾದ ಮತ್ತು ಅಂಗವೈಕಲ್ಯರಾದ ಯೋಧರು ಮತ್ತು ಕುಟುಂಬದವರಿಗೆ  ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿವಿಧ ಬಡಾವಣೆಗಳನ್ನು ನಿವೇಶನವನ್ನು ಮಂಜೂರು ಮಾಡಲಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರು ಶನಿವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂದವರೆದ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭ ಕಾರ್ಯಕ್ರಮದ ಸ್ಥಳದಲ್ಲಿ ನಿವೇಶನ ಮಂಜೂರಾತಿ ಪತ್ರಗಳನ್ನು ವಿತರಿಸಿದರು.

ಹುದ್ದೆ                   ಹೆಸರು

1)ಸುಬೇದಾರ್ – ಸುಬ್ರಮಣಿ ಪಿ.ಬಿ

2) ನಾಯ್ಕ್ – ರಾಧಾಕೃಷ್ಣ ಕೆ.ಎಸ್

3) ಆರ್ಡಿನರಿ ನಾಯ್ಕ್ ಸುಬೆದಾರ್ – ದೇವರಾಜು ಎಸ್.ಪಿ

4) ಭಾರತೀಯ ಭೂ ಸೇನೆ ಕ್ಯಾಪ್ಟನ್ – ಎಂ.ವಿ. ಪ್ರಾಂಜಲ್

5) ನಾಯ್ಕ್ – ಕಿರಣ್ ಕುಮಾರ್ ಬಿ.ಎನ್

6) ಹಮಲ್ದಾರ್ – ರಮೇಶ ಬಿ

7) ಸಿ.ಟಿ.ಜಿ.ಡಿ – ಗುರು ಹೆಚ್

Key words: Dr. B.R. Ambedkar Bhavan, Mysore,  Minister, H.C. Mahadevappa