ಮೈಸೂರು,ಸೆಪ್ಟಂಬರ್,20,2025 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದು ಮೈಸೂರು ಅರಮನೆಯಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಯ ಶಿಬಿರಕ್ಕೆ ಸಾರ್ವಜನಿಕರಿಗೆ ನಿರ್ಬಂಧವಿದ್ದು ಆದರೂ ಸಹ ಆನೆಗಳ ಜೊತೆ ಯುವತಿ ರೀಲ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಈ ಬೆನ್ನಲ್ಲೆ ಎಚ್ಚೆತ್ತ ಅರಣ್ಯ ಇಲಾಖೆ ಯುವತಿಗೆ ದಂಡ ವಿಧಿಸಲು ಮುಂದಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅರಣ್ಯ ಇಲಾಖೆ, 2025ರ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಇಲಾಖಾ ಆನೆಗಳು ಮೈಸೂರು ಅರಮನೆ ಆವರಣದಲ್ಲಿ ವಾಸ್ತವ್ಯ ಮಾಡಿದ್ದು ಸದರಿ ಆನೆಗಳ ಸಿಬ್ಬಂದಿಗಳು ಹಾಗೂ ಅವರ ಕುಟುಂಬ ವರ್ಗದವರು ಮತ್ತು ಮಾದ್ಯಮದವರನ್ನು ಹೊರತುಪಡಿಸಿ ಸಾರ್ವಜನಿಕರು ದಸರಾ ಆನೆಗಳ ಶಿಬಿರಕ್ಕೆ ತೆರಳಲು ಅವಕಾಶವಿರುವುದಿಲ್ಲ.
ಆದರೆ ದಿನಾಂಕ: 18.09.2025 ರಂದು ಅಪರಿಚಿತ ಮಹಿಳೆಯೊಬ್ಬರು ಮೈಸೂರು ಅರಮನೆ ಆವರಣದಲ್ಲಿರುವ ದಸರಾ ಆನೆಗಳ ಕ್ಯಾಂಪ್ ಗೆ ಬಂದು ಆನೆಗಳ ಸಮೀಪ ತೆರಳಿ ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ಮಾಡಿ ರೀಲ್ಸ್ ಗಳ ಮೂಲಕ ಸೋಷಿಯಲ್ ಮೀಡಿಯದಲ್ಲಿ ಅಪ್ಲೋಡ್ ಮಾಡಿರುವುದು ಕಂಡುಬಂದಿದ್ದು, ಆ ಮಹಿಳೆಗೆ ಅರಣ್ಯ ಇಲಾಖೆಯಿಂದ ಆನೆಗಳ ಸಮೀಪ ತೆರಳಲು ಅನುಮತಿ ನೀಡಿಲ್ಲ ಹಾಗೂ ರಾತ್ರಿಯ ವೇಳೆ ನಮ್ಮ ಸಿಬ್ಬಂದಿಗಳ ಕಣ್ತಪ್ಪಿಸಿ ಆನೆಗಳ ಸಮೀಪ ತೆರಳಿದ್ದು, ಆ ಮಹಿಳೆಯನ್ನು ಪತ್ತೆಹಚ್ಚಿ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಇದೇ ರೀತಿ ಅನುಮತಿ ಇಲ್ಲದೇ ಆನೆಗಳ ಬಳಿ ತೆರಳಿ ಪೋಟೋ ಹಾಗೂ ವಿಡಿಯೋಗಳನ್ನು ಮಾಡುತ್ತಿದ್ದ 3 ಪ್ರಕರಣಗಳಲ್ಲಿ ನಮ್ಮ ಸಿಬ್ಬಂದಿಗಳು ಅವರಿಗೆ ತಲಾ .1000/-ದಂಡವನ್ನು ವಿಧಿಸಲಾಗಿರುತ್ತದೆ. ಈ ರೀತಿ ಪ್ರಕರಣಗಳು ಪುನರಾರ್ವತನೆಯಾದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಅರಣ್ಯ ಇಲಾಖೆಯಿಂದ ಆನೆಗಳ ಸಿಬ್ಬಂದಿಗಳು ಹಾಗೂ ಅವರ ಕುಟುಂಬ ವರ್ಗದವರು ಮತ್ತು ಮಾದ್ಯಮದವರನ್ನು ಹೊರತುಪಡಿಸಿ ಸಾರ್ವಜನಿಕರು/ಪ್ರವಾಸಿಗರು ಯಾರಿಗೂ ಆನೆಗಳ ಸಮೀಪ ತೆರಳಲು, ಛಾಯಾಚಿತ್ರ ಅಥವ ವಿಡಿಯೋಗಳನ್ನು ಮಾಡಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಇದನ್ನು ಉಲ್ಲಂಘಿಸಿ ಆನೆ ಶಿಬಿರಕ್ಕೆ ಪ್ರವೇಶಿಸುವವರಿಗೆ ಹಾಗೂ ಆನೆಗಳ ಬಳಿ ತೆರಳವವರಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಾನೂನಿನ ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವು ನಮ್ಮ ನಾಡಹಬ್ಬವಾಗಿದ್ದು, ನಾಡಹಬ್ಬ ಯಶಸ್ಸಿಗೆ ಎಲ್ಲಾರ ಸಹಕಾರವು ಅಗತ್ಯವಿರುವುದರಿಂದ, ಮಾಧ್ಯಮ ಹಾಗೂ ಪತ್ರಿಕಾ ಮಿತ್ರರೂ ಸಹ ಇಲಾಖೆಯೊಂದಿಗೆ ಸಹಕರಿಸಿ ಮೈಸೂರು ದಸರಾ ಮಹೋತ್ಸವನ್ನು ಯಶಸ್ವಿಗೊಳಿಸುವಂತೆ ಡಿಸಿಎಫ್ ಪ್ರಭುಗೌಡ ಮನವಿ ಮಾಡಿದ್ದಾರೆ.
Key words: Restrictions, Mysore, Dasara Gajapade camp, Fine, young woman