ಮೈಸೂರು,ಸೆಪ್ಟಂಬರ್,15,2025 (www.justkannada.in): ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಟೆಂಡರ್, ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದ್ದು, 2023ರಿಂದ ಸತತವಾಗಿ ಪದೇಪದೇ ಕಾಯ್ದೆಗಳ ಉಲ್ಲಂಘನೆ ಮಾಡಿ ಟೆಂಡರ್ ಹೆಸರಿನಲ್ಲಿ ವಸ್ತುಗಳ ಖರೀದಿ ಮತ್ತು ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ತಕ್ಷಣವೇ ವಿಶೇಷ ತನಿಖೆ ನಡೆಸಬೇಕು ಎಂದು ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ. ಟಿ.ಆರ್ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಈ ಕುರಿತು ಮೈಸೂರು ವಿವಿ ಕುಲಪತಿಗಳಿಗೆ ಪತ್ರ ಬರೆದಿರುವ ಡಾ.ಟಿ.ಆರ್ ಚಂದ್ರಶೇಖರ್, 2023 ರಿಂದ ಮೈಸೂರು ವಿಶ್ವವಿದ್ಯಾಲಯದಲ್ಲಿ ಟೆಂಡರ್ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಗಂಭೀರ ಅಕ್ರಮಗಳನ್ನು, ನಾನು ಅನೇಕ ಸಿಂಡಿಕೇಟ್ ಸಭೆಗಳಲ್ಲಿ ಆಕ್ಷೇಪಿಸುತ್ತಾ ಬಂದಿದ್ದೇನೆ. ಟೆಂಡರ್ ಗಳನ್ನು ನೀಡುವಲ್ಲಿ ಕೆಟಿಟಿಪಿ ಕಾಯ್ದೆ, 1999 (ವಿಧಿ 9) ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ, 2000 (ವಿಧಿ 29 (1) & (2b))ಗಳನ್ನು 2023ರಿಂದ ಸತತವಾಗಿ ಪದೇಪದೇ ಕಾಯ್ದೆಗಳ ಉಲ್ಲಂಘನೆ ಮಾಡಿ ಟೆಂಡರ್ ಹೆಸರಿನಲ್ಲಿ ವಸ್ತುಗಳ ಖರೀದಿ ಮತ್ತು ಕಾಮಗಾರಿಗಳನ್ನು ನಡೆಸುವ ಮುಖೇನ ಆರ್ಥಿಕ ಸಂಕಷ್ಟದಲ್ಲಿರುವ ನಮ್ಮ ವಿವಿಯ ಹಣಕಾಸು ನಿಧಿಗಳ ದುರುಪಯೋಗವಾಗಿದೆ ಎಂಬುದು ಸ್ಪಷ್ಟವಾಗಿದೆ.
ಇದರ ಮುಂದುವರಿದ ಭಾಗವಾಗಿ ಮತ್ತೆ ತಾವುಗಳು, 2025ರ ಆಗಸ್ಟ್ 5 ರಂದು ರಾಜ್ಯ ಸಾರ್ವಜನಿಕ ಖರೀದಿ ಪೋರ್ಟಲ್ ನಲ್ಲಿ ಕೆಳಗಿನ ಶೀರ್ಷಿಕೆಯಲ್ಲಿ ಟೆಂಡರ್ ಆಹ್ವಾನಿಸಿ ಆಯ್ಕೆ ಮಾಡಿ ಚಾಲನೆ ನೀಡಿರುವುದು ಕಂಡುಬಂದಿದಿದೆ.
ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಈ ಸುಧೀರ್ಘಕಾಲದ ಅವ್ಯವಹಾಗಳ ಹಿನ್ನೆಲೆಯಲ್ಲಿ, ಮೈಸೂರು ವಿಶ್ವವಿದ್ಯಾಲಯದ ಕೆಲವು ಅಧಿಕಾರಿಗಳಿಗೆ ಹಣಕಾಸು ನಿಧಿಗಳ ದುರುಪಯೋಗ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಕೆಟಿಟಿಪಿ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ “ಕರ್ನಾಟಕ ಲೋಕಾಯುಕ್ತ” ದಲ್ಲಿ ಸಾರ್ವಜನಿಕರು ಈಗಾಗಲೇ ದೂರು ನೀಡಿರುವ ಕಾರಣ, ಲೋಕಾಯುಕ್ತರು ಸದರಿ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಗಮನಕ್ಕೆ ಬಂದಿದೆ.
ತಾವುಗಳು, ಈ ರೀತಿ ಕಾನೂನು ಬಾಹಿರವಾಗಿ ಹಲವು ವರ್ಷಗಳಿಂದ ನಡೆಸುತ್ತಿರುವ ಸದರಿ ಟೆಂಡರ್ ಪ್ರಕ್ರಿಯೆಗಳ ಬಗ್ಗೆ, ನಾನು ಹಲವಾರು ಸಿಂಡಿಕೇಟ್ ಸಭೆಗಳಲ್ಲಿ ಆಕ್ಷೇಪಿಸುತ್ತಾ ಬಂದಿದ್ದೇನೆ. ಅಂತಹ ಸಂದರ್ಭಗಳಲ್ಲಿ, ನೀವು ಸದರಿ ಟೆಂಡರ್ ಗಳಿಗೆ ಸಿಂಡಿಕೇಟ್ ಸಭೆಯ ಅನುಮತಿ ಅಗತ್ಯವಿಲ್ಲವೆಂದು ಸಮರ್ಥಿಸುತ್ತಾ ಬಂದಿರುತ್ತೀರಿ..! ಕೆಲವೊಮ್ಮೆ ಸದಸ್ಯರುಗಳಿಂದ ವಿರೋಧಗಳು ತೀವ್ರವಾದಾಗ ಮುಂದಿನ ದಿನಗಳಲ್ಲಿ ನಿಯಮಗಳನ್ನು ಪಾಲಿಸುವುದಾಗಿ ಭರವಸೆ ನೀಡುತ್ತಾ ಬಂದಿರುತ್ತೀರಿ..!
ಇದಕ್ಕೆ ಪೂರಕವಾಗಿ ಕಳೆದ ಸಿಂಡಿಕೇಟ್ ಸಭೆಯಲ್ಲಿ ಅಂದರೆ ದಿನಾಂಕ 20.08.2025 ರಂದು ನಾನು ಸಲ್ಲಿಸಿದ ಪತ್ರಕ್ಕೆ, ಇಂದಿನವರೆಗೂ ನೀವು ಯಾವುದೇ ಲಿಖಿತ ಉತ್ತರ ನೀಡದೇ ಇರುವುದು ಅತ್ಯಂತ ದುರದಷ್ಟಕರ ಸಂಗತಿಯಾಗಿದೆ. ಇದರ ಅರ್ಥ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಹಣಕಾಸು ದುರುಪಯೋಗ ಮಾಡುವ ಸಲುವಾಗಿಯೇ, ನೀವುಗಳು ಕೆಟಿಟಿಪಿ ಕಾಯ್ದೆ 1999 ಮತ್ತು ಕೆಎಸ್‌ಯು ಕಾಯ್ದೆ 2000 ರ ನಿಯಮಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ ಎಂಬುದನ್ನು ತೋರಿಸುತ್ತದೆ.
ಆದ್ದರಿಂದ ”ಕಾಯ್ದೆಗಳ ವಿರುದ್ಧವಾಗಿ ಹಾಗೂ ಸಿಂಡಿಕೇಟ್ ಒಪ್ಪಿಗೆ ಇಲ್ಲದೆ, ನಿಯಮ ಮೀರಿ ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಟೆಂಡರ್ ಪ್ರಕ್ರಿಯೆಗಳನ್ನು ಮತ್ತು ಯಾವುದೇ ಟೆಂಡರ್ ರಹಿತವಾಗಿ ಮಾಡಿಕೊಂಡಿರುವ ಎಲ್ಲಾ ಕರಾರುಗಳನ್ನು ತಕ್ಷಣ ಸ್ಥಗಿತಗೊಳಿಸಿ ರದ್ದುಗೊಳಿಸಬೇಕು ಎಂದು ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ತಮ್ಮ ಈ ಕಾನೂನುಬಾಹಿರ ಆಡಳಿತ ಮತ್ತು ಹಣಕಾಸು ದುರುಪಯೋಗ ಹಾಗೂ ಭ್ರಷ್ಟಾಚಾರ ನಡೆಸುತ್ತಿರುವ ಬಗ್ಗೆ ತಕ್ಷಣ ವಿಶೇಷ ತನಿಖೆ ನಡೆಸಬೇಕೆಂದು ಚಂದ್ರಶೇಖರ್ ಒತ್ತಾಯಿಸಿದ್ದಾರೆ.
Key words: Mysore University, Tender, Illegal, TR Chandrasekhar