ಮೈಸೂರು,ಸೆಪ್ಟಂಬರ್,11,2025 (www.justkannada.in): ಮೈಸೂರಿನ ಹೂಟಗಳ್ಳಿಯಲ್ಲಿರುವ ಒಡನಾಡಿ ಸಂಸ್ಥೆಯ ಮೂರು ವರ್ಷದ ಹಣಕಾಸಿನ ವಹಿವಾಟು ಬಹಿರಂಗವಾಗಿದ್ದು ಒಡನಾಡಿ ಸಂಸ್ಥೆಗೆ ಕಳೆದ ಮೂರು ವರ್ಷದಿಂದ 2.25 ಕೋಟಿ ಹಣ ವಿದೇಶದಿಂದ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಧರ್ಮಸ್ಥಳ ಅಪಪ್ರಚಾರಕ್ಕೆ ವಿದೇಶದಿಂದ ಹಣ ಬಂದಿದೆ, ಕೋಟ್ಯಾಂತರ ರೂ ಹಣ ಬಂದ ಹಿನ್ನೆಲೆಯಲ್ಲಿ ಇಡಿಯಿಂದ ಶೋಧಕಾರ್ಯ ನಡೆಸಲಾಗಿತ್ತು ಎಂಬ ವರದಿಯಾದ ಹಿನ್ನೆಲೆ, ರಾಜ್ಯ ಗುಪ್ತಚರ ಇಲಾಖೆಯು ಒಡನಾಡಿ ಸಂಸ್ಥೆಯ ಮೂರು ವರ್ಷದ ವರದಿಯನ್ನ ಸಂಗ್ರಹ ಮಾಡಿದ್ದು, ಸಂಸ್ಥೆಗೆ ಕಳೆದ ಮೂರು ವರ್ಷದಿಂದ 2.25 ಕೋಟಿ ಹಣ ವಿದೇಶದಿಂದ ಬಂದಿದೆ.
FRCA ಎನ್ ಜಿಓಗಳ ಪೈಕಿ ಒಡನಾಡಿಗೂ ಕೋಟಿ- ಕೋಟಿ ಹಣ ಹರಿದು ಬಂದಿದ್ದು, ಟೀ ಶರ್ಟ್ ಮಾರಾಟದಿಂದಲೇ 1.25 ಕೋಟಿ ರೂ ಸಂಗ್ರಹವಾಗಿದೆ. ಇಂಗ್ಲೆಂಡ್, ಅಮೇರಿಕಾ ಸೈನಿಕರಿಗೂ ಒಡನಾಡಿ ಸಂಸ್ಥೆ ಪಾಠ ಮಾಡಿದ್ದು ಒಬ್ಬರಿಗೆ 8 ಸಾವಿರ ರೂ. ಚಾರ್ಜ್ ಮಾಡಿದೆ. ಆರು ದಿನಕ್ಕೆ 40 ಸಾವಿರದಂತೆ ಪ್ರತಿ ವಿದೇಶಿ ಯೋಧರಿಂದಲೂ ಹಣ ಸಂಗ್ರಹ ಮಾಡಿದ್ದು, ಸದ್ಯ ಒಡನಾಡಿ ಸಂಸ್ಥೆಯ ಅಕೌಂಟ್ ನಲ್ಲಿ 65 ಲಕ್ಷ ರೂ ಮಾತ್ರ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಡನಾಡಿ ಪರಶು ಸ್ಪಷ್ಟನೆ
ಈ ಕುರಿತು ಮಾತನಾಡಿ ಸ್ಪಷ್ಟನೆ ನೀಡಿರುವ ಒಡನಾಡಿ ಪರಶು ಅವರು, ದಕ್ಷಿಣ ಭಾರತದಲ್ಲಿಯೇ ಒಡನಾಡಿ ಸಂಸ್ಥೆ ಅತ್ಯುತ್ತಮ ಸೇವಾಸಂಸ್ಥೆ ಎಂಬ ಪ್ರಶಸ್ತಿ ಪಡೆದುಕೊಂಡಿದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿವರ್ಷ ಸಂಸ್ಥೆಗಳಿಗೆ ನೀಡುವ ಧನ ಸಹಾಯಕ್ಕೆ ಒಡನಾಡಿ ಸೇವಾ ಸಂಸ್ಥೆಯನ್ನ ವೋಟಿಂಗ್ ಮೂಲಕ ಹಲವು ದೇಶಗಳು ಗುರುತಿಸುತ್ತವೆ. ನಾವು ಮಾನವ ಕಳ್ಳಸಾಗಾಣೆ ಕುರಿತು ಜಾಗೃತಿ ಮೂಡಿಸುವ ಟೀಶರ್ಟ್ ಗೆ ವಿಶ್ವದ್ಯಾಂತ ಹೆಚ್ಚಿನ ಬೇಡಿಕೆ ಇದೆ. ಆ ಟೀಶರ್ಟ್ ಗಳ ಮಾರಾಟದಿಂದಲೇ 1.25 ಲಕ್ಷಕ್ಕೂ ಹೆಚ್ಚು ಹಣ ಬಂದಿದೆ ಉಳಿದಂತೆ ಸಂಸ್ಥೆ ಶ್ರೇಯಾಭಿವೃದ್ದಿಗಾಗಿ ನಾವು ಬೇರೆ ಬೇರೆ ದೇಶದ ಯೋಧರಿಗೂ ಪಾಠ ಮಾಡುತ್ತೇವೆ. ಅದರಿಂದಲೂ ಲಕ್ಷಾಂತರ ಹಣ ಬರುತ್ತದೆ. ಸಂಸ್ಥೆಯಲ್ಲಿರುವುದು ಈಗ ಕೇವಲ 66 ಲಕ್ಷ ರೂ. ಮಾತ್ರ. ಪ್ರತಿ ತಿಂಗಳು ಸಂಬಳಕ್ಕಾಗಿಯೇ 2 ಲಕ್ಷಕ್ಕೂ ಹೆಚ್ಚ ಹಣ ವಿನಿಯೋಗಿಸಬೇಕು. ಸಂಸ್ಥೆಯ 140 ಕ್ಕೂ ಹೆಚ್ಚು ಮಕ್ಕಳಿಗೆ ವಸತಿ, ಊಟ, ವಿದ್ಯಾಭ್ಯಾಸ ಕಲ್ಪಿಸಿ ಕೊಡುತ್ತೇವೆ. ಈವರೆಗೆ ಸಂಸ್ಥೆಯಿಂದ 14 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ನೆಲೆ ನೀಡಿದ್ದೇವೆ. ನಮ್ಮದು ಪಾರದರ್ಶಕವಾಗಿ ನಡೆಯುತ್ತಿರುವ ಸಂಸ್ಥೆ ವಿದೇಶದಿಂದ ಬರುವ ಒಂದೊಂದು ರೂಪಾಯಿಯನ್ನು ಬಿಡುಗಡೆ ಮಾಡುವುದು ಕೇಂದ್ರ ಗೃಹ ಇಲಾಖೆ. ಖುದ್ದು ಅಮಿತ್ ಶಾ ಅವರೇ ಎಲ್ಲವನ್ನೂ ಅವಲೋಕಿಸಿ ಹಣ ಬಿಡುಗಡೆ ಮಾಡ್ತಾರೆ.
ಸಂಸ್ಥೆ ಕಳೆದ 8 ತಿಂಗಳ ಅವಧಿಯಲ್ಲಿ ನಗದು ಮೂಲಕ ಖರ್ಚು ಮಾಡಿರುವುದು 14 ಸಾವಿರ ಮಾತ್ರ. ಉಳಿದಂತೆ ಎಲ್ಲವನ್ನೂ ಅಕೌಂಟ್ ಮೂಲಕವೇ ಮಾಡಲಾಗಿದ್ದು ಸಂಸ್ಥೆ ಪಾರದರ್ಶಕವಾಗಿದೆ. ನಾವು ಅಂದೇ ಹೇಳಿದಂತೆ ಜಗತ್ತಿನ ಯಾವುದೇ ತನಿಖೆ ನಡೆಸಿದರೂ ಸ್ವಾಗತಿಸುತ್ತೇವೆ . ಇಂತಹ ವಿಚಾರಗಳಿಂದಾದರೂ ಒಡನಾಡಿ ಸಂಸ್ಥೆಗೆ ದಾನಿಗಳು ಸಹಕರಿಸಲಿ ಎಂಬುದು ನಮ್ಮ ಮನವಿ. ನಾವು ಎಲ್ಲವನ್ನೂ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದೇವೆ. ಯಾರು ಬೇಕಾದರೂ ಅದನ್ನ ತೆಗೆದುಕೊಂಡು ಪರಿಶೀಲನೆ ಮಾಡಬಹುದು ಎಂದು ಒಡನಾಡಿ ಪರಶು ತಿಳಿಸಿದ್ದಾರೆ.
Key words: Odanadi organization, Rs 2.25 crore, abroad