ಬೆಂಗಳೂರು, ಸೆಪ್ಟಂಬರ್,10,2025 (www.justkannada.in): ವಿವಿಧ ವಸತಿ ಯೋಜನೆಗಳ ಅಡಿ ನಿರ್ಮಿಸಲಾಗುತ್ತಿರುವ ಮನೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ಹಂಚಿಕೆಗೆ ಪ್ರಸ್ತಾವನೆಗಳನ್ನು ಸಲ್ಲಿಸಿ, ಅನುಮೋದನೆ ಪಡೆದು, ಶೀಘ್ರ ಅವುಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅನುಷ್ಠಾನಗೊಂಡಿರುವ ಹಾಗೂ ಚಾಲ್ತಿಯಲ್ಲಿರುವ ವಸತಿ ಯೋಜನೆಗಳು ಸ್ಥಿತಿಗತಿ, ಅನುದಾನದ ಅಗತ್ಯತೆ ಇನ್ನು ಮುಂತಾದ ವಿಚಾರಗಳ ಬಗ್ಗೆ ಮಾಹಿತಿ ಪಡೆದು, ಸಲಹೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಚರ್ಚೆಯಾದ ವಿಷಯಗಳು ಹೀಗಿದೆ..
ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಅಡಿ ಹಿಂದಿನ ಬಾರಿ ನಮ್ಮ ಸರ್ಕಾರವಿದ್ದಾಗ 43,874 ಮನೆಗಳು ಸೇರಿದಂತೆ ಒಟ್ಟು 47,848 ಮನೆಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ 13,303 ಮನೆಗಳು ಬಹುತೇಕ ಪೂರ್ಣಗೊಂಡಿದ್ದು, ಒಟ್ಟು 25,815 ಮನೆಗಳು ನಿರ್ಮಾಣ ಹಂತದಲ್ಲಿವೆ.
ಇದರಲ್ಲಿ ಫಲಾನುಭವಿಗಳ ವಂತಿಕೆ ಒಟ್ಟು ರೂ. 134 ಕೋಟಿ ಸಂಗ್ರಹಿಸಲಾಗಿದೆ. ಮೊದಲ ಹಂತದಲ್ಲಿ 7,900 ಮನೆಗಳು ಬಹುತೇಕ ಪೂರ್ಣಗೊಂಡಿದ್ದು, ಫಲಾನುಭವಿಗಳ ವಂತಿಕೆ ಮೊತ್ತ ರೂ. 216 ಕೋಟಿ ಬಾಕಿಯಿದೆ. ಮನೆ ಹಂಚಿಕೆ ಮಾಡಲು ಸಾಧ್ಯವಾಗುವಂತೆ ಈ ಬಾಕಿ ಮೊತ್ತದ ಪಾವತಿ ಬಗ್ಗೆ ಹುಡ್ಕೋದಿಂದ ಸಾಲ ಪಡೆಯುವುದು ಸೇರಿದಂತೆ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸ್ಲಂ ಬೋರ್ಡ್ ಅಡಿ 42,000 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಇಲ್ಲಿ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲು ನಮ್ಮ ಸರ್ಕಾರ ಅನುದಾನ ಒದಗಿಸಲಿದೆ. ಅಂಬೇಡ್ಕರ್ ವಸತಿ ಯೋಜನೆ (ಗ್ರಾಮೀಣ)ಅಡಿ ರೂ.900 ಕೋಟಿ ಅನುದಾನ ಬಜೆಟ್ ನಲ್ಲಿ ನಿಗದಿಪಡಿಸಲಾಗಿದೆ. ಈ ಯೋಜನೆಯಡಿ 94,939 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, 56,682 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.
Key words: Housing project, progress review, meeting, CM Siddaramaiah