ಕುಂದು ಕೊರತೆ ಸಭೆ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಜಿ.ಪಂ CEO

ಮಂಡ್ಯ,ಸೆಪ್ಟಂಬರ್,3,2025 (www.justkannada.in): ಕೆ. ಆರ್. ಪೇಟೆ ತಾಲೂಕಿನ ಕಿಕ್ಕೇರಿಯ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ. ಆರ್ ಅವರು ಭಾಗವಹಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಕಿಕ್ಕೇರಿಯಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ  ಮನವಿಗಳನ್ನು ಸ್ವೀಕರಿಸಿ ಮಾತನಾಡಿದ ಜಿ.ಪಂ ಸಿಇಒ ನಂದಿನಿ ಕೆ.ಆರ್ ಅವರು, ಜಿಲ್ಲಾ ಕೇಂದ್ರದಿಂದ ದೂರದಲ್ಲಿರುವ ಸಾರ್ವಜನಿಕರು ತಮ್ಮ ಮನವಿಗಳನ್ನು ಸಲ್ಲಿಸಲು ಅಲೆದಾಡುವುದನ್ನು ತಪ್ಪಿಸಲು ಹೋಬಳಿ ಮಟ್ಟದ ಕುಂದುಕೊರತೆ ಸಭೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈಗಾಗಲೇ ಪ್ರತೀ ಸೋಮವಾರ ಗ್ರಾ.ಪಂ., ತಾ.ಪಂ. ಮತ್ತು ಜಿಲ್ಲಾ ಪಂಚಾಯತ್ ಕಚೇರಿಗಳಲ್ಲಿ ಸಾರ್ವಜನಿಕ ಸೋಮವಾರ ಆಯೋಜಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ವೀಕರಿಸಿ ನಿಯಮಾನುಸಾರ ಹಾಗೂ ಆಧ್ಯತೆ ಮೇರೆಗೆ ಪರಿಹರಿಸಲು ಕ್ರಮವಹಿಸಲಾಗಿದೆ ಎಂದರು.

ಅದರ ಮುಂದಿನ ಹಂತವಾಗಿ ಜಿಲ್ಲೆಯ ಕೇಂದ್ರ ಸ್ಥಾನದಿಂದ ದೂರದಲ್ಲಿರುವ ಹೋಬಳಿಗಳಲ್ಲಿ ಕುಂದುಕೊರತೆ ಸಭೆಗಳನ್ನು ಆಯೋಜಿಸಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ಅಲೆದಾಡುವುದನ್ನು ತಪ್ಪಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕುಡಿಯುವ ನೀರು, ನೈರ್ಮಲ್ಯ, ನರೇಗಾ ಯೋಜನೆಯ ಸಾಮಗ್ರಿ ಮೊತ್ತ, ವಸತಿ, ನಿವೇಶನ ಹಂಚಿಕೆ ವಿಷಯಗಳು ಸೇರಿದಂತೆ 22 ಅರ್ಜಿಗಳು ಸ್ವೀಕೃತವಾದವು. ಸ್ವೀಕೃತವಾದ ಅರ್ಜಿಗಳಿಗೆ ಸಂಬಂಧಿಸಿದಂತೆ, ಸ್ಥಳದಲ್ಲೇ ಹಾಜರಿದ್ದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ನಿಯಮಾನುಸಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡು, ತೆಗೆದುಕೊಂಡ ಕ್ರಮಗಳ ಬಗ್ಗೆ ಒಂದು ವಾರದೊಳಗಾಗಿ ಜಿಲ್ಲಾ ಪಂಚಾಯತ್ ಗೆ ವರದಿ ಸಲ್ಲಿಸಲು ಸೂಚಿಸಿದರು.

ಕುಂದು ಕೊರತೆ ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಲಕ್ಷ್ಮಿ, ಸಹಾಯಕ ಸಾಂಖ್ಯಿಕ ಅಧಿಕಾರಿ ಅನಿತಾ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ ಹಾಗೂ ಕಿಕ್ಕೇರಿ ಹೋಬಳಿ ವ್ಯಾಪ್ತಿಯ 7 ಗ್ರಾಮ ಪಂಚಾಯತ್ ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.

Key words: meeting, Mandya ZP,  CEO, receives, public complaints