ಮೈಸೂರು,ಆಗಸ್ಟ್,12,2025 (www.justkannada.in): ಉತ್ತಮ ಸಮಾಜ ನಿರ್ಮಿಸುವ ಕನಸು ಹೊಂದಿದವರು ಉನ್ನತ ಹುದ್ದೆ ಪಡೆಯುವ ಗುರಿ ಹೊಂದಿರಬೇಕು ಎಂದು ಸ್ಪರ್ಧಾರ್ಥಿಗಳಿಗೆ ಬೆಂಗಳೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಐಜಿ ರವಿ ಡಿ.ಚನ್ನಣ್ಣನವರ್ ಕಿವಿಮಾತು ಹೇಳಿದರು.
ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಆಯೋಜಿಸಿರುವ ಯುಜಿಸಿ-ನೆಟ್/ಕೆ-ಸೆಟ್ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗೆಯನ್ನು ಎಳೆಎಳೆಯಾಗಿ ವಿವರಿಸಿದರು.
ಪ್ರತಿ ವ್ಯಕ್ತಿಯ ಬದುಕಿನಲ್ಲಿ ಎರಡು ರೀತಿಯ ಸೋಂಕುಗಳಿರುತ್ತವೆ. ಒಂದು ನಕಾರಾತ್ಮಕ ಸೋಂಕು, ಮತ್ತೊಂದು ಸಕಾರಾತ್ಮಕ ಸೋಂಕು. ದುಶ್ಚಟ, ಸಮಯ ವ್ಯರ್ಥ ಇವು ನಕಾರಾತ್ಮಕ ಸೋಂಕು, ಪುಸ್ತಕ ಹಿಡಿಯುವುದು, ಒಳ್ಳೆಯ ಸ್ನೇಹಿತರ ಒಡನಾಟ ಸಕಾರಾತ್ಮಕ ಅಂಶ ಎಂದು ತಿಳಿಸಿದರು.
ನಾಗರಿಕತೆಗೆ ಒಂದು ಚರಿತ್ರೆ ಇದೆ. ದೇಶ, ರಾಜ್ಯಕ್ಕೆ ಪ್ರತಿ ವರ್ಷ ಯೋಜನೆ ರೂಪಿಸಲಾಗುತ್ತದೆ. ಅಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗೆ ವೇಳಾಪಟ್ಟಿ ಅತ್ಯಗತ್ಯ. ವೇಳಾಪಟ್ಟಿ ಇಲ್ಲದಿದ್ದರೆ ಯಶಸ್ಸು ಅಸಾಧ್ಯ ಎಂದು ರವಿ ಡಿ.ಚನ್ನಣ್ಣನವರ್ ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆ ಬರೆದರೆ 10 ವರ್ಷಗಳ ಪ್ರಶ್ನೆ ಪತ್ರಿಕೆ ಅಭ್ಯಾಸ ಮಾಡುತ್ತೇನೆ. ಅನಂತರ ಸಾಮಾನ್ಯ ಜ್ಞಾನ ಪತ್ರಿಕೆಗೆ ಗಮನಹರಿಸುತ್ತೇನೆ. ಹಾಗೇ ಪುನರ್ ಅಧ್ಯಯನ ಮಾಡುತ್ತೇನೆ. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಈ ಸೂತ್ರ ಅವಶ್ಯ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರು ಸ್ವರ್ಗಕ್ಕೆ ದಾರಿಯಿದ್ದರೆ ನರಕದ ಮೂಲಕವೇ ಎಂದು ಹೇಳಿದ್ದಾರೆ. ಸಣ್ಣ ಹುದ್ದೆಗೆ ಸಣ್ಣ ಸಿದ್ಧತೆ, ದೊಡ್ಡ ಹುದ್ದೆಗೆ ದೊಡ್ಡ ಸಿದ್ಧತೆಬೇಕು. ಉತ್ತಮ ಸಮಾಜ ನಿರ್ಮಿಸುವ ಕನಸು ಹೊಂದಿದವರು ಉನ್ನತ ಹುದ್ದೆ ಪಡೆಯುವ ಗುರಿ ಹೊಂದಿರಬೇಕು ಎಂದು ರವಿ ಡಿ.ಚನ್ನಣ್ಣನವರ್ ಹುರಿದುಂಬಿಸಿದರು.
ಮುಕ್ತವಿವಿ ಕುಲಪತಿ ಪ್ರೊ.ಶರಣಪ್ಪವಿ ಹಲಸೆ ಮಾತನಾಡಿ, ಸಾಧನೆಗೆ ಅನೇಕ ಏಳುಬೀಳು ಇರುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಿದರೆ ಏನನ್ನಾದರೂ ಸಾಧಿಸಬಹುದು ಹಾಗಾಗಿ ಯಾರು ಬೇಕಾದರೂ ಯಶಸ್ಸುಗಳಿಸಬಹುದು ಎಂದರು. ನಿರಂತರ ಪ್ರಯತ್ನ, ಗಟ್ಟಿ ಮನಸ್ಸು ಮಾಡಿ ಅಧ್ಯಯನ ನಡೆಸಿದರೆ ಶ್ರಮಕ್ಕೆ ತಕ್ಕ ಫಲಿತಾಂಶ ಲಭಿಸುತ್ತದೆ. ಪೂರ್ವ ತಯಾರಿ ಆಧಾರದ ಮೇಲೆ ತಮ್ಮ ಅಧಿಕಾರ, ಸ್ಥಾನಮಾನಗಳು ದೊರೆಯುತ್ತದೆ ಎಂಬುದನ್ನು ಶಿಬಿರಾರ್ಥಿಗಳು ತಿಳಿಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಗಣೇಶ ಕೆ.ಜಿ ಕೊಪ್ಪಲು ಇದ್ದರು.
Key words: KSOU, DIG , Ravi D. Channannavar, Training camp