ಮೈಸೂರು: ನಾಯಕ ಸಮಾಜಕ್ಕೆ ಸೇರಿದ ಸಚಿವರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ವರ್ಷ ಕಳೆದ ಬೆನ್ನಲ್ಲೇ, ಈಗ ಸಚಿವ ಸಂಪುಟದಿಂದಲೇ ಹಿರಿಯ ನಾಯಕರನ್ನು ವಜಾ ಮಾಡಿದ ಪ್ರಕರಣ ರಾಜ್ಯ ರಾಜಕಾರಣದಲ್ಲಿ ದಾಖಲಾಗಿದೆ.
ಇದು ಒಂದರ್ಥದಲ್ಲಿ ನಾಯಕ ಸಮಾಜ ಅನ್ಯರ ಮಾತಿಗೆ ಕಿವಿಗೊಡದೆ ಸ್ವಂತ ಯೋಚನೆ ಮಾಡದಿದ್ದರೆ ಅಧಿಕಾರದಲ್ಲಿ ಉಳಿಯುವುದು ಕಷ್ಟ ಎನ್ನುವುದನ್ನು ಅರಿಯಬೇಕು. ಇಲ್ಲದಿದ್ದರೆ ಕೆ.ಎನ್.ರಾಜಣ್ಣ ಅವರಂತೆ ಸಚಿವ ಸ್ಥಾನದಿಂದ ಹೊರದಬ್ಬಿಸಿಕೊಂಡು ಬರುವುದು ಗ್ಯಾರಂಟಿ. ಇದು ಒಂದು ಪಕ್ಷದ ನಾಯಕರಿಗೆ ಸೀಮಿತವಾಗಿಲ್ಲ. ಎಲ್ಲಾ ಪಕ್ಷಗಳಲ್ಲಿರುವ ನಾಯಕ ಸಮಾಜದ ಮುಖಂಡರಲ್ಲಿ ಇರುವ ದೊಡ್ಡ ದೌರ್ಬಲ್ಯವಾಗಿದೆ.
ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಅಂದು ಸಿದ್ದರಾಮಯ್ಯ ಅವರ ವಿರುದ್ಧ ಮಾಡಿದ ಭಾಷಣ ಅರಗಿಸಿಕೊಳ್ಳಲಾಗದ ಸನ್ನಿವೇಶಕ್ಕೆ ಸಿಲುಕಿದರು. ಬೆಳಗಾವಿಯ ಸಾಹುಕಾರರ ಕುಟುಂಬಕ್ಕೆ ಸೇರಿದ ರಮೇಶ್ ಜಾರಕಿಹೊಳಿ “ಹನಿಟ್ರ್ಯಾಪ್ “ ಗೆ ಸಿಲುಕಿ ರಾಜೀನಾಮೆ ಕೊಡಬೇಕಾಯಿತು. ಅಂದು ರಾಜೀನಾಮೆ ಕೊಟ್ಟ ರಮೇಶ್ ಜಾರಕಿಹೊಳಿ ಬಿಜೆಪಿಯಲ್ಲಿ ಪ್ರಭಾವಿಯಾಗಿದ್ದರು ಕಳಂಕದಿಂದ ಹೊರ ಬರಲಾಗದ ಸ್ಥಿತಿಯಲ್ಲಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡ ಪರಿಣಾಮವಾಗಿ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ತೆರೆಮರೆ ನಾಯಕರನ್ನು ಕಾಪಾಡಲು ನಾಗೇಂದ್ರ ಶಿಕ್ಷೆ ಅನುಭವಿಸುವಂತಾಯಿತು ಎಂಬುದು ರಾಜಕೀಯ ಮೊಗಸಾಲೆ ಮಾತು.
ಈ ಮಂತ್ರಿ ಸ್ಥಾನವನ್ನು ತುಂಬುವಂತೆ ಒಂದು ವರ್ಷದಿಂದ ಕೇಳಿದರೂ ಇನ್ನು ತುಂಬಿಲ್ಲ. ಇದರಿಂದಾಗಿ ನಾಯಕ ಸಮಾಜಕ್ಕೆ ನಾಯಕತ್ವದ ಕೊರತೆ ಎದುರಿಸುವಂತಾಗಿದೆ. ಇದೀಗ ಕಾಂಗ್ರೆಸ್ ಹೈಕಮಾಂಡ್ ನಡೆ ಬಗ್ಗೆ ಮಾತನಾಡಿದ ಸಲುವಾಗಿ ಸಚಿವ ಸ್ಥಾನದಿಂದ ರಾಜಣ್ಣ ಅವರನ್ನು ಕೈಬಿಡಲಾಗಿದೆ ಎನ್ನಲಾಗಿದೆ.
ತಾವಾಡುವ ಮಾತುಗಳು ಸರ್ಕಾರ, ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಸಣ್ಣದೊಂದು ಅರಿವಿರಬೇಕಿತ್ತು. ಜತೆಗೆ, ನಮ್ಮನ್ನು ಹಣಿಯಲು ಕಾಯುತ್ತಿರುವ ವಿರೋಧಿಗಳಿಗೆ ಅವಕಾಶ ಕಲ್ಪಿಸಿಕೊಡಬಾರದು ಎಂಬ ಮುಂಜಾಗ್ರತೆ ಇರಬೇಕಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕೆ.ಎನ್. ರಾಜಣ್ಭ, ಮೇಲ್ವರ್ಗದ ನಾಯಕರ ವಕ್ರದೃಷ್ಟಿಗೆ ಸಿಲುಕಿದ್ದಲ್ಲದೆ, ಹೈಕಮಾಂಡ್ ಅವಕಾಶ ಕೊಟ್ಟರೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಹೊರಲು ನಾನು ಸಿದ್ಧ ಎಂದಿದ್ದರು.
ಆದರೆ, ಈಗ ವಿಪರ್ಯಾಸ ಎಂಬಂತೆ ಅವರೇ ಪಕ್ಷದಿಂದ ಹೊರಗೆ ನಿಲ್ಲಬೇಕಾಗಿದೆ. ನಾಯಕ ಸಮಾಜ ಈಗ ಎರಡು ಸಚಿವ ಸ್ಥಾನ ಕಳೆದುಕೊಂಡು ದೊಡ್ಡ ನಷ್ಟ ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಈ ಸ್ಥಾನವನ್ನು ನಾಯಕ ಸಮಾಜಕ್ಕೆ ಮೀಸಲಿಟ್ಟು ಪ್ರಾತಿನಿಧ್ಯ ನೀಡಬೇಕಾದರೂ ಅಂತಹ ಲಕ್ಷಣಗಳು ಕಾಣಿಸುತ್ತಿಲ್ಲ.
ಸಂಡೂರಿನ ಇ ತುಕರಾಮ್ ಅವರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಹಿರಿತನ ಹೋಗಿದೆ. ಈಗ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರನ್ನ ಪಕ್ಷ ಪರಿಗಣಿಸುತ್ತದೆಯೇ ಕಾದು ನೋಡಬೇಕಿದೆ.
- ಆರ್.ಕೆ.ನಾಯಕ್
key words: Minister Rajanna, dismissal case, “NAYAKA”
Minister Rajanna’s dismissal case: It’s time for political “NAYAKA’S” to introspect!