ಆ.16ರ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿಯಾಗದಿದ್ರೆ ಬೃಹತ್ ಹೋರಾಟ- ಸರ್ಕಾರಕ್ಕೆ ವಾರ್ನಿಂಗ್

ಮೈಸೂರು,ಆಗಸ್ಟ್,11,2025 (www.justkannada.in):  ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ತೀವ್ರ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ  ಆಗಸ್ಟ್ 18 ರಂದು ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ ನಡೆಸಲು  ಮಾದಿಗ ದಂಡೋರ ಹೋರಾಟ ಸಮಿತಿ ಮುಂದಾಗಿದೆ.

ಒಳ ಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವ ಸರ್ಕಾರ  ನಡೆಯನ್ನ ಖಂಡಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ  ಪ್ರತಿಭಟನೆಗೆ ಮುಂದಾಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಾದಿಗ ಮೀಸಲಾತಿ ಹೋರಾಟ ಸಮಿತಿ, ಸರ್ಕಾರ ಇದೇ ತಿಂಗಳ 16 ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಒಳ ಮೀಸಲಾತಿ ಘೋಷಣೆ ಮಾಡಬೇಕು. ಜಾರಿ ಮಾಡಿದರೆ ವಿಜಯೋತ್ಸವ ಆಚರಣೆ ಮಾಡುತ್ತೇವೆ.  ಇಲ್ಲ ಅಂದರೆ ಮಾದಿಗರ ಮಹಾಯುದ್ಧ ಆರಂಭವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಸರ್ಕಾರ ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಇದೇ ತಿಂಗಳ 18 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಬಿ ನರಸಪ್ಪ ನೇತೃತ್ವದಲ್ಲಿ ದೊಡ್ಡ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ನಮ್ಮ ಹಲವು ದಶಕಗಳ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಈಗಾಗಲೇ ಸರ್ಕಾರಕ್ಕೆ ಚಾಟಿ ಏಟು ಕೊಟ್ಟಿದೆ. ಆದರೂ ಒಳ ಮೀಸಲಾತಿ ಜಾರಿಗೆ  ಸರ್ಕಾರ ಇನ್ನೂ ಮೀನಾಮೇಷ ಎಣಿಸುತ್ತಿದೆ. ಈಗ ನ್ಯಾ.ನಾಗಮೋಹನ್ ದಾಸ್ ವರದಿ ಸಲ್ಲಿಕೆ ಮಾಡಿ ಒಂದು ವಾರ ಆಯಿತು. ಆದರೆ ಸರ್ಕಾರದವರು ಇನ್ನೂ ಜಾರಿ ಮಾಡೋದರಲ್ಲೇ ಇದ್ದಾರೆ. ಹೀಗಾಗಿ ಆಗಸ್ಟ್ 16ರ ವಿಶೇಷ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಒಳ ಮೀಸಲಾತಿ ಜಾರಿ ಮಾಡಬೇಕು ಮಾಡಿದರೆ ಅದನ್ನೇ ನಾವು ವಿಜಯೋತ್ಸವ ಎಂದು ಆಚರಿಸುತ್ತೇವೆ. ಇಲ್ಲ ಅಂದರೆ ಮಾದಿಗರ ಮಹಾ ಯುದ್ದವನ್ನು ನೋಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ವಾರ್ನಿಂಗ್ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾದಿಗ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಎಸ್ ರಾಮಕೃಷ್ಣ ಮಾದಿಗ, ಪ್ರಧಾನ ಕಾರ್ಯದರ್ಶಿ ದೇವರಾಜು, ಸೇರಿದಂತೆ ಹಲವರು ಭಾಗಿಯಾಗಿದ್ದರು.

Key words: internal reservation, implement, cabinet meeting , Warning, government