ಮೈಸೂರು,ಜುಲೈ,26,2025 (www.justkannada.in): ನಾಲ್ವಡಿ ಕೃಷ್ಣರಾಜ ಒಡೆಯರ್ ಗಿಂತ ಅಭಿವೃದ್ಧಿ ಮಾಡಿದ್ದು ಸಿದ್ದರಾಮಯ್ಯ ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಕಾಂಗ್ರೆಸ್ ಶಾಸಕ ಹರೀಶ್ ಗೌಡ ಸಮರ್ಥಿಸಿಕೊಂಡರೇ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಟೀಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಎಂಎಲ್ ಸಿ ಹೆಚ್. ವಿಶ್ವನಾಥ್, ಇದು ದುರಹಂಕಾರದ ಪರಮಾವಧಿ. ಸಿದ್ದರಾಮಯ್ಯ ಯಾವಾಗಲೂ ನಾನೇ ನಾನೇ ಅಂತಾರೆ. ದೇವರಾಜ ಅರಸುಗಿಂತ ನಾನೇ ಒಳ್ಳೇ ಆಡಳಿತ ಕೊಟ್ಟಿದ್ದು ಅಂತಾರೆ. ನಾನೇ ನಾನೇ ಎನ್ನುವ ಅಹಂ, ದುರಹಂಕಾರ ಸಿದ್ದರಾಮಯ್ಯ ಕುಟುಂಬದಲ್ಲಿ ವಂಶವಾಹಿ ರೀತಿ ಹರಿದು ಕೊಂಡು ಬಂದಿದೆ. ಸಿದ್ದರಾಮಯ್ಯ ಹಾಗೂ ಅವರ ಮಗ ಮನುಷ್ಯ ದ್ವೇಷಿಗಳು ಥರ ಮಾತಾಡುತ್ತಿದ್ದಾರೆ. ನಮ್ಮ ಕಡೆ ಈ ರೀತಿ ಮಾತಾಡುವವರಿಗೆ ಎಚ್ಎಂ ಎನ್ನುತ್ತಾರೆ. ಎಚ್ಎಂ ಅಂದರೆ ಹುಚ್ಚು ಮುಂಡೇದು ಅಂತಾ ಎಂದು ತಿರುಗೇಟು ಕೊಟ್ಟರು.
ದೇವರಾಜ್ ಅರಸು, ಎಸ್.ಎಂ ಕೃಷ್ಣ ಆಡಳಿತಕ್ಕೂ ಸಿದ್ದರಾಮಯ್ಯ ಆಡಳಿತ ಸಮವಿಲ್ಲ
ಯತೀಂದ್ರ ಸಿದ್ದರಾಮಯ್ಯ ಇನ್ನೂ ಬೆಳೆಯುವ ಹುಡುಗ ಈಗಲೇ ಈ ಥರದ ದುರಹಂಕಾರದ ಮಾತು ಸರಿಯಲ್ಲ. ನಾಲ್ವಡಿ ಆಡಳಿತ ಇರಲಿ. ದೇವರಾಜ್ ಅರಸು, ಎಸ್.ಎಂ ಕೃಷ್ಣ ಆಡಳಿತಕ್ಕೂ ಸಿದ್ದರಾಮಯ್ಯ ಆಡಳಿತ ಸಮವಿಲ್ಲ. ಸಿದ್ದರಾಮಯ್ಯ ಈ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನೂ ಅದನ್ನು ಮೊದಲು ಹೇಳಲಿ. ಮಹಾರಾಜರು ಅವರ ಅಪ್ಪನ ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡಿದ್ದಾರಾ ಎಂದು ಹಿಂದೇ ಸಿದ್ದರಾಮಯ್ಯ ಕೇಳಿದ್ದರು. ಸಿದ್ದರಾಮಯ್ಯ ಏನೂ ಈಗ ಅವರ ಅಪ್ಪನ ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡುತ್ತಿದ್ದಾರಾ? ಸಿದ್ದರಾಮಯ್ಯರ ಮಗ ಈ ದೌಲತ್ ಗಿರಿ ಮೊದಲು ಬಿಡಲಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಹೋಲಿಕೆ ಮಾಡುವ ಯಾವ ರಾಜಕಾರಣಿ ಈ ದೇಶದಲ್ಲೇ ಇಲ್ಲ ಎಂದು ಗುಡುಗಿದರು.
ಯತೀಂದ್ರ ಹೇಳಿಕೆ ಸಮರ್ಥಿಸಿಕೊಂಡ ಕಾಂಗ್ರೆಸ್ ಶಾಸಕ ಹರೀಶ್ ಗೌಡ.
ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿಕೊಂಡ ಕಾಂಗ್ರೆಸ್ ಶಾಸಕ ಹರೀಶ್ ಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಿಟ್ಟರೆ ಮೈಸೂರಿಗೆ ಸಾಕಷ್ಟು ಕೊಡುಗೆ ಕೊಟ್ಟಿರುವುದು ಸಿದ್ದರಾಮಯ್ಯನವರೆ ಆದರಲ್ಲಿ ತಪ್ಪೇನಿದೆ. ಮೈಸೂರಿಗೆ ಬಿಜೆಪಿಯವರ ಕೊಡುಗೆ ಏನು.? ಅವರು ನಮ್ಮ ಬಗ್ಗೆ ಮಾತನಾಡಲಿಕ್ಕೆ ಏನು ನೈತಿಕತೆ ಇದೆ ಅವರಿಗೆ. ನಾಲ್ವಡಿ ಕೃಷ್ಣರಾಜರ ನಂತರ ಮೈಸೂರಿಗೆ ಹಲವಾರು ಕೊಡುಗೆಗಳನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ಬೇರೆ ಏನು ಕೆಲಸ ಇಲ್ಲ ಅಂತ ಈ ರೀತಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
Key words: Mysore, Nalvadi krishnaraj wodeyar, Siddaramaiah, H.Vishwanath