ನವದೆಹಲಿ,ಜುಲೈ,17,2025 (www.justkannada.in): ಮಧ್ಯಪ್ರದೇಶದ ಇಂದೋರ್ ನಗರವು ಸತತ ಎಂಟನೇ ಬಾರಿಗೆ ದೇಶದ ನಂ.1 ಸ್ವಚ್ಛನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛಾ ಸರ್ವೇಕ್ಷಣಾ 2024-25ನೇ ಸಾಲಿನ ಸಮೀಕ್ಷೆಯಲ್ಲಿ ಇಂದೋರ್ ದೇಶದ ನಂಬರ್ ಒನ್ ಕ್ಲೀನ್ ಸಿಟಿ ಅವಾರ್ಡ್ ಪಡೆದಿದೆ. ಸ್ವಚ್ಛತಾ ಸಮೀಕ್ಷೆಯಲ್ಲಿ ಇಂದೋರ್ ಸತತ 8ನೇ ಬಾರಿಗೆ ಅಗ್ರಸ್ಥಾನ ಪಡೆದಿದೆ. ಗುಜರಾತ್ ನ ಸೂರತ್ ಎರಡನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರದ ನವಿ ಮುಂಬೈ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಚ್ಛ ಸರ್ವೇಕ್ಷಣ್ 2024-25 ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಸಾಂಸ್ಕೃತಿಕ ನಗರಿ ಮೈಸೂರಿಗೆ 8ನೇ ಸ್ಥಾನ
ಸ್ವಚ್ಛಾ ಸರ್ವೇಕ್ಷಣಾ 2024-25ನೇ ಸಾಲಿನ ಸಮೀಕ್ಷೆಯಲ್ಲಿ ಕರ್ನಾಟಕದ ಮೈಸೂರು ಪಟ್ಟಿಯ ಟಾಪ್ 10 ರಲ್ಲಿ ಕಾಣಿಸಿಕೊಂಡಿದೆ. 1 ಲಕ್ಷಕ್ಕೂ ಅಧಿಕ ಜನರು ವಾಸಿಸುವ ನಗರಗಳ ಪಟ್ಟಿಯಲ್ಲಿ ಅರಮನೆ ನಗರಿ 8ನೇ ಸ್ಥಾನ ಪಡೆದಿದೆ. ಈ ಹಿಂದೆ ಒಂದು ವರ್ಷ ಮಾತ್ರ ಮೈಸೂರು ನಗರವು ಸ್ವಚ್ಛತೆಯಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನ ಪಡೆದಿತ್ತು. 2016 ರಲ್ಲಿ ದೇಶದಲ್ಲಿಯೇ ನಂಬರ್ 1 ಸ್ಥಾನ ಪಡೆದಿದ್ದ ಮೈಸೂರು ಬಳಿಕ ಕುಸಿತ ಕಂಡಿತ್ತು. ಬಳಿಕ ಮೈಸೂರು ನಗರಕ್ಕೆ ನಂಬರ್ ಒನ್ ಕ್ಲೀನ್ ಸಿಟಿ ಪಟ್ಟ ಪಡೆಯಲು ಸಾಧ್ಯವಾಗಿಲ್ಲ. ಅದರಲ್ಲೂ 2023 ನೇ ಸಾಲಿನಲ್ಲಿ 27 ನೇ ಸ್ಥಾನ ಪಡೆದುಕೊಂಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈಗ 19 ಸ್ಥಾನ ಜಿಗಿದಿದೆ. ಇದೇ ಪಟ್ಟಿಯಲ್ಲಿ ಅವಳಿ ಜಿಲ್ಲೆಗಳಾದ ಹುಬ್ಬಳ್ಳಿ- ಧಾರವಾಡವು 82ನೇ ಕ್ರಮಾಂಕದಲ್ಲಿದೆ.
Key words: Cleanliness survey, Cleanest City, Indore, Mysore