ಮೈಸೂರು,ಜುಲೈ,2, 2025 (www.justkannada.in): ಹಾಸನ ಜನಕ್ಕೆ ಪ್ರತ್ಯೇಕವಾಗಿ ಏನೂ ಹಾರ್ಟ್ ಅಟ್ಯಾಕ್ ಆಗಲ್ಲ. ಹಾಸನ ಜನ ಪ್ಯಾನಿಕ್ ಗೆ ಒಳಗಾಗೋದು ಬೇಡ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸದಾನಂದ ಹೇಳಿದರು.
ರಾಜ್ಯದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಳ, ಹಲವೆಡೆ ಸರಣಿ ಸಾವು ಸಂಭವಿಸುತ್ತಿರುವ ಹಿನ್ನೆಲೆ ಭಯಭೀತರಾದ ಸಾರ್ವಜನಿಕರು. ಹೃದ್ರೋಗ ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ಈ ಮಧ್ಯೆ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಜನಜಂಗುಳಿ ತುಂಬಿದ್ದು ಸ್ವಯಂ ಪ್ರೇರಿತವಾಗಿ ಹೃದಯ ತಪಾಸಣೆಗೆ ಸಾರ್ವಜನಿಕರು ಮುಂದಾಗಿದ್ದಾರೆ.
ಸಾವಿರಾರು ಜನ ಹೊರ ರೋಗಿಗಳಾಗಿ ತಪಾಸಣೆಗೆ ಒಳಗಾಗಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವು ಭಾಗದಿಂದ ಸಾವಿರಾರು ಜನ ಜಯದೇವ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಹಾಸನದಲ್ಲಿ ಹೃದಯಾಘಾತದಿಂದ ಸರಣಿ ಸಾವು ಹಿನ್ನಲೆ ಆತಂಕಗೊಂಡ ಹಾನಸ ಜಿಲ್ಲೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಯದೇವೆ ಆಸ್ಪತ್ರೆಗೆ ಬರುತ್ತಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ತಪಾಸಣೆ ನಿರಂತರವಾಗಿ ನಡೆಯುತ್ತಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸದಾನಂದ, ಎದೆ ನೋವು ಕಾಣಿಸಿಕೊಂಡಾಗ ಮೈಸೂರಿಗೆ ಬರುವ ಅವಶ್ಯಕತೆ ಇಲ್ಲ. ಹತ್ತಿರದ ಆಸ್ಪತ್ರೆಗೆ ಹೋಗಿ ತೋರಿಸಿ. ಹೃದಯಾಘಾತ ಎಂದು ಖಚಿತ ಪಡಿಸಿಕೊಂಡು ಜಯದೇವ ಆಸ್ಪತ್ರೆಗೆ ಬನ್ನಿ ಎಂದು ಸಲಹೆ ನೀಡಿದ್ದಾರೆ.
ಇತ್ತೀಚಿಗೆ ಹಾಸನದಲ್ಲಿ ಸರಣಿ ಸಾವು ಹಿನ್ನಲೆ. ಹಾಸನ ಜಿಲ್ಲೆಯ ಜನರೇ ಜಯದೇವ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆಗೆ ಬರುತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿದಿನ 600 ರಿಂದ 700 ಜನ ತಪಾಸಣೆಗೆ ಬರ್ತಾ ಇದ್ರು ಆದರೆ, ಈಗ 1000 ಕ್ಕೂ ಹೆಚ್ಚು ಜನ ತಪಾಸಣೆಗೆ ಬರುತ್ತಿದ್ದಾರೆ. ನಮಗೂ ಕೂಡ ಒತ್ತಡ ಉಂಟಾಗುತ್ತದೆ. ಸಾವಿರಾರು ಜನ ಬಂದಾಗ ಇಲ್ಲಿ ಪರೀಕ್ಷೆ ಮಾಡಲು ಒತ್ತಡ ಆಗುತ್ತದೆ. ಪ್ರಯೋಗಾಲಯದ ಸಿಬ್ಬಂದಿ, ಯಂತ್ರಗಳಿಗೂ ಒತ್ತಡ ಉಂಟಾಗುತ್ತದೆ. ಸಾಧ್ಯವಾದಷ್ಟು ಸ್ಥಳೀಯ ತಾಲೂಕು ಆಸ್ಪತ್ರೆ ಕೇಂದ್ರಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಇದ್ದರೆ ಅಲ್ಲೇ ತಪಾಸಣೆ ಮಾಡಿಸಿಕೊಳ್ಳಿ ಎಂದು ಡಾ. ಸದಾನಂದ ತಿಳಿಸಿದ್ದಾರೆ.
ಬದಲಾದ ಜೀವನ ಶೈಲಿ, ಒತ್ತಡದ ಬದುಕೇ ಹೃದಯಾಘಾತಕ್ಕೆ ಪ್ರಮುಖರ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ 20 ರಿಂದ 40 ವರ್ಷದ ಯುವಕ ಯುವತಿಯರಿಗೂ ಹೃದಯಾಘಾತವಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ನಾವು ತಿನ್ನುವ ಆಹಾರ, ಜೀವನ ಶೈಲಿ, ಸೋಮಾರಿತನ ಅತೀಯಾದ ಮೊಬೈಲ್ ಬಳಕೆ, ನಿದ್ರಾಹೀನತೆ ಸೇರಿದಂತೆ ಹಲವು ಕಾರಣಗಿವೆ. ನಿಯಮಿತ ವ್ಯಾಯಮ, ಚಟುವಟಿಕೆಯ ಜೀವನ ಶೈಲಿ, ಉತ್ತಮ ಆಹಾರ ಪದ್ದತಿ ರೂಢಿಸಿಕೊಳ್ಳಬೇಕು. ಜಂಕ್ ಫುಡ್ ನಿಂದ ದೂರ ಇರಬೇಕು. ಪ್ರಸ್ತುತ ನಾವು ಸೇವಿಸುವ ಆಹಾರ ಕೂಡ ಸರಿಯಾಗಿಲ್ಲ. ಜನರು ಇದೆಲ್ಲದರಿಂದ ಎಚ್ಚೆತ್ತುಕೊಳ್ಳಬೇಕು ಎಂದು ಡಾ.ಸದಾನಂದ ಹೇಳಿದ್ದಾರೆ.
Key words: Heart attacks, Hassan, People, Panic, Jayadeva Hospital, Dr. Sadanand