ಬೆಂಗಳೂರು,ಜೂನ್,3,2025 (www.justkannada.in): ತಮಿಳಿನಿಂದ ಕನ್ನಡ ಹುಟ್ಟಿದು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಈಗ ಥಗ್ಸ್ ಲೈಫ್ ಸಿನಿಮಾ ಬಿಡುಗಡೆಗೆ ಭದ್ರತೆ ಕೋರಿ ರಿಟ್ ಅರ್ಜಿ ಸಲ್ಲಿಸಿರುವ ನಟ ಕಮಲ್ ಹಾಸನ್ ಗೆ ಹೈಕೋರ್ಟ್ ತೀವ್ರ ತರಾಟೆ ತೆಗೆದು ಕೊಂಡಿದೆ.
ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ರಾಜ್ಯದಲ್ಲಿ ಥಗ್ಸ್ ಲೈಫ್ ಸಿನಿಮಾ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಹೀಗಾಗಿ ನಟ ಕಮಲ್ ಹಾಸನ್ ಸಿನಿಮಾ ಬಿಡುಗಡೆಗಾಗಿ ಭದ್ರತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಇದೀಗ ನಟ ಕಮಲ್ ಹಾಸನ್ ಗೆ ಫುಲ್ ಕ್ಲಾಸ್ ತೆಗೆದುಕೊಂಡಿದೆ. ಕಮಲ್ ಹಾಸನ್ ಸಾಮಾನ್ಯ ವ್ಯಕ್ತಿಯಲ್ಲ ಪಬ್ಲಿಕ್ ಫಿಗರ್. ಈ ರೀತಿ ಹೇಳಿಕೆ ನೀಡಬಾರದು. ಆದರೆ ಕನ್ನಡಿಗರ ಕ್ಷಮೆ ಕೇಳದೆ ದುರ್ವರ್ತನೆ ತೋರಿದ್ದೀರಿ . ಕ್ಷಮೆ ಕೇಳಿದ ನಂತರ ಅರ್ಜಿ ಪರಿಗಣನೆ ಮಾಡುತ್ತೇವೆ ಎಂದು ನ್ಯಾಯಪೀಠ ತಿಳಿಸಿದೆ.
ರಾಜ್ಯದಲ್ಲಿ ಕನ್ನಡ ಭಾಷೆ ಪ್ರಮುಖವಾದದ್ದು. ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಈಗ ಸಿನಿಮಾ ಬಿಡುಗಡೆಗೆ ಭದ್ರತೆ ಕೋರುತ್ತಿದ್ದೀರಿ. ಸಿ ರಾಜಗೋಪಾಲಚಾರಿ ಇದೇ ರೀತಿ ಹೇಳಿದ್ದರು. ನಂತರ ಅವರು ಕ್ಷಮೆ ಕೇಳಿದ್ದರು ನಿಮ್ಮ ಹೇಳಿಕೆಯಿಂದ ಶಿವರಾಜ್ ಕುಮಾರ್ ಸಮಸ್ಯೆ ಅನುಭವಿಸುವಂತಾಗಿದೆ. ಇವತ್ತಿನ ಈ ಪರಿಸ್ಥಿತಿಗೆ ಕಮಲ್ ಹಾಸನ್ ಕಾರಣ. ಈ ಪರಿಸ್ಥಿತಿ ನೀವೇ ನಿರ್ಮಾಣ ಮಾಡಿ ಈಗ ಭದ್ರತೆ ಕೋರುತ್ತಿದ್ದಾರಾ. ನಿಮ್ಮ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕೆ..? 300 ಕೋಟಿ ಸಿನಿಮಾ ಅಂತೀರಾ ಕ್ಷಮೆ ಕೇಳಿ. ಬೇರೆಯವರ ಭಾವನೆಗಳಿಗೆ ಧಕ್ಕೆ ತಂದು ಸಿನಿಮಾ ಬಿಡುಗಡೆ ಮಾಡುತ್ತೀರಾ..? ಎಂದು ನಟ ಕಮಲ್ ಹಾಸನ್ ವಿರುದ್ದ ನ್ಯಾಯಪೀಠ ಕೆಂಡ ಕಾರಿದೆ.
ನಾನು ಸಿನಿಮಾ ನೋಡಲು ಬಯಸಿದ್ದೆ ಆದರೆ ಈ ವಿವಾದದಿಂದ ನೋಡಲು ಸಾಧ್ಯವಿಲ್ಲ
ಹಾಗೆಯೇ ನಿಮ್ಮ ಹೇಳಿಕೆ ನಿರಾಕರಿಸಿಲ್ಲ ಒಪ್ಪಿಕೊಂಡಿದ್ದೀರಿ. ನಾನು ಥಗ್ ಲೈಫ್ ಸಿನಿಮಾ ನೋಡಲು ಬಯಸಿದ್ದೆ ಆದರೆ ಈ ವಿವಾದದಿಂದ ನೋಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
Key words: High Court, actor, Kamal Haasan, without, apologizing, Kannada