ಚಿತ್ರದುರ್ಗ,ಮೇ,17,2025 (www.justkannada.in): ತುಮಕೂರಿನಿಂದ ಶಿರಾ, ಚಿತ್ರದುರ್ಗ ಮಾರ್ಗವಾಗಿ ದಾವಣಗೆರೆಗೆ ಹೊಸದಾಗಿ ನಿರ್ಮಾಣವಾಗಲಿರುವ ರೈಲ್ವೆ ಬ್ರಾಡ್ ಗೇಜ್ ಮಾರ್ಗದೊಂದಿಗೆ ಪ್ರತ್ಯೇಕ ಸರಕು ಸಾಗಣೆ ಮಾರ್ಗವನ್ನು ಕೂಡ ನಿರ್ಮಿಸಬೇಕು ಎಂದು ಶಿರಾ ಶಾಸಕ ಹಾಗೂ ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿರುವ ಟಿ.ಬಿ.ಜಯಚಂದ್ರ ಅವರು ಶನಿವಾರ ಹೇಳಿದ್ದಾರೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಯೋಜನೆ ಕಾಮಗಾರಿ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅವರು ಹೀಗೆ ಹೇಳಿದರು
ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ರಾಜ್ಯ ಯೋಜನೆ ಹಾಗೂ ಸಾಂಖ್ಯಿಕ ಸಚಿವ ಸುಧಾಕರ್, ಚಳ್ಳಕೆರೆ ಶಾಸಕ ರಘುಮೂರ್ತಿ ಅವರ ಉಪಸ್ಥಿತಿಯಲ್ಲಿ ಈ ಸಂಬಂಧ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ ಅವರು, ತುಮಕೂರಿನಿಂದ ಶಿರಾ ಮೂಲಕ ಚಿತ್ರದುರ್ಗದವರೆಗೆ ರೈಲ್ವೆ ಸರಕು ಸಾಗಣೆ ಮಾರ್ಗ ನಿರ್ಮಾಣದಿಂದ ಸುತ್ತಮುತ್ತಲ ಭಾಗದ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಮಾರುಕಟ್ಟೆ ವ್ಯವಸ್ಥೆಗೆ ತುಂಬಾ ಅನುಕೂಲವಾಗುತ್ತದೆ ಎಂದರು.
ರಾಷ್ಟ್ರೀಯ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಯೋಜನೆಗಳ ಭಾಗವಾಗಿ ತುಮಕೂರು ಸುತ್ತಮುತ್ತ ಆಹಾರೋದ್ಯಮಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲು ಉದ್ದೇಶಿಸಲಾಗಿದೆ. ಜೊತೆಗೆ, ಮಧ್ಯ ಕರ್ನಾಟಕ ಭಾಗದಲ್ಲಿ 30 ಮಿನಿ ಫುಡ್ ಪಾರ್ಕ್ ಗಳನ್ನು ನಿರ್ಮಿಸುವ ಪ್ರಸ್ತಾವವೂ ಇದೆ. ಶಿರಾ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಪರಿಶೀಲಿಸಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ, ತುಮಕೂರು-ಶಿರಾ-ಚಿತ್ರದುರ್ಗ ನಡುವೆ ಪ್ರತ್ಯೇಕ ಸರಕು ಸಾಗಣೆ ರೈಲ್ವೆ ಮಾರ್ಗ ನಿರ್ಮಾಣವು ಅತ್ಯಂತ ಸೂಕ್ತ ನಿರ್ಧಾರವಾಗಲಿದ್ದು, ಈ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ಜಯಚಂದ್ರ ಅವರು ವಿವರಿಸಿದರು.
ಕೇಂದ್ರ ಸರ್ಕಾರವು ದೇಶದ ಪೂರ್ವ ಭಾಗವನ್ನು ಸಂಪರ್ಕಿಸುವ ಪ್ರತ್ಯೇಕ ಸರಕು ಸಾಗಣೆ ರೈಲ್ವೆ ಮಾರ್ಗ ನಿರ್ಮಿಸಿದ ನಂತರ ಪಂಜಾಬ್ ಮತ್ತು ಹರ್ಯಾಣದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಅದೇ ರೀತಿ ತುಮಕೂರು-ಚಿತ್ರದುರ್ಗ ಪ್ರತ್ಯೇಕ ಸರಕು ಸಾಗಣೆ ಮಾರ್ಗ ನಿರ್ಮಿಸಿದರೆ ಈ ಪ್ರದೇಶದಲ್ಲೂ ಕೃಷಿ ಆಧರಿತ ಉದ್ಯಮಗಳು ಹಾಗೂ ಇತರ ಕೈಗಾರಿಕೆಗಳಿಗೆ ಪ್ರಯೋಜನವಾಗಲಿದೆ ಎಂದರು.
Key words: Tumkur, Chitradurga, freight railway line, Union Minister, Somanna, TB Jayachandra