Wednesday, September 2, 2026

BDA Apartments

Home Front Page ಗ್ಯಾರಂಟಿ ಅನುಷ್ಟಾನ ಸಮಿತಿಯ ‘ಕೈ’ ಕಾರ್ಯಕರ್ತರಿಗೆ ಸರ್ಕಾರದ ಸಂಬಳ: ಸದನದಲ್ಲಿ ವಿಪಕ್ಷಗಳಿಂದ ತೀವ್ರ ಆಕ್ರೋಶ

ಗ್ಯಾರಂಟಿ ಅನುಷ್ಟಾನ ಸಮಿತಿಯ ‘ಕೈ’ ಕಾರ್ಯಕರ್ತರಿಗೆ ಸರ್ಕಾರದ ಸಂಬಳ: ಸದನದಲ್ಲಿ ವಿಪಕ್ಷಗಳಿಂದ ತೀವ್ರ ಆಕ್ರೋಶ

ಬೆಂಗಳೂರು,ಮಾರ್ಚ್,11,2025 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಮೇಲುಸ್ತುವಾರಿ ನೋಡಿಕೊಳ್ಳಲು ಶಾಸಕ ಎಚ್.ಎಂ ರೇವಣ್ಣ ನೇತೃತ್ವದಲ್ಲಿ ರಚಿಸಿರುವ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಸದಸ್ಯರಿಗೆ ಸರ್ಕಾರದ ಸಂಬಳ ನೀಡುತ್ತಿರುವುದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.

ಹೌದು, ಸರ್ಕಾರದ ಹಣವನ್ನ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಬಳವಾಗಿ ನೀಡುತ್ತಿರುವುದಕ್ಕೆ ಸದನದಲ್ಲಿ ವಿಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಇಂದು ತುರುವೇಕೆರೆ ಶಾಸಕ ಎಂಟಿ ಕೃಷ್ಣಪ್ಪ ಈ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಬಳ ನೀಡುತ್ತಿರೋದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಈ ವೇಳೆ ಶಾಸಕ ಸುನಿಲ್ ಕುಮಾರ್ ಕೂಡ ಅದಕ್ಕೆ ಧ್ವನಿಗೂಡಿಸಿದರು.  ಈ ವೇಳೆ ಸದನದಲ್ಲಿ ಮಾತನಾಡಿದ  ವಿಧಾನಸಭೆ ವಿಪಕ್ಷ ನಾಯಕ ಆರ್​.ಅಶೋಕ್, ಡಿ.ಕೆ. ಶಿವಕುಮಾರ್ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್​ಗೂ ಸರ್ಕಾರಕ್ಕೂ ವ್ಯತ್ಯಾಸವೇ ಇಲ್ಲದಾಗಿದೆ. ಇಲ್ಲಿರುವ ದುಡ್ಡು ತಗೊಂಡು ಅಲ್ಲಿ ಹೋಗಿ ಹಂಚೋದು. ರಾಜ್ಯದ ಜನರ ತೆರಿಗೆ ಹಣ, ನಮ್ಮ ದುಡ್ಡು. ಕಾಂಗ್ರೆಸ್ ​​ನವರಿಗೆ ಧೈರ್ಯವಿದ್ದರೆ ಭಿಕ್ಷೆ ಬೇಡಿ, ದುಡ್ಡು ಕೊಡಲಿ ಎಂದು ಕಿಡಿಕಾರಿದರು.

ಯಾವ ಆಧಾರದ ಮೇಲೆ‌ ನೇಮಕಾತಿ ಮಾಡ್ತೀರಾ? ಅವರನ್ನು ಏನು ಅರ್ಹತೆ ಇದೆ ಅಂತಾ ನೇಮಕ ಮಾಡಿ ಸೌಲಭ್ಯ ಕೊಡುತ್ತೀರಾ? ಬೇಕಿದ್ದರೇ ಕಾಂಗ್ರೆಸ್ ಪಾರ್ಟಿಯಿಂದ ಹಣ ಕೊಡಿ. ಸರ್ಕಾರದ ಹಣವನ್ನು ಪೋಲು ಮಾಡಬೇಡಿ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಯಾವ ಮುಖ್ಯಮಂತ್ರಿಯೂ, ಯಾವ ಕಾಂಗ್ರೆಸ್ ಅಧ್ಯಕ್ಷನೂ ಈ ಕೆಲಸ ಮಾಡಿಲ್ಲ. ಮನೆ ಹಾಳು ಕೆಲಸ ಮಾಡುತ್ತಿರುವುದು ಇವರು ಮಾತ್ರನೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಚ್ ಎಂ ರೇವಣ್ಣ ನೇತೃತ್ವದಲ್ಲಿ ರಚನೆಯಾಗಿರುವ ಗ್ಯಾರಂಟಿ ಅನುಷ್ಟಾನ ಸಮಿತಿ ಗ್ಯಾರಂಟಿ ಯೋಜನೆ ಅನುಷ್ಟಾನದ  ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. ಗ್ಯಾರಂಟಿ ಅನುಷ್ಟಾನ ಸಮಿತಿ  ಸದಸ್ಯರಿಗೆ ಸರ್ಕಾರದಿಂದಲೇ 25 ರಿಂದ 40 ಸಾವಿರ ರೂ. ಸಂಬಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು ಇದಕ್ಕೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥನೆ

ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಸಮರ್ಥಿಸಿಕೊಂಡ ಡಿಸಿಎಂ ಡಿಕೆ ಶಿವಕುಮಾರ್, 52 ಸಾವಿರ ಕೋಟಿ ಯೋಜನೆ ಅನುಷ್ಟಾನ ಸುಲಭವಲ್ಲ ಹೀಗಾಗಿ ಸಮಿತಿ ರಚನೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

Key words: Government, salary, congress workers, guarantee , session