ಅನರ್ಹ ಶಾಸಕರಿಗೆ ಸಚಿವ ಸ್ಥಾನ ಮತ್ತು ತಮಗೆ ಮಂತ್ರಿಗಿರಿ ಕೈತಪ್ಪಿದ ಕುರಿತು  ಶಾಸಕ ರಾಮದಾಸ್ ಪ್ರತಿಕ್ರಿಯಿಸಿದ್ದು ಹೀಗೆ…?

ಮೈಸೂರು,ಆ,29,2019(www.justkannada.in):  ಸಮ್ಮಿಶ್ರ ಸರ್ಕಾರ ಬೀಳಲು ಕಾರಣರಾದವರು ನಮ್ಮ ಅತಿಥಿಗಳು. ಅನಿರೀಕ್ಷಿತ ಅತಿಥಿಗಳಿಗೆ ಆದ್ಯತೆ ನೀಡಬೇಕು. ಅನರ್ಹ ಶಾಸಕರಿಗೆ ಸಚಿವ ಸ್ಥಾನ  ನೀಡುವ ಅವಶ್ಯಕತೆ ಇದೆ ಎಂದು ಬಿಜೆಪಿ ಶಾಸಕ ಎಸ್.ಎ ರಾಮದಾಸ್ ತಿಳಿಸಿದ್ದಾರೆ.

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಶಾಸಕ ಎಸ್.ಎ ರಾಮದಾಸ್ ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು. ಇದಕ್ಕೆ ಸಾಕ್ಷಿಯಂತೆ ದಸರಾ ಕಾರ್ಯಕಾರಿ ಸಮಿತಿ ಸಭೆ ಮತ್ತು ಗಜಪಡೆ ಸ್ವಾಗತ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಇದೀಗ ಶಾಸಕ ರಾಮದಾಸ್ ಅವರು ಕಾಣಿಸಿಕೊಂಡಿದ್ದು , ಸಚಿವರ ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದಕ್ಕೆ ನನಗೆ ಬೇಸರವಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ರಾಮದಾಸ್, ಪರಿಸ್ಥಿತಿ ಒಂದೇ ರೀತಿ ಇರುತ್ತೆ ಎಂದು ಹೇಳಲು ಆಗಲ್ಲ. ಸರ್ಕಾರ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿಲ್ಲ. ಮೊದಲ ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿತ್ತು ಎಂದು ಹೇಳಲಾಗಿತ್ತು. ಆದರೆ ನನ್ನ ಹೆಸರು ಇಲ್ಲದಿದ್ದಕ್ಕೆ ನನಗೆ ಅಸಮಾಧಾನವಿಲ್ಲ. ಮುಂದಿನ ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿರುತ್ತದೆ ಎಂದು ನೀರಿಕ್ಷಿಸಿಲ್ಲ. ನಾನು  ಕಸ ಗುಡಿಸಲೂ ಸಿದ್ಧ ಕುರ್ಚಿ ಮೇಲೆ ಕೂರಲೂ ಸಿದ್ಧ ಎಂದರು.

ಹಾಗೆಯೇ ಸಚಿವ ವಿ.ಸೋಮಣ್ಣ ಸಂಪರ್ಕಿಸಲು ಯತ್ನಿಸಿದ ಕುರಿತು ಪ್ರತಿಕ್ರಿಯಿಸಿದ ಶಾಸಕ ರಾಮದಾಸ್,  ಯಾರೂ ನನ್ನನ್ನ ಸಂಪರ್ಕಿಸುವ ಅವಶ್ಯಕತೆ ಇಲ್ಲ. ನಾನೇ ಅವರನ್ನ ಸಂಪರ್ಕಿಸುತ್ತೇನೆ  ಎಂದರು.

Key words: Ministerial- position –mysore-bjp- MLA- Ramdas -reaction