Wednesday, August 12, 2026

BDA Apartments

Home Front Page ಪಕ್ಷ ಸಂಘಟನೆ ವಿಷಯದಲ್ಲಿ ಕೆಲ ಕಠಿಣ ಕ್ರಮ: ಜಿಲ್ಲಾ, ತಾಲ್ಲೂಕು ಘಟಕಗಳಲ್ಲಿ ಸೂಕ್ತ ಬದಲಾವಣೆ- ಮಾಜಿ...

ಪಕ್ಷ ಸಂಘಟನೆ ವಿಷಯದಲ್ಲಿ ಕೆಲ ಕಠಿಣ ಕ್ರಮ: ಜಿಲ್ಲಾ, ತಾಲ್ಲೂಕು ಘಟಕಗಳಲ್ಲಿ ಸೂಕ್ತ ಬದಲಾವಣೆ- ಮಾಜಿ ಸಿಎಂ ಹೆಚ್.ಡಿಕೆ.

ಬೆಂಗಳೂರು,ಜೂನ್,9,2023(www.justkannada.in):  ಮುಂಬರುವ ಲೋಕಸಭೆ ಚುನಾವಣೆ ಹಾಗೂ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ಸಂಕಲ್ಪದೊಂದಿಗೆ ಪಕ್ಷ ಸಂಘಟನೆ ವಿಷಯದಲ್ಲಿ ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಾಲ್ಕನೇ ದಿನವೂ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಉತ್ತರ ಕನ್ನಡ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ಜಿಲ್ಲಾ ಮುಖಂಡರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಪಕ್ಷದ ಪದಾಧಿಕಾರಿಗಳನ್ನು ಮುಲಾಜಿಲ್ಲದೆ ಬದಲಾವಣೆ ಮಾಡುತ್ತೇವೆ. ಯುವಜನರಿಗೆ ಆದ್ಯತೆ ನೀಡುತ್ತೇವೆ. ಪಕ್ಷ ಕಟ್ಟುವ ಎಲ್ಲಾ ಉತ್ಸಾಹಿಗಳಿಗೆ ಅವಕಾಶ ಕೊಡುತ್ತೇವೆ. ಬದ್ಧತೆಯಿಂದ ಕೆಲಸ ಮಾಡುವವರಿಗೆ ಅವಕಾಶ ನೀಡಲಾಗುವುದು. ಮುಂದಿನ ಚುನಾವಣೆಗಳನ್ನು ಜಿಲ್ಲಾ, ತಾಲೂಕು, ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಎಲ್ಲಾ ಹಂತದಲ್ಲೂ ಬದಲಾವಣೆ ಖಚಿತ ಎಂದು ಹೇಳಿದರು.

ಪಕ್ಷವನ್ನು ಮತ್ತೆ ಕಟ್ಟುತ್ತೇವೆ. ಎದೆಗುಂದುವ ಪೈಕಿ ನಾವಲ್ಲ. ಬದ್ಧತೆ, ಪಕ್ಷ ಕಟ್ಟುವ ಛಲ, ಪ್ರಾಮಾಣಿಕ ಕಾರ್ಯಕರ್ತರಿಗೆ ಅವಕಾಶ ಕೊಡಲಾಗುವುದು. ನಾನು ರಾಜ್ಯದ ಉದ್ದಗಲಕ್ಕೂ ಸಂಚಾರ ಮಾಡುತ್ತೇನೆ. ಜಿಲ್ಲೆಗಳಲ್ಲಿ ಸಭೆ ಮಾಡಿ ಜಿಲ್ಲಾ ಘಟಕಗಳಿಗೆ ಸರಿಯಾದ ಚಿಕಿತ್ಸೆ ಕೊಡಲಾಗುವುದು. ಪಕ್ಷ ಸಂಘಟನೆ ಮಾಡದಿರುವ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಬದಲಾವಣೆ ಮಾಡುತ್ತೇವೆ. ಚುನಾವಣೆಗೆ ಸಮರ್ಥ ಅಭ್ಯರ್ಥಿಗಳನ್ನು ತಯಾರು ಮಾಡಲಾಗದವರನ್ನು ಬದಲಾವಣೆ ಮಾಡಲಾಗುವುದು ಎಂದು ಹೆಚ್.ಡಿ  ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಪಕ್ಷದಲ್ಲಿ ನಾಯಕರಾಗಿ ಬೆಳೆಯುವ ಯುವಜನರಿಗೆ ಅವಕಾಶ ಕೊಡುತ್ತೇವೆ. ಮುಂದಿನ ದಿನಗಳಲ್ಲಿ ಯುವ ಜನರನ್ನು ಪಕ್ಷಕ್ಕೆ ಹೆಚ್ಚು ಹೆಚ್ಚಾಗಿ ಸೆಳೆಯಲಾಗುವುದು ಎಂದ ಅವರು, ಪದಾಧಿಕಾರಿ ಆದಾಕ್ಷಣ, ಶಾಸಕರಾದಕ್ಷಣ, ಮಂತ್ರಿ ಆದಾಕ್ಷಣ ನಾಯಕರಾಗಿ ಬೆಳೆಯಲಾಗದು. ಜನರ ಜತೆ ಇದ್ದು ಹೋರಾಟ ನಡೆಸಿದರೆ ಮಾತ್ರ ನಾಯಕರಾಗುತ್ತೇವೆ ಎಂದು  ಜಿಲ್ಲಾಧ್ಯಕ್ಷರುಗಳಿಗೆ ಮಾಜಿ ಸಿಎಂ ಹೆಚ್.ಡಿಕೆ ಕಿವಿಮಾತು ಹೇಳಿದರು.

ಸಂಘಟನೆ ಬಗ್ಗೆ ನಿರ್ಲಕ್ಷ್ಯ ಸಲ್ಲ, ಅಂಥವರಿಗೆ ಅವಕಾಶ ಇಲ್ಲ. ಎಷ್ಟು ದಿನಾ ಅಂತ ಇಂಥವರನ್ನು ಸಹಿಸಿಕೊಳ್ಳುವುದು. ಬದಲಾವಣೆಗೆ ಇದು ಸೂಕ್ತ ಸಮಯ. ಹಿರಿಯರು ಕೂಡ ಕಿರಿಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.

ಮಾಜಿ ಸಚಿವ ಬಂಡೆಪ್ಪ ಕಾಶೇಂಪೂರ್, ಶಾಸಕರಾದ ನೇಮಿರಾಜ್ ನಾಯಕ್, ರಾಜುಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಸೇರಿದಂತೆ ಆಯಾ ಜಿಲ್ಲೆಗಳ ಅಧ್ಯಕ್ಷರು, ಹಿರಿಯ ನಾಯಕರು, ಶಾಸಕರು, ಅಭ್ಯರ್ಥಿಗಳು ಭಾಗಿಯಾಗಿದ್ದರು.

Key words: JDS- party -organization: Appropriate- changes –Former CM-H.D kumaraswamy