ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ? ಪೊಲೀಸ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಮೇ,23,2023(www.justkannada.in): ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ?  ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ತರಾಟೆ ತೆಗೆದುಕೊಂಡರು.

ಹಿರಿಯ ಪೊಲೀಸ್ ಅಧಿಕಾರಿಗಳ  ಜೊತೆ ಸಭೆ ನಡೆಸಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಮಂಗಳೂರಿನಲ್ಲಿ ಪೊಲೀಸರೇ ಕೇಸರಿ ಶಾಲು ಹಾಕುತ್ತೀರಿ ಅಂದರೆ ಹೇಗೆ? ಈ‌ ಸಭೆಗೂ ಕೇಸರಿ ಶಾಲು ಹಾಕಿಕೊಂಡ ಬರಬೇಕಾಗಿತ್ತು.ನಮ್ಮ ಸರ್ಕಾರದಲ್ಲಿ ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ನಾವು ಬಿಡುವುದಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದರು.

ಕಳೆದ 4 ವರ್ಷ ನೀವು ಸರ್ಕಾರದಲ್ಲಿ ಏನು ಮಾಡಿದ್ದೀರಿ ಎಂಬುದು ಗೊತ್ತಿದೆ. ನಿಮ್ಮ ಆ ವರ್ತನೆ ನಮ್ಮ ಸರ್ಕಾರದಲ್ಲಿ ನಡೆಯಲಾರದು. ನನ್ನ,‌ ಸಿದ್ದರಾಮಯ್ಯರ ಜೊತೆ ಹೇಗೆ ನಡೆದುಕೊಂಡಿದ್ದೀರಿ ಗೊತ್ತಿದೆ. ಉರಿಗೌಡ, ನಂಜೇಗೌಡ ಪ್ರಕರಣದಲ್ಲಿ ‌ಏನಾಯ್ತು ಎಂಬುದು ಗೊತ್ತಿದೆ. ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಅಂದರೂ ಅವರ ಮೇಲೆ ಕೇಸ್ ಹಾಕಿಲ್ಲ ನೀವು. ಅಷ್ಟು ದೊಡ್ಡ ಪ್ರಕರಣ ಆದರೂ ಕೇಸ್ ಹಾಕದೇ ನಮ್ಮ ವಿರುದ್ಧ ನಡೆದುಕೊಂಡಿದ್ದಿರಿ. ಇವೆಲ್ಲ ನಮ್ಮ ಸರ್ಕಾರದಲ್ಲಿ ನಡೆಯಲ್ಲ.ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಾವು ನಿಮ್ಮ ಜೊತೆ ಇರುತ್ತೇವೆ. ಈ ಸರ್ಕಾರದ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ, ಅದನ್ನ ಉಳಿಸಿಕೊಳ್ಳಿ ಎಂದು ಹಿರಿಯ ಅಧಿಕಾರಿಗಳಿಗೆ ಡಿಕೆಶಿ ಸೂಚನೆ ನೀಡಿದರು.

ಪಿಎಸ್​ಐ ಅಕ್ರಮದಲ್ಲಿ ಒಬ್ಬ ಎಡಿಜಿಪಿ ಪೇಪರ್ ತಿದ್ದುತ್ತಾರೆ ಅಂದರೆ ಇಲಾಖೆ ಎಷ್ಟು ಕೆಟ್ಟು ಹೋಗಿದೆ ಎಂಬುದು ತಿಳಿಯುತ್ತದೆ. ಪೊಲೀಸ್ ಇಲಾಖೆ ಘನತೆಯನ್ನು ನೀವು ಹಾಳು‌ ಮಾಡಿದ್ದೀರಿ. ಇದನ್ನು ನಾವು ಸಹಿಸುವುದಿಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲವೂ ಸ್ವಚ್ಛವಾಗಿರಬೇಕು. ಜನ ದೊಡ್ಡ ಬದಲಾವಣೆ ನಿರೀಕ್ಷೆ ಮಾಡಿದ್ದಾರೆ. ಅದರಂತೆ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ಆಗಬೇಕು ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words:  police -department DCM- DK Shivakumar – class-police officers