ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಟೀಕೆ: ಪಂಚರತ್ನ ಯೋಜನೆಯನ್ನು ರಾಜ್ಯದ ಜನರು ಸ್ವೀಕರಿಸಿದ್ದಾರೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಮೈಸೂರು,ಮಾರ್ಚ್,21,2023(www.justkannada.in): ಕಾಂಗ್ರೆಸ್ ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ.ಅದು ಡ್ಯುಪ್ಲಿಕೆಟ್ ಕಾರ್ಡ್. ನಮ್ಮ ಪಂಚರತ್ನ ಯೋಜನೆಯನ್ನು ರಾಜ್ಯದ ಜನರು ಸ್ವೀಕರಿಸಿದ್ದಾರೆ. ಪಂಚರತ್ನದ ಯೋಜನೆ ಮೂಲಕ ರಾಜ್ಯದಲ್ಲಿ ರಾಮರಾಜ್ಯ ಪ್ರಾರಂಭವಾಗುವ ವಿಶ್ಲೇಷಣೆ ಶುರುವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಮಾರ್ಚ್ 26ರಂದು ಮೈಸೂರಿನಲ್ಲಿ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭ ಹಿನ್ನಲೆ. ಮೈಸೂರಿನ ಉತ್ತನಹಳ್ಳಿ ಹಳ್ಳಿ ಸಮೀಪ ಭರದಿಂದ ಸಾಗಿದ ಬೃಹತ್ ವೇದಿಕೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ ವೀಕ್ಷಣೆ ಮಾಡಿದರು. ಮಾಜಿ ಸಿಎಂ ಹೆಚ್ ಡಿಕೆಗೆ ಶಾಸಕರಾದ ಜಿ ಟಿ ದೇವೇಗೌಡ, ಸಾರಾ ಮಹೇಶ್, ಅಶ್ವಿನ್ ಕುಮಾರ್, ವಿಧಾನಪರಿಷತ್ ಸದಸ್ಯ ಮಂಜೇಗೌಡ ಸಾಥ್ ನೀಡಿದರು.

ಬಳಿಕ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಆಶೀರ್ವಾದ ಮಾಡಲಿ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ನಡೆಯುತ್ತದೆ. ಸುಮಾರು 100 ಎಕರೆಯಲ್ಲಿ ಒಂದು ಐತಿಹಾಸಿಕ ಕಾರ್ಯಕ್ರಮ ಮಾಡಲು ಸಿದ್ಧತೆ ನಡೆದಿದೆ. ಈ ಒಂದು ಕಾರ್ಯಕ್ರಮವನ್ನ ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಲಿಕ್ಕೆ ಎಲ್ಲರು ಸಹ ಕೈಜೋಡಿಸಿ ಕೆಲಸ ಪ್ರಾರಂಭ ಮಾಡಿದ್ದಾರೆ. ನಮ್ಮ ನಿರೀಕ್ಷೆ ಈ ಒಂದು ಕಾರ್ಯಕ್ರಮಕ್ಕೆ ಅತ್ಯಂತ ಜನ ಬೆಂಬಲವನ್ನ ನೀಡಿದ್ದಾರೆ. ಪಂಚರತ್ನ ಯಾತ್ರೆಗೆ ಆಶೀರ್ವಾದ ಮಾಡಿದ್ದಾರೆ. ಅಂತಿಮವಾಗಿ ಈ ಕಾರ್ಯಕ್ರಮದಲ್ಲಿ 10ಲಕ್ಷ ಜನರ ಸಮಾವೇಶಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಒಂದು ಕಾರ್ಯಕ್ರಮ 2023ರ ಚುನಾವಣೆ ಪ್ರಚಾರಕ್ಕೂ ಸಾಕ್ಷಿಯಾಗಲಿದೆ ಎಂದರು.

ಬಿಜೆಪಿಯವರ ವಿಜಯ ಸಂಕಲ್ಪ ಯಾತ್ರೆಗೆ ಜನರನ್ನ ಕರೆ ತರಲು ಸರ್ಕಾರಿ ಅಧಿಕಾರಿಗಳನ್ನ ಬಳಸಿಕೊಂಡಿದ್ದಾರೆ.

2009-10ರಲ್ಲಿ ನಾನು ಲೋಕಸಭಾ ಸದಸ್ಯನಾಗಿದ್ದೇನೆ. ಆಗ ಮನೆ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದೆವು. ಆದರೆ ಇಂದಿಗೂ ಸಹ ಬಯಲುಮುಕ್ತ ಶೌಚಾಲಯದಲ್ಲಿ ಎಷ್ಟು ಹಿಂದೆ ಬಿದ್ದಿದ್ದೇವೆ ಎಂಬುದನ್ನ ಉತ್ತರ ಕರ್ನಾಟಕದಲ್ಲಿ ಕಾಣಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಭೇಟಿ ನೀಡಿದ್ದಾಗ ನಾನೆ ನೇರವಾಗಿ ಮಹಿಳೆಯರು,ಆ ಭಾಗದ ಜನತೆಯ ಜೊತೆ ಚರ್ಚೆ ಮಾಡಿದ್ದೇನೆ. ನನ್ನ ಬಳಿ ಅನೇಕ ಜನರು ಬರುತ್ತಾರೆ. ಆರೋಗ್ಯ, ಶಿಕ್ಷಣ, ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ಬರುತ್ತಾರೆ. ಆರೋಗ್ಯ, ಶಿಕ್ಷಣ, ಕೃಷಿ, ಶೌಚಾಲಯ, ಈ ಯೋಜನೆಗಳಿಗೆ ಪಂಚರತ್ನ ಯೋಜನೆ ಜಾರಿಗೆ ತಂದಿರುವುದು. ದಿನನಿತ್ಯ ಬಿಜೆಪಿಯವರು ಹಲವಾರು ಜಾಹಿರಾತನ್ನ ನೀಡುತ್ತಿದ್ದಾರೆ. ಈಗಿನ ಸರ್ಕಾರದ ನ್ಯೂನತೆಗಳ ಬಗ್ಗೆ ಎಲ್ಲಿಯೂ ನಾನು ಚರ್ಚೆ ಮಾಡಿಲ್ಲ. ನಾನು ನನ್ನ ಕಾರ್ಯಕ್ರಮದ ಮೂಲಕ ದಿನನಿತ್ಯ ನೂರಾರು ಕಿಲೋಮೀಟರ್ ಸಂಚಾರ ನಡೆಸಿದ್ದೇನೆ. ನಾಡಿನ ಜನತೆಯ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೇನೆ. ಜನರ ಮತ ಕೇಳಲು ಸುಳ್ಳು ಭರವಸೆ ನೀಡುತ್ತಾರೆ ಎಂದು ಕಾಂಗ್ರೆಸ್ ಬಿಜೆಪಿಯವ್ರು ನನ್ನ ಮೇಲೆ ಆರೋಪ ಮಾಡ್ತಾರೆ. ಕಾಂಗ್ರೆಸ್ ನ ಯಾವುದೇ ಕಾರ್ಯಕ್ರಮವನ್ನ ನಾನು ನಿಲ್ಲಿಸಿಲ್ಲ. ಕಾಂಗ್ರೆಸ್ ನವರ ಅನೇಕ ಯೋಜನೆಗಳಿಗೆ ನಾನು ಹಣ ಮೀಸಲಿಟ್ಟಿದ್ದೆ. ಬಿಜೆಪಿಯವರ ವಿಜಯ ಸಂಕಲ್ಪ ಯಾತ್ರೆಗೆ ಜನರನ್ನ ಕರೆ ತರಲು ಸರ್ಕಾರಿ ಅಧಿಕಾರಿಗಳನ್ನ ಬಳಸಿಕೊಂಡಿದ್ದಾರೆ ಎಂದು ಹೆಚ್.ಡಿಕೆ ಆರೋಪ ಮಾಡಿದರು.

ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿ ಕಾರ್ಡ್ ಬಗ್ಗೆ ವ್ಯಂಗವಾಡಿದ ಮಾಜಿ ಸಿಎಂ ಹೆಚ್ ಡಿಕೆ, ಅದು ಗ್ಯಾರಂಟಿ ಕಾರ್ಡ್ ಅಲ್ಲ ಡೂಪ್ಲಿಕೇಟ್ ಕಾರ್ಡ್. ಅದಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಹಿ ಬೇರೆ ಹಾಕಿದ್ದಾರೆ. ಈ ಎಲ್ಲಾ ಯೋಜನೆಗಳಿಗೆ 25ಸಾವಿರ ಕೋಟಿ ಬೇಕು. ಆ ದುಡ್ಡನ್ನ ಎಲ್ಲಿಂದ ಹೊಂದಿಸುತ್ತಾರೆ ಎಂದು  ಪ್ರಶ್ನಿಸಿದರು.

ಈ ಭಾರಿ ರಾಜ್ಯದ ಜನ ಪ್ರಾದೇಶಿಕ ಪಕ್ಷವನ್ನ ಬೆಂಬಲಿಸುತ್ತಾರೆ. ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮ ಯಶಸ್ವಿಯಾಗಲಿ. ನಮ್ಮ ಶಾಸಕರು,ನಾಯಕರ ಮೇಲೆ ತಾಯಿ ಅನುಗ್ರಹ ಬೀಳಲಿ ಎಂದೇ ಕಾರ್ಯಕ್ರಮ ಇಲ್ಲಿ ಮಾಡುತ್ತಿದ್ದೇವೆ ಎಂದರು.

ಏಪ್ರಿಲ್ ಮೊದಲ ವಾರದಲ್ಲಿ ಚುನಾವಣಾ ದಿನಾಂಕದ ನಿರೀಕ್ಷೆ ಇದೆ. ಪಂಚರತ್ನ ಯೋಜನೆಯನ್ನು ರಾಜ್ಯದ ಜನರು ಸ್ವೀಕರಿಸಿದ್ದಾರೆ. ಪಂಚರತ್ನದ ಯೋಜನೆ ಮೂಲಕ ರಾಜ್ಯದಲ್ಲಿ ರಾಮರಾಜ್ಯ ಪ್ರಾರಂಭವಾಗುವ ವಿಶ್ಲೇಷಣೆ ಶುರುವಾಗಿದೆ. ದಲಿತರ ಹಿಂದುಳಿದವರಿಗೆ ಬಜೆಟ್ ನಲ್ಲಿ ಏನೇನೋ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿವೆ. ಮನೆಗಳನ್ನ ನಿರ್ಮಾಣ ಮಾಡುವುದು ಹಾಗೂ ಸಂಪೂರ್ಣ ರಾಜ್ಯದ್ಯಂತ ನಿರ್ಮಾಣವಾಗಿದೆ ಎಂದು ಬಿಂಬಿತವಾಗಿದೆ. ಇದು ಪೇಪರ್ ನಲ್ಲಿ ಇರುವ ದಾಖಲೆ ಅಷ್ಟೇ. ಇನ್ನೂ ಸಹ ಲಕ್ಷಾಂತರ ಕುಟುಂಬಕ್ಕೆ ಮನೆ ಸೌಲಭ್ಯವೆ ಇಲ್ಲ. ರಾಜ್ಯದ ಪ್ರವಾಸದಲ್ಲಿ  ನಾನೇ ಗಮನಿಸಿದ್ದೇನೆ. ಕಳೆದ ಎಂಟತ್ತು ವರ್ಷದಲ್ಲಿ ಶಿಕ್ಷಣ, ಕೃಷಿ, ಆರೋಗ್ಯ ಸಮಸ್ಯೆ ಇರುವ ಜನರು ನನ್ನನ್ನು ನಿರಂತರ ಸಂಪರ್ಕಿಸುತ್ತಿದ್ದಾರೆ. ಇದನ್ನ ಮನಗಂಡು ಪಂಚರತ್ನ ಕಾರ್ಯಕ್ರಮದಲ್ಲಿ ಅಳವಡಿಸಿದ್ದೇವೆ ಎಂದು ಹೆಚ್.ಡಿಕೆ ವಿವರಿಸಿದರು.

ಪಂಚರತ್ನ ಯೋಜನೆ ಜಾರಿಗೆ 2.50 ಲಕ್ಷ ಕೋಟಿ ರೂ.ಹಣ ಬೇಕು.  ನನ್ನ ಗುರಿ,ಕನಸು ಸಾಕಾರಗೊಳಿಸಲು ಅವಕಾಶ ಇದೆ.  ಕಾಂಗ್ರೆಸ್ ನಾಯಕರು ನಾಲ್ಕನೇ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ಅದಕ್ಕೆ ಬಿಜೆಪಿಯವರು ಟೀಕೆ, ಪ್ರಶ್ನೆ ಮಾಡಿದ್ದಾರೆ.  ಎರಡೂ ಪಕ್ಷಗಳು ಟೀಕೆಗೆ ಮೀಸಲಾಗಿದ್ದಾರೆ.  ನಾನು ದಿನಕ್ಕೆ 100 ಕಿ.ಮೀ. ಪ್ರವಾಸ ಮಾಡಿದ್ದೇನೆ.  ನನ್ನ ಯೋಜನೆಗೆ ಒಂದು ಅವಕಾಶ ಕೊಡಿ ಅಂತ ಕೇಳಿದ್ದೇನೆ.‌ ಬಹುಮತದ ಸರ್ಕಾರ ಬಾರದೆ ಇದ್ದರೂ ಮುಖ್ಯಮಂತ್ರಿಯಾದೆ. 37 ಶಾಸಕರನ್ನು ಇಟ್ಟುಕೊಂಡು ಕಾಂಗ್ರೆಸ್ ಭಾಗ್ಯಗಳನ್ನು ಮುಂದುವರಿಸಿದೆ.  ಇದರ ನಡುವೆಯೂ ಸಾಲಮನ್ನಾ ಮಾಡಿದೆ.  ವಿಜಯ ಸಂಕಲ್ಪ ಯಾತ್ರೆಗೆ ಫಲಾನುಭವಿಗಳನ್ನು ಕರೆದುಕೊಂಡು ಬರುತ್ತಿದ್ದಾರೆ.  ಸರ್ಕಾರದ ಅಧಿಕಾರಿಗಳ ಮೂಲಕ ಜನ ಕರೆಸುತ್ತಿದ್ದಾರೆ. ಬಿಜೆಪಿಯವರು ಈಗಲೂ ರೈತರ ಸಾಲಮನ್ನಾ ಯೋಜನೆಗೆ 1800 ಕೋಟಿ ರೂ. ಕೊಟ್ಟಿಲ್ಲ. ನನ್ನ ಕಾರ್ಯಕ್ರಮ ಸರ್ಕಾರದ ಆದಾಯ ಹೆಚ್ಚಿಸುವ ಕಾರ್ಯಕ್ರಮ‌.  ಒಂದು ಅವಧಿಯ ಸರ್ಕಾರ ಕೊಡಿ ಅಂತ ಕೇಳುತ್ತಿದ್ದೇನೆ ಎಂದು  ಹೆಚ್.ಡಿ.ಕುಮಾರಸ್ವಾಮಿ  ಮವನಿ ಮಾಡಿದರು.

ಉರಿಗೌಡ ನಂಜೇಗೌಡ ಚರ್ಚೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಹುಡುಗಾಟಿಕೆ ಆಡುತ್ತಿದ್ದವರಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬುದ್ದಿ ಹೇಳಿದ್ದಾರೆ. ಇದಕ್ಕಾಗಿ ನಾನು ಶ್ರೀಗಳನ್ನು ಅಭಿನಂದಿಸುತ್ತೇನೆ. ಈ ಬಗ್ಗೆ ನಾನು ಸಹಾ ಏನು ಮಾತನಾಡುವುದಿಲ್ಲ ಎಂದರು.

ಚಿತ್ರ ನಟ,ನಟಿಯರಿಗೆ ಕ್ಷೇತ್ರ ಬೇಕಿಲ್ಲ: ನಾನು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ.

ರಾಜ್ಯ ರಾಜಕಾರಣಕ್ಕೆ ನಟಿ ರಮ್ಯಾ ಎಂಟ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ,  ಚಿತ್ರ ನಟ,ನಟಿಯರಿಗೆ ಕ್ಷೇತ್ರ ಬೇಕಿಲ್ಲ. ಸಹಜವಾಗಿ ಜನಪ್ರಿಯತೆ ಇರುತ್ತೆ. ನನ್ನ ಸಹೋದರಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡುತ್ತಾರೆ ಅಂತಿದ್ದಾರೆ.  ಮೂರಲ್ಲ,ಮೂವತ್ತು ಕ್ಷೇತ್ರದಲ್ಲಿ ಬೇಕಾದರೂ ಪ್ರಸ್ತಾಪ ಮಾಡಬಹುದು. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.  ಯಾರ್ಯಾರೋ ವದಂತಿ ಹಬ್ಬಿಸುತ್ತಿದ್ದಾರೆ.  ಸಂಸದರು ಮಂಡ್ಯದಿಂದ ಸ್ಪರ್ಧಿಸಿದರೆ ನಾನು ಅರ್ಜಿ ಹಾಕುತ್ತೇನೆ ಅಂತಲೂ ಹೇಳುತ್ತಿದ್ದಾರೆ. ನಾನು ಚನ್ನಪಟ್ಟಣದಿಂದ ಸ್ಪರ್ಧೆ ಮಾಡುತ್ತೇನೆ. ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಪ್ರಶ್ನೆಯೂ ಇಲ್ಲ.  ಅದೆಲ್ಲ ಊಹಾಪೋಹ ಅಷ್ಟೆ ಎಂದು ಸ್ಪಷ್ಟನೆ ನೀಡಿದರು.

Key words: mysore-Former CM-HD kumaraswamy- pancharatna-plan