ನಾಗಲೋಟದಲ್ಲಿ ದೇಶದ ಪ್ರಗತಿ : ಭಾರತದತ್ತ ನೆರೆಯ ರಾಷ್ಟ್ರಗಳ ಚಿತ್ತ – ಸ್ವಾತಂತ್ರ್ಯ ಹೋರಾಟಗಾರ ಟಿ.ಪುಟ್ಟಣ್ಣ.

ಮೈಸೂರು,ಆಗಸ್ಟ್ ,15,2022(www.justkannada.in): ಬ್ರಿಟೀಷರ ದಾಸ್ಯದ ಸಂಕೋಲೆಯಿಂದ ಮುಕ್ತವಾದ ಬಳಿಕ  ಭಾರತ ದೇಶದ ಪ್ರಗತಿ ನಾಗಾಲೋಟದಲ್ಲಿ ಸಾಗಿದ್ದು, ನೆರೆಯ ದೇಶಗಳ ಚಿತ್ತ ಭಾರತದತ್ತ ನೆಟ್ಟಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಪುಟ್ಟಣ್ಣ ಹೇಳಿದರು.

ಪೊಲೀಸ್ ಬಡಾವಣೆ ಮೂರನೇ ಹಂತದ ಶ್ರೀ ಚಾಮುಂಡೇಶ್ವರಿ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಇಂದು ಭಾರತ ದೇಶ ಎಲ್ಲಾ ಕ್ಷೇತ್ರದಲ್ಲಿ ಮುಂದುವರಿದಿದೆ. ನೆರೆಯ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಸ್ವಾವಲಂಬನೆ ಸಾಧಿಸಿದೆ. ಕೃಷಿ, ವಾಣಿಜ್ಯ, ಶಿಕ್ಷಣ, ಆರ್ಥಿಕ, ಔದ್ಯಮಿಕ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಪ್ರಗತಿ ಸಾಗಿದೆ. ಈ‌ ಬೆಳವಣಿಗೆಯ ಹಿಂದೆ ಜವಹರಲಾಲ್ ನೆಹರು, ಪಿ.ವಿ. ನರಸಿಂಹರಾವ್, ನರೇಂದ್ರ ಮೋದಿ ಸೇರಿದಂತೆ ಎಲ್ಲರ ಶ್ರಮ ಇದೆ ಎಂದು ತಿಳಿಸಿದರು.

ಪ್ರಗತಿಯತ್ತ ಸಾಗುತ್ತಿರುವ ಈ ದೇಶದ ಹೆಣ್ಣುಮಕ್ಕಳು ಇಂದು ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುವ ಮಟ್ಟದಲ್ಲಿ ಬೆಳೆದಿದ್ದಾರೆ. ಇದು ನಾವೆಲ್ಲರೂ ಹೆಮ್ಮೆಪಡಬೇಕಾದ ವಿಷಯ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಕುಮಾರ್, ಶಿವರಾಮು, ರಾಜಶೇಖರ್, ಐಶ್ವರ್ಯ ಸೋಮಶೇಖರ್, ಶಿವಣ್ಣ, ಸಿದ್ದರಾಮಪ್ಪ, ಲಕ್ಷ್ಮೀಪತಿ, ಮಲ್ಲೇಶಯ್ಯ, ಗಣೇಶ್, ಸತೀಶ್ ಗೌಡ, ಸಿದ್ದೇಶ್, ಸ್ವಾಮಿ , ರವಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

ಇದೇ ವೇಳೆ 2021-22ನೇ ಸಾಲಿನಲ್ಲಿ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎಲ್. ಪ್ರತೀಕ್ಷಾ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎಲ್. ಗಗನ್ ಅವರುಗಳನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಪುಟ್ಟಣ್ಣ ಅವರು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.

Key words: 75th Independence Day-mysore- Freedom fighter -T. Puttanna