ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ 7 ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು.

ಗುಂಡ್ಲುಪೇಟೆ,ಜುಲೈ,27,2023(www.justkannada.in): ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ 7 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಗರಗನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.

ಕಳೆದ ವಾರ ಯಡವನಹಳ್ಳಿ‌ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಚಿಕನ್ ಊಟ ಸೇವಿಸಿ ಅಸ್ವಸ್ಥರಾಗಿದ್ದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಪ್ರಕರಣ ನಡೆದಿದೆ. ಗರಗನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಏಳು ವಿದ್ಯಾರ್ಥಿಗಳು ಬೆಳಗಿನ ತಿಂಡಿ ಸೇವಿಸಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗುರುವಾರ ಬೆಳಗಿನ ತಿಂಡಿ ಟೋಮ್ಯಾಟೋ ಬಾತ್ ಅನ್ನು ಮಕ್ಕಳಿಗೆ ನೀಡಲಾಗಿತ್ತು. ಟೋಮ್ಯಾಟೋ ಬಾತ್ ಸೇವಿಸಿದ ನಂತರ  ವರ್ಣಿತ(13), ಹರ್ಷಿತಾ(13), ಪ್ರಿಯ(13), ರಚನಾ(15), ಸಂಜನಾ(15), ಸಂಗೀತ (13), ಪ್ರಜ್ವಲ್(15) ಎಂಬ ಏಳು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಕೂಡಲೇ ಸಮೀಪದ ಹೊರೆಯಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಜ್ವಲ್ ಎಂಬ ವಿದ್ಯಾರ್ಥಿಗೆ ಹೊಟ್ಟೆ ನೋವು ಹೆಚ್ಚು ಕಾಣಿಸಿಕೊಂಡ ಹಿನ್ನಲೆ ಆತನನ್ನು ಬೇಗೂರು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸದ್ಯ ವಸತಿ ಶಾಲೆ ಪ್ರಾಂಶುಪಾಲ ಲೋಕೇಶ್ ಹಾಗೂ ಬೇಗೂರು ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಘಟನೆಯಲ್ಲಿ ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಈ ಘಟನೆ ವಸತಿ ಶಾಲೆಯ ಆಡಳಿತ ವೈಖರಿ ಮತ್ತು ಅನೈರ್ಮಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಘಟನೆಗೆ ವಿದ್ಯಾರ್ಥಿ ಪೋಷಕರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: 7 children- sick – eating- contaminated food – residential school