ಮಳೆಯಬ್ಬರ, 7 ಸೇತುವೆ ಮುಳುಗಡೆ

ಬೆಳಗಾವಿ/ಬೆಂಗಳೂರು:ಆ-1: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಬುಧವಾರವೂ ವರುಣನ ಅಬ್ಬರ ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಮುಳುಗಡೆಯಾದ ಸೇತುವೆಗಳ ಸಂಖ್ಯೆ ಏಳಕ್ಕೆ ಏರಿದೆ.

ಐದು ಸೇತುವೆಗಳು ಮಂಗಳವಾರವೇ ಮುಳುಗಡೆ ಹಂತದಲ್ಲಿದ್ದು, ಬುಧವಾರ ಇನ್ನೆರಡು ಸೇತುವೆಗಳು ಮುಳುಗಿವೆ.

ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 1.8 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ನೀರನ್ನು ಹಿಪ್ಪರಗಿ ಜಲಾಶಯದಿಂದ ಹೊರಬಿಡಲಾಗುತ್ತಿದೆ. ಒಳಹರಿವಿನ ಪ್ರಮಾಣ 2 ಲಕ್ಷ ಕ್ಯೂಸೆಕ್ ದಾಟಿದರೆ, ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಲಿದೆ. ಸುರಕ್ಷಿತ ಸ್ಥಳಗಳಿಗೆ ತೆರಳಲು ಜನರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಮಂಗಳವಾರ ರಾತ್ರಿ 2.1 ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ದೇವದುರ್ಗದ ಕೊಪ್ಪರ ನರಸಿಂಹ ದೇವಸ್ಥಾನ ಮತ್ತು ಹೂವಿನಹೆಡಗಿ ಸೇತುವೆ ಮುಳುಗುವ ಹಂತ ತಲುಪಿವೆ.

ಮುಂಜಾಗ್ರತೆ ಕ್ರಮವಾಗಿ ಸೇತುವೆ ಮೇಲೆ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ಉಳಿದಂತೆ ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡಿದ್ದು, ಆ.4ರ ನಂತರ ಮತ್ತೆ ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆ.2ರಿಂದ 4ರವರೆಗೆ ಮಳೆ ನಿರೀಕ್ಷಿಸಲಾಗಿದೆ.

ಮೋಡಬಿತ್ತನೆಗೆ ಇಂದು ಅಧಿಕೃತ ಚಾಲನೆ

ಹುಬ್ಬಳ್ಳಿ: ರಾಜ್ಯ ಸರ್ಕಾರದ ವರ್ಷಧಾರೆ ಯೋಜನೆಯಡಿ ಉತ್ತರ ಕರ್ನಾಟಕ ಭಾಗದಲ್ಲಿ ಮೋಡ ಬಿತ್ತನೆಗೆ ಗುರುವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 1 ಗಂಟೆಗೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಹಾಗೂ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅಧಿಕೃತ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿಶೇಷ ವಿಮಾನ ಬುಧವಾರ ಪೂರ್ವಭಾವಿಯಾಗಿ ಬಾಗಲಕೋಟೆ ಭಾಗದಲ್ಲಿ ಮೋಡ ಬಿತ್ತನೆ ಮಾಡಿ ವಾಪಸಾಗಿದೆ.
ಕೃಪೆ:ವಿಜಯವಾಣಿ

ಮಳೆಯಬ್ಬರ, 7 ಸೇತುವೆ ಮುಳುಗಡೆ
7-bridges-sink-due-to-rain