ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ: ಮಳಿಗೆಗಳಿಗೆ ಬೀಗ ಹಾಕುವಂತಿಲ್ಲ- ಸರ್ಕಾರಕ್ಕೆ ಹೈಕೋರ್ಟ್ ಸೂಚನೆ.

ಬೆಂಗಳೂರು, ಮಾರ್ಚ್​​ 18,2024(www.justkannada.in):  ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯವೆಂಬ ಸರ್ಕಾರದ ಸುತ್ತೋಲೆ ಪಾಲಿಸದ ಮಳಿಗೆಗಳಿಗೆ ಬೀಗ ಹಾಕುವಂತಿಲ್ಲ ಎಂದು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಈ ಸಂಬಂಧ ಮಳಿಗೆಗಳ ಸಂಘದಿಂದ ಹೈಕೋರ್ಟ್ ಗೆ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ವಿಚಾರಣೆ ನಡೆಸಿದರು. ಈ ಕುರಿತು ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ಹೊರಡಿಸಿದ್ದು, ನಿಯಮ ಪಾಲಿಸದ  ವಾಣಿಜ್ಯ ಸಂಸ್ಥೆಗಳ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಸೂಚನೆ ನೀಡಿದೆ. ಹಾಗೆಯೇ ಕರ್ನಾಟಕದಲ್ಲಿ ವ್ಯಾಪಾರ ಮಾಡುವಾಗ ಕನ್ನಡ ನಾಮಫಲಕವಿರಬೇಕು ಎಂದು ಹೈಕೋರ್ಟ್ ತಿಳಿಸಿದೆ.

ಶೇಕಡಾ 60ರಷ್ಟು ಕನ್ನಡ ನಾಮಫಲಕ ಹಾಕಿದರೆ ಸಮಸ್ಯೆ ಏನು ಎಂದು ಮಳಿಗೆಗಳ ಸಂಘದ ಪರ ವಕೀಲರಿಗೆ ನ್ಯಾ.ಎಂ.ನಾಗಪ್ರಸನ್ನ ಪ್ರಶ್ನೆ ಮಾಡಿದರು.

‘ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022’ ಜಾರಿ ಸಮರ್ಪಕವಾಗಿಲ್ಲ. ಜಾರಿಯ ದಿನಾಂಕದ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿಲ್ಲ. ಡಿಜಿಟಲ್ ನಾಮಫಲಕಗಳನ್ನು ಬದಲಿಸಲು ಕಾಲಾವಕಾಶ ಬೇಕು. ನಾಮಫಲಕದಲ್ಲಿ ಶೇ.60ರಷ್ಟು ಕನ್ನಡವಿಲ್ಲದಿದ್ದರೆ ಮುಚ್ಚಲಾಗುತ್ತಿದೆ ಎಂದು ಸರ್ಕಾರದ ಸುತ್ತೋಲೆ ಪ್ರಶ್ನಿಸಿ ವ್ಯಾಪಾರಿಗಳ ಸಂಘದಿಂದ ವಾದ ಮಂಡಿಸಲಾಯಿತು.

ಕಾಯ್ದೆ ಜಾರಿ ಬಗ್ಗೆ ಗೆಜೆಟ್ ಆಧಿಸೂಚನೆ ವಿವರ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಸೂಚನೆ ನೀಡಿದೆ.

Key words: 60% Kannada – nameplates– High Court – Govt.